ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ | ತ್ರಿವಿಧ ದಾಸೋಹಿ ದುರದುಂಡೀಶ್ವರ

ನಾಳೆಯಿಂದ ಸಂಭ್ರಮದ ಜಾತ್ರೆ, ಮಹಾತ್ಮ ಸಾನ್ನಿಧ್ಯದಲ್ಲಿ ಅಧ್ಯಾತ್ಮ ಚಿಂತನೆ
Published 7 ಏಪ್ರಿಲ್ 2024, 5:28 IST
Last Updated 7 ಏಪ್ರಿಲ್ 2024, 5:28 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರರ ಜಾತ್ರೆಯು 12ನೇ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏ.8ರಿಂದ 11ರ ವರೆಗೆ ಜರುಗಲಿದೆ. ಗ್ರಾಮದಲ್ಲಿ ಈಗಾಗಲೇ ಹಬ್ಬದ ವಾತಾವರಣ ಮನೆ ಮಾಡಿದೆ.

ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ಮಠಗಳಲ್ಲಿ ಒಂದಾಗಿರುವ ಅರಭಾವಿಯ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠವು ಜಾಗೃತ ಸ್ಥಳವಾಗಿದೆ. ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಗಳೊಂದಿಗೆ ತ್ರಿವಿಧ ದಾಸೋಹದ ತಾಣ ಮತ್ತು ಭಾವೈಕ್ಯದ ಕ್ಷೇತ್ರವೆನಿಸಿದೆ.

ಐತಿಹ್ಯ: 600 ವರ್ಷಗಳ ಪೂರ್ವ ಇತಿಹಾಸವನ್ನು ಹೊಂದಿರುವ ದುರದುಂಡೀಶ್ವರರ ಮೂಲನಾಮವು ಶಿವಲಿಂಗೇಶ್ವರ ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಬಾಲ್ಯದಲ್ಲಿ ಶಿವಲಿಂಗೇಶ್ವರರು ವೈರಾಗ್ಯ ತಾಳಿ ಹಿಮಾಲಯದಲ್ಲಿ ತಪಸ್ಸು ಮಾಡಿ ಲೋಕಸಂಚಾರ ಗೈಯುತ್ತ ಅರುಣಾಚಲದ ಕುಂಭಳೇಶ್ವರರ ಆಜ್ಞೆಯಂತೆ ಮಹಾರಾಷ್ಟ್ರದ ಢಪಳಾಪೂರಕ್ಕೆ ಆಗಮಿಸಿದರು. ಅಲ್ಲಿ ಗುರುಲಿಂಗೇಶ್ವರರಿಂದ ಯೋಗಾಂಗ ಲಕ್ಷಣ, ಶಿವಯೋಗಿ ಸಿದ್ಧಾಂತ, ಅಂಗಲಿಂಗ ಸಾಮರಸ್ಯದ ಮೂಲ ಸೇರಿದಂತೆ ಹಲವು ವಿದ್ಯೆ ಪಾರಂಗತರಾಗಿ ಅಲ್ಲಿಂದ ತೇರದಾಳದ ಅಲ್ಲಮಪ್ರಭು ಆಶ್ರಮದಲ್ಲಿ ಕೆಲ ದಿನ ಕಳೆದರು. ಶ್ರೀಗಳ ಅಣತಿಯಂತೆ ಘಟಪ್ರಭಾ ನದಿ ತೀರದಲ್ಲಿರುವ (ಈಗಿನ ಗೋಕಾಕ ಜಲಪಾತ) ಮಹಾಲಿಂಗಾಲಯ ಗಿರಿಗೆ ಬಂದು ನೆಲೆಸಿದರು. ಅಲ್ಲಿಂದ ಊರುರು ಸಂಚಾರಗೈಯುತ್ತ ಭಕ್ತರ ಕಲ್ಯಾಣ ಮಾಡುತ್ತ ದುರದುಂಡಿಯಲ್ಲಿ ಹರಿಯುತ್ತಿರುವ ಹಳ್ಳದ ಪ್ರದೇಶದಲ್ಲಿ ನೆಲೆಸಿ ಶಿವಲಿಂಗೇಶ್ವರರು ದುರದುಂಡೀಶ್ವರರಾದರು.

ದುರದುಂಡಿಯಿಂದ 4 ಮೈಲು ದೂರದಲ್ಲಿರುವ ದಟ್ಟಕಾನನ ಪ್ರದೇಶವಾಗಿದ್ದ ಅರಭಾವಿಗೆ ಬಂದು ತಪಸ್ಸುಗೈದರು. ಅದೇ ಸ್ಥಳದಲ್ಲಿ ಶಿವಸಮಾಧಿಯಲ್ಲಿ ಲಿಂಗಲೀನರಾದ ಸ್ಥಳವೇ ಈಗಿನ ಅರಭಾವಿಯ ಮಠವಾಗಿದ್ದು ಅಪಾರ ಭಕ್ತರ ತಾಣವಾಗಿದೆ.

ಕಿತ್ತೂರ ದೊರೆ ಮಲ್ಲಸರ್ಜನ ಅವರಿಗೆ ಲಿಂಗಾಂಗ ಸಾಮರಸ್ಯ ತೋರಿದ ತಾನ ಇದು. 11ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಆಧ್ಯಾತ್ಮಿಕ, ಕೃಷಿ, ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಂದ ಮಠದ ಕೀರ್ತಿಯನ್ನು ವಿಸ್ತಾರಗೊಳಸಿದ್ದಾರೆ. ಈಗಿರುವ ಪೀಠಾಧಿಪತಿಗಳಾದ ಗುರುಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮಠದ ಪರಂಪರೆ ಮುಂದುವರಿಸಿದ್ದಾರೆ.

ಆಕರ್ಷಕ ಮಂಟಪ: ಮೂಲ ದುರದುಂಡೀಶ್ವರರು ಶಿವಸಮಾಧಿ ಹೊಂದಿದ ಗದ್ದುಗೆಯು ಅರಭಾವಿಯ ನಸುಹಳದಿ ಕೆಂಪು ಶಿಲೆಯಲ್ಲಿ ನಿರ್ಮಿತ ಸುಂದರ ಶಿಲ್ಪಕಲಾ ಮಂದಿರವಾಗಿದೆ. 14 ಅಡಿ ಎತ್ತರದ 32 ಕಂಬಗಳಿದ್ದು ಮಧ್ಯದಲ್ಲಿ ಮಂಟಪ, ಶೂನ್ಯ ಸಿಂಹಾನಧೀಶ ದುರದುಂಡೀಶ್ವರ ಸನ್ನಿಧಿ ಸ್ಥಳವಿದೆ. ಮಂಟಪದ ಮುಂಭಾಗದ ಶಿಲ್ಪಾಕೃತಿಗಳಿಂದ ಅರಭಾವಿ ಮಠವು ಕಣ್ಮನ ಸೆಳೆಯುತ್ತದೆ.

ಗುರುಬಸವಲಿಂಗ ಸ್ವಾಮೀಜಿ
ಗುರುಬಸವಲಿಂಗ ಸ್ವಾಮೀಜಿ

ತಪಸ್ವಿಗಳ ನೆಲೆಯಾಗಿರುವ ದುರದುಂಡೀಶ್ವರ ಮಠದ ಜಾತ್ರೆಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಅನುಭಾವವನ್ನು ಹಂಚಿಕೊಳ್ಳುವರು. ಭಕ್ತರಿಂದ ನಿತ್ಯ ಮಹಾಪ್ರಸಾದ ಇದೆ

- ಗುರುಬಸವಲಿಂಗ ಸ್ವಾಮೀಜಿ ಪೀಠಾಧಿಪತಿ

ನಾಳೆಯಿಂದ ಜಾತ್ರೆ ಸಡಗರ ಏ.8ರಂದು ಸಂಜೆ 6ಕ್ಕೆ ಅಮವಾಸೆ ಶಿವಾನುಭವ ಗೋಷ್ಠಿ 9ರಂದು ಬೆಳಿಗ್ಗೆ 8ಕ್ಕೆ ಷಟ್‌ಸ್ಥಲ ಧ್ವಜಾರೋಹಣ ಯುಗಾದಿ ಪಾಡ್ಯೆ ಪಂಚಾಂಗ ಶ್ರವಣ ಬೆಳಿಗ್ಗೆ 9ಕ್ಕೆ ಅಯ್ಯಾಚಾರ ದೀಕ್ಷಾ ಮಧ್ಯಾಹ್ನ 12ಕ್ಕೆ ಪಾದಪೂಜೆ ಮಹಾಪ್ರಸಾದ ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ. ಏ.10 ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ ಬೆಳಿಗ್ಗೆ 11ಕ್ಕೆ ದುರದುಂಡೀಶ್ವರ ಶಿವಯೋಗಿಗಳ ಪಲ್ಲಕ್ಕಿ ಉತ್ಸವ. ಮಧ್ಯಾಹ್ನ 1ಕ್ಕೆ ಮಹಾಪ್ರಸಾದ. ಸಂಜೆ 6ಕ್ಕೆ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಧರ್ಮ ಚಿಂತನ ಗೋಷ್ಠಿ. ರಾತ್ರಿ 10.30ಕ್ಕೆ ನಾಟಕ. ಏ.11ರಂದು ಮಧ್ಯಾಹ್ನ 12ಕ್ಕೆ ಪಾದಪೂಜೆ ಮಹಾಪ್ರಸಾದ ಸಂಜೆ 5ಕ್ಕೆ ಜಂಗೀ ಕುಸ್ತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT