ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಧಿಕಾರಿಗಳಿಂದಲೇ ಬ್ಯಾಂಕಿಗೆ ಕನ್ನ!

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಹುಕ್ಕೇರಿ ಶಾಖೆ: ಸಾಲ ರೂಪದಲ್ಲಿ ₹1.73 ಕೋಟಿ ಅವ್ಯವಹಾರ
Last Updated 9 ನವೆಂಬರ್ 2022, 10:16 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕಿನ ಹುಕ್ಕೇರಿ ಶಾಖೆಯಲ್ಲಿ ₹ 1.73 ಕೋಟಿಗೂ ಅಧಿಕ ಹಣವನ್ನು ಅಕ್ರಮ ವರ್ಗಾವಣೆ ಮಾಡಿಕೊಳ್ಳಲಾಗಿದ್ದು, ಶಾಖಾ ವ್ಯವಸ್ಥಾಪಕ ಸೇರಿ ಆರು ನೌಕರರ ಮೇಲೆ ದೂರು ದಾಖಲಾಗಿದೆ.

ಬ್ಯಾಂಕ್‌ ನೌಕರರೇ ‘ಸ್ಥಿರ ಠೇವಣಿ’ ಮೇಲಿನ ಸಾಲದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ರೀತಿಯ 21 ಮಂದಿಯ ನಕಲಿ ಕಾಗದ ಪತ್ರಗಳನ್ನು ಸಿದ್ಧಪಡಿಸಿ ₹ 1,73,50,000 ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಹಣ ಕಬಳಿಸಿ, ಬ್ಯಾಂಕಿಗೆ ಆರ್ಥಿಕ ಹಾನಿ ಉಂಟು ಮಾಡಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಅವ್ಯವಹಾರದ ಬಗ್ಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಗೋಕಾಕ ಪ್ರಾದೇಶಿಕ ಕಚೇರಿ ಪ್ರಬಂಧಕ ಅವಿನಾಶ ಇಂದ್ರಜೀತ್‌ ಅಸೋದೆ ಅವರು ನವೆಂಬರ್‌ 5ರಂದು ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆವಿಜಿ ಬ್ಯಾಂಕಿನ ಗೋಕಾಕ ಪ್ರಾದೇಶಿಕ ಕಚೇರಿ ಸಹಾಯಕ ಮಲ್ಲಿಕಾರ್ಜುನ ಶಿರಗಾಂವಿ ಅವ್ಯವಹಾರದ ಪ್ರಮುಖ ಆರೋಪಿ. ಹುಕ್ಕೇರಿ ಶಾಖಾ ವ್ಯವಸ್ಥಾಪಕ ಸತ್ಯಬ್ರತ ಸಾಹು, ಇದೇ ಶಾಖೆಯ ಸಹಾಯಕ ವ್ಯವಸ್ಥಾಪಕರಾದ ಗಾಯತ್ರಿ ಸಿ.ಪುನ್ನೂರಿ ಮತ್ತು ತುಮ್ಮಳ ಎಸ್‌.ಜಿ.ವಿ ರಮೇಶ, ಕಚೇರಿಯ ಸಹಾಯಕರಾದ ಸಂತೋಷ ಎ. ಶಿವನಾಯಕ ಹಾಗೂ ಪ್ರೀತಿಕುಮಾರಿ ಝಾ ಅವರು ಕ್ರಮವಾಗಿ 2ರಿಂದ 6ನೇ ಆರೋಪಿಗಳಾಗಿದ್ದಾರೆ.

ಅವ್ಯವಹಾರ ನಡೆದಿದ್ದು ಹೇಗೆ?:

ಈ ಹಿಂದೆ ಹುಕ್ಕೇರಿ ಶಾಖೆಯಲ್ಲಿ ಕಚೇರಿ ಸಹಾಯಕರಾಗಿದ್ದ ಮಲ್ಲಿಕಾರ್ಜುನ ಶಿರಗಾಂವಿ, ಕೆಲ ತಿಂಗಳ ಹಿಂದೆ ಗೋಕಾಕ ಪ್ರಾದೇಶಿಕ ಕಚೇರಿಗೆ ವರ್ಗವಾಗಿದ್ದಾರೆ. ಆದರೆ, ಮೇಲಿಂದ ಮೇಲೆ ಹುಕ್ಕೇರಿ ಶಾಖೆಗೂ ಬಂದು ಹೋಗುತ್ತಿದ್ದರು. ಈ ವೇಳೆ ಬ್ಯಾಂಕಿನ ಅಧಿಕಾರಿಗಳ ಸಿಸ್ಟಂ ಪಾಸ್‌ವರ್ಡ್‌, ಸೀಲ್‌ಗಳನ್ನು ಪಡೆದುಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಇದಕ್ಕೆ ಇತರ ಆರೋಪಿಗಳೂ ಸಹಕಾರ ನೀಡಿದ್ದಾರೆ. ಶಾಖೆಯ ವ್ಯವಸ್ಥಾಪಕ ಕೂಡ ನಕಲಿ ದಾಖಲೆಗಳ ಆಧಾರದ ಮೇಲೆಯೇ ಸಾಲ ಮಂಜೂರಾತಿ ಮಾಡಿದ್ದಾರೆ ಎಂದು ಬ್ಯಾಂಕಿನ ಮೂಲಗಳು ಮಾಹಿತಿ ನೀಡಿವೆ.

ಗೋಕಾಕ ಪ್ರಾದೇಶಿಕ ಕಚೇರಿ ಪ್ರಬಂಧಕ ಅವಿನಾಶ ಇಂದ್ರಜೀತ್‌ ಅಸೋದೆ ಹಾಗೂ ಹಿರಿಯ ವ್ಯವಸ್ಥಾಪಕ ಎಂ.ಬಿ. ತಳವಾರ ಅವರು ಸೆಪ್ಟೆಂಬರ್‌ 12ರಂದು ನಡೆಸಿದ ಪರಿಶೀಲನೆ ವೇಳೆ, ಅವ್ಯವಹಾರ ನಡೆದಿದ್ದು ಖಾತ್ರಿಯಾಯಿತು. ಈ ಬಗ್ಗೆ ತನಿಖೆ ನಡೆಸುವಂತೆ ಬ್ಯಾಂಕ್‌ನ ಧಾರವಾಡದ ಪ್ರಧಾನ ಕಚೇರಿಗೆ ಮಾಹಿತಿ ನೀಡಿದರು. ಧಾರವಾಡ ವಿಚಕ್ಷಣಾ ದಳವು ಅವ್ಯವಹಾರದ ಪೂರ್ಣ ವರದಿ ಸಲ್ಲಿಸಿತು.

ಜೂನ್‌ 9ರಿಂದ ಆಗಸ್ಟ್‌ 29ರವರೆಗೆ ಒಟ್ಟು 21 ಬಾರಿ ನಕಲಿ ದಾಖಲೆಗಳ ಆಧಾರದ ಮೇಲೆಯೇ ಈ ಸಾಲ ಪಡೆಯಲಾಗಿದೆ. ಉಳಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಲುಗೆ ಬಳಸಿಕೊಂಡು ಹಣ ಕಬಳಿಸಿದ್ದಾರೆ. ಸಾಲದ ಮೊತ್ತವನ್ನು ತಮ್ಮ ಪತ್ನಿ ಖಾತೆಗೆ ಜಮೆ ಮಾಡಿಸಿದ್ದಾರೆ ಎಂದೂ ಮೂಲಗಳು ಮಾಹಿತಿ ನೀಡಿವೆ.

ಆರೋಪಿ ನಾಪತ್ತೆ:

ದೂರು ದಾಖಲಾಗುತ್ತಿದ್ದಂತೆ ಮುಖ್ಯ ಆರೋಪಿ ಮಲ್ಲಿಕಾರ್ಜುನ ಶಿರಗಾಂವಿ ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT