ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅಧಿಕಾರಿಗಳ ನಿರ್ಲಕ್ಷ್ಯ: ರೈತರಿಂದ ಹೂಳು ತೆರವು

ಘಟಪ್ರಭಾ ಬಲದಂಡೆ ಅಂಚು ಕಾಲುವೆಯಲ್ಲಿ ಸಮಸ್ಯೆ; 10 ಸಾವಿರ ಹೆಕ್ಟೇರ್‌ ಜಮೀನಿಗೆ ಸಿಗದ ನೀರು
Published 10 ಜುಲೈ 2024, 22:08 IST
Last Updated 10 ಜುಲೈ 2024, 22:08 IST
ಅಕ್ಷರ ಗಾತ್ರ

ಬೆಳಗಾವಿ: ಹಿಡಕಲ್‌ ಜಲಾಶಯದ ಘಟಪ್ರಭಾ ಬಲದಂಡೆ ಕಾಲುವೆ ದುರಸ್ತಿಯಾಗದ ಕಾರಣ 10 ಸಾವಿರ ಹೆಕ್ಟೇರ್‌ ಜಮೀನು ನೀರಾವರಿಯಿಂದ ವಂಚಿತವಾಗಿದೆ. ಗ್ರಾಮ ಪಂಚಾಯಿತಿ ಹಾಗೂ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಬೇಸರಗೊಂಡು ರೈತರು ತಾವೇ ಕಾಲುವೆಗಿಳಿದು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಘಟಪ್ರಭಾ ಯೋಜನಾ ವ್ಯಾಪ್ತಿಯ ಕಬ್ಬೂರ ಅಂಚು ವಿತರಣಾ ಕಾಲುವೆಯಲ್ಲಿ (ಸಿಬಿಸಿ) ಅಪಾರ ಪ್ರಮಾಣದ ಹೂಳು ತುಂಬಿದೆ. ಕೊನೆ ಅಂಚಿನ ಗ್ರಾಮಗಳಾದ ರಾಯಬಾಗ ತಾಲ್ಲೂಕಿನ ಮಂಟೂರು, ನಿಪನಾಳ, ಖಡಕಬಾವಿ, ಚಿಕ್ಕೋಡಿ ತಾಲ್ಲೂಕಿನ ಜಾಗನೂರ, ಗೋಕಾಕ ತಾಲ್ಲೂಕಿನ ದಂಡಾಪುರ, ಮಮದಾಪುರ ಹದ್ದಿಯ ರೈತರಿಗೆ ನೀರು ಸಿಗುತ್ತಿಲ್ಲ.  ಕಾಲುವೆ ಇದ್ದರೂ 10 ಸಾವಿರ ಹೆಕ್ಟೇರ್‌ ಪ್ರದೇಶ ಒಣಭೂಮಿಯಾಗಿ ಉಳಿದಿದೆ.

ಸದ್ಯ ಕಾಲುವೆಯಲ್ಲಿ 65 ಸಾವಿರ ಕ್ಯುಸೆಕ್‌ ನೀರು ಹರಿಸಿದರೂ ಕೊನೆಯಂಚಿನ ಗ್ರಾಮಗಳ ಕಾಲುವೆಗೆ ನೀರೂ ತಲುಪಿಲ್ಲ.  ಎಂಟು ವರ್ಷಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ದುರಸ್ತಿ ಮಾಡಬೇಕು ಎಂಬ ನಿಯಮವೂ ಪಾಲನೆ ಆಗಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನ ನೀಡಿದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ (ಪಿಡಿಒ) ಸ್ಪಂದನೆ ಸಿಕ್ಕಿಲ್ಲ.

ನರೇಗಾ ಯೋಜನೆಯಡಿ ಮಂಟೂರು ಗ್ರಾಮ ಪಂಚಾಯಿತಿಯವರು ತಮ್ಮ ವ್ಯಾಪ್ತಿಯ 9 ಕಿ.ಮೀ ಉದ್ದದ ಕಾಲುವೆಯ ಹೂಳನ್ನು ₹ 24 ಲಕ್ಷ ವೆಚ್ಚದಲ್ಲಿ ತೆರವುಗೊಳಿಸಿದ್ದಾರೆ. ಆದರೆ, ಮಂಟೂರಿಗಿಂತ ಮೊದಲು ಬರುವ ಜಾಗನೂರ ಮತ್ತು ನಂತರ ಬರುವ ದಂಡಾಪುರ ಪಂಚಾಯಿತಿಯವರು ಕಾಮಗಾರಿ ಮಾಡಿಸಿಲ್ಲ. 26 ಕಿ.ಮೀನಷ್ಟು ಹೂಳು ಹಾಗೇ ಇದೆ.

‘ನೀರಿನ ಸಮಸ್ಯೆ ಆಗದಿರಲಿಯೆಂದೇ ಮಂಟೂರು ಗ್ರಾಮದ ರೈತರೇ ಪಕ್ಕದ ಗ್ರಾಮಗಳ ಕಾಲುವೆಗಳಿಗೆ ಇಳಿದು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. 11 ದಿನಗಳಿಂದ 50 ರೈತರು ಎರಡು ಪಾಳಿಯಲ್ಲಿ ಹೂಳು ಮತ್ತು ಗಿಡಗಂಟಿ ತೆರವು, ಟ್ರಂಚ್‌ ದುರಸ್ತಿ, ಬಿರುಕು ಭರ್ತಿ, ಪ್ಯಾಚ್‌ ಕೆಲಸ ಸಾಗಿದೆ. ಇದಕ್ಕೆ ಹಣವನ್ನೂ ರೈತರೇ ಹೊಂದಿಸಿಕೊಂಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ’ ಎಂದು ರೈತ ಲಕ್ಕಪ್ಪ ಸಿದ್ದಪ್ಪ ಉಪ್ಪಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲುವೆ ವ್ಯಾಪ್ತಿಯಲ್ಲಿ 13 ಸೇತುವೆಗಳಿದ್ದು, ಅವುಗಳ ಪೈಕಿ 5 ಸೇತುವೆಗಳಲ್ಲಿನ ಹೂಳನ್ನು ರೈತರು ತೆರವು ಮಾಡಿದ್ದಾರೆ. ಮಳೆಗಾಲದಲ್ಲೂ ಕೆಲಸ ಮುಂದುವರೆದಿದೆ.

ಕಾಲುವೆಗೆ ಸಂಬಂಧಿಸಿದಂತೆ ಮಂಟೂರ ಪಂಚಾಯಿತಿ ಸದಸ್ಯೆ ಮಲ್ಲವ್ವ ಭೀಮಪ್ಪ ಮೇಟಿ ಅವರು ಜನತಾ ದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಕರ್ನಾಟಕ ನೀರಾವರಿ ನಿಗಮದ ಚಿಕ್ಕೋಡಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌, ‘35 ವರ್ಷಗಳ ಹಿಂದೆ ನಿರ್ಮಿತ ಈ ಕಾಲುವೆ ಅಲ್ಲಲ್ಲಿ ಹಾಳಾಗಿದೆ. ರೈತರ ಮನವಿಗೆ ಸ್ಪಂದಿಸಿ ಆಧುನೀಕರಣಕ್ಕೆ ₹1 ಕೋಟಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಲಿಖಿತ ಉತ್ತರ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಮದಾಪುರ ಕೆ.ಕೆ. ಗ್ರಾಮದ ಹದ್ದಿಯಲ್ಲಿ ಬುಧವಾರ ಘಟಪ್ರಭಾ ಬಲದಂಡೆ ಕಾಲುವೆಯ ಹೂಳು ತೆಗೆದ ರೈತರು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಮದಾಪುರ ಕೆ.ಕೆ. ಗ್ರಾಮದ ಹದ್ದಿಯಲ್ಲಿ ಬುಧವಾರ ಘಟಪ್ರಭಾ ಬಲದಂಡೆ ಕಾಲುವೆಯ ಹೂಳು ತೆಗೆದ ರೈತರು
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಇದ್ದೂ ಇಲ್ಲದಂತಾಗಿದೆ. ಕೃಷಿಗೆ ಅಲ್ಲದೇ ಜನ– ಜಾನುವಾರುಗಳಿಗೂ ನೀರಿನ ಕೊರತೆಯಾಗಿದೆ. ಜನತಾ ದರ್ಶನದಲ್ಲಿ ಪ್ರಶ್ನಿಸಿದರೂ ಪ್ರಯೋಜನವಾಗಿಲ್ಲ.
ಮಲ್ಲವ್ವ ಭೀಮಪ್ಪ ಮೇಟಿ ಗ್ರಾಮ ಪಂಚಾಯಿತಿ ಸದಸ್ಯೆ ಮಂಟೂರ
ಕಾಲುವೆ ದುರಸ್ತಿಗೆ ಅನುದಾನ ಬಂದಿಲ್ಲ. ಹೂಳು ತೆಗೆಸುವ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗಳು ನರೇಗಾದಡಿ ಮಾಡಿಸಲು ನೀರಾವರಿ ಸಚಿವ ನಿರ್ದೇಶನ ನೀಡಿದ್ದಾರೆ.
ಎಸ್‌.ಎಸ್‌.ಕರಗಾರ ಕಾರ್ಯಪಾಲಕ ಎಂಜಿನಿಯರ್ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ಚಿಕ್ಕೋಡಿ ವಿಭಾಗ
ನರೇಗಾದಡಿ ಕಾಲುವೆ ದುರಸ್ತಿಗೆ ಕಾರ್ಮಿಕರು ಸಿಗದ ಕಾರಣ ಕೆಲಸ ಮಾಡಿಲ್ಲ. ರೈತರ ಮನವಿ ಮೇರೆಗೆ ಸದ್ಯ 20 ಕಾರ್ಮಿಕರ ತಂಡ ರಚಿಸಲಾಗಿದೆ. ಎರಡು ದಿನಗಳಲ್ಲಿ ಕೆಲಸ ಶುರು ಮಾಡಲಾಗುವುದು.
ಎಲ್‌.ಬಿ.ಉಪ್ಪಾರ ಪಿಡಿಒ ದಂಡಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT