ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ತಿ ಸಾಲ: ಒಂದೇ ಬಾರಿ ಇತ್ಯರ್ಥಕ್ಕೆ ಸಮ್ಮತಿ

ರೈತರಿಂದ ಖಾಲಿ ಚೆಕ್‌ಗಳಿಗೆ ಸಹಿ: ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳಿಗೆ ತರಾಟೆ
Last Updated 7 ನವೆಂಬರ್ 2018, 18:16 IST
ಅಕ್ಷರ ಗಾತ್ರ

ಬೆಳಗಾವಿ: ಸುಸ್ತಿ ಸಾಲವನ್ನು ಒಂದೇ ಬಾರಿಗೆ ಇತ್ಯರ್ಥಗೊಳಿಸಲು (ಒನ್‌ ಟೈಮ್‌ ಸೆಟ್ಲಮೆಂಟ್‌) ರೈತರಿಗೆ ಅವಕಾಶ ಕಲ್ಪಿಸುವುದಕ್ಕೆ ಆಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ಒಪ್ಪಿದ್ದಾರೆ.

ಬ್ಯಾಂಕಿನಿಂದ ಸಾಲ ಪಡೆದಿರುವ ಕೆಲವು ರೈತರಿಗೆ ಕೋಲ್ಕತ್ತ ನ್ಯಾಯಾಲಯದಿಂದ ಬಂಧನ ವಾರಂಟ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ, ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೀಡಿದ ಕೆಲ ಸೂಚನೆಗಳಿಗೆ ಬ್ಯಾಂಕ್‌ ಅಧಿಕಾರಿಗಳು ಸಮ್ಮತಿಸಿದರು.

‘ಬ್ಯಾಂಕುಗಳು, ಸಾಲ ವಸೂಲಾತಿ ನೆಪದಲ್ಲಿ ರೈತರಿಗೆ ತೊಂದರೆ ಕೊಡಬಾರದು. ಮುಂದಿನ ದಿನಗಳಲ್ಲಿ ರೈತರ ಸಾಲ ವಸೂಲಿಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕ್‌ ತೀರ್ಮಾನಿಸಿದ್ದರೆ ತಕ್ಷಣವೇ ಆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು. ಖಾಲಿ ಚೆಕ್‌ಗಳಿಗೆ ರೈತರಿಂದ ಸಹಿ ಮಾಡಿಸಿಕೊಂಡ ಬಗ್ಗೆಯೂ ತರಾಟೆಗೆ ತೆಗೆದುಕೊಂಡರು.

ಆಕ್ಸಿಸ್‌ ಬ್ಯಾಂಕ್ ಉಪಾಧ್ಯಕ್ಷ ಪ್ರಶಾಂತ ಶಾ ಮಾತನಾಡಿ, ‘ಸರ್ಕಾರದ ನಿರ್ದೇಶನದ ಮೇರೆಗೆ, ರೈತರ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಬ್ಯಾಂಕಿನ ಕಾನೂನು ತಂಡದ ಜತೆ ಸಮಾಲೋಚಿಸಿ ಪ್ರಕರಣದ ವ್ಯಾಪ್ತಿ ಬದಲಾಯಿಸಲು ನ್ಯಾಯಾಲಯವನ್ನೂ ಕೋರಲಾಗುವುದು’ ಎಂದರು.

ಸಾಲ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಆಯಾ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರ ಸಮ್ಮುಖದಲ್ಲಿ ತಾಲ್ಲೂಕುವಾರು ನಡೆಸುವ ಸಭೆಯ ದಿನಾಂಕಗಳನ್ನೂ ಪ್ರಕಟಿಸಿದರು.

‘ಸಭೆ ಬಗ್ಗೆ ಎಲ್ಲ ರೈತರಿಗೂ ಪ್ರತ್ಯೇಕ ತಿಳಿವಳಿಕೆ ಪತ್ರಗಳನ್ನು ಮನೆ ವಿಳಾಸಕ್ಕೆ ಕಳುಹಿಸಬೇಕು. ಸಾಲದ ಮೊತ್ತ, ಬಾಕಿ ಮೊತ್ತ ಹಾಗೂ ರೈತರು ಕಟ್ಟಬೇಕಾಗಿರುವ ಮೊತ್ತವನ್ನು ನಮೂದಿಸಬೇಕು. ದೊರೆಯಬಹುದಾದ ಕಾಲಾವಕಾಶ ಮತ್ತು ವಿನಾಯಿತಿ ಬಗ್ಗೆಯೂ ಮುಂಚಿತವಾಗಿ ತಿಳಿಸಬೇಕು’ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT