ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳಿನ ರಕ್ತದ ಗಂಟಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ರಕ್ತದ ಬಲೂನು ಹೊರೆತೆಗೆದ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ವೈದ್ಯರು
Last Updated 5 ಜುಲೈ 2022, 3:48 IST
ಅಕ್ಷರ ಗಾತ್ರ

ಬೆಳಗಾವಿ: ಮಹಿಳೆಯೊಬ್ಬರ ಮಿದುಳಿನಲ್ಲಿ ಉಂಟಾಗಿದ್ದ ಅತ್ಯಂತ ಅಪಾಯಕಾರಿ ರಕ್ತದ ಗಂಟನ್ನು ‘ಬೈಪಾಸ್‌ ಶಸ್ತ್ರಚಿಕಿತ್ಸೆ’ ಮೂಲಕ ಹೊರತೆಗೆಯುವಲ್ಲಿ, ಮಹಾರಾಷ್ಟ್ರದ ಕೊಲ್ಹಾಪುರ ತಾಲ್ಲೂಕಿನ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.

49 ವರ್ಷ ವಯಸ್ಸಿನ ಮಹಿಳೆಯ ಮಿದುಳಿಗೆ ರಕ್ತ ಪೂರೈಸುವ ಪ್ರಮುಖ ನಾಳದಲ್ಲಿ ಈ ಗಂಟು ಬೆಳೆದಿತ್ತು. ಹೃದಯದಿಂದ ಪಂಪ್‌ ಆಗಿ ಚಿಮ್ಮುವ ರಕ್ತವು ಮಿದುಳಿಗೆ ತಲುಪುತ್ತಿರಲಿಲ್ಲ. ಸಾಮಾನ್ಯವಾಗಿ ಮಿದುಳಿನ ರಕ್ತನಾಳಗಳಲ್ಲಿ 6ರಿಂದ 7 ಮಿ.ಮೀ ಗಾತ್ರದ ಗಂಟು ಉಂಟಾಗುತ್ತದೆ. ಅದು ಬಲೂನಿನಂತೆ ಹಿಗ್ಗುತ್ತ ಹೋದಂತೆ ಗಂಟು ಒಡೆದು ರಕ್ತಸ್ರಾವದಿಂದ ಸಾವು ಸಂಭವಿಸುತ್ತದೆ. ಆದರೆ, ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಹೊರತೆಗೆದ ಗಂಟು ಬರೋಬ್ಬರಿ 10.5 ಸೆ.ಮೀ ಬೆಳೆದಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು ಸತತ 11 ತಾಸು ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಗೆ ಮರುಜೀವ ನೀಡಿದ್ದಾರೆ.

ಏನಿದು ಮಿದುಳಿನ ಬೈಪಾಸ್‌?: ‘ಹೃದಯದ ಬೈಪಾಸ್‌ ಸರ್ಜರಿ ಸಾಮಾನ್ಯವಾಗಿ ಗೊತ್ತಿರುವ ಸಂಗತಿ. ಆದರೆ, ಮಿದುಳಿನ ಬೈಪಾಸ್‌ ಶಸ್ತ್ರಚಿಕಿತ್ಸೆ ತುಂಬ ಸವಾಲಿನ ಕೆಲಸ. ಮಿದುಳಿನ ನರಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅದರಲ್ಲಿನ ರಕ್ತದ ಗಂಟು ಹೊರತೆಗೆದು, ಆ ನರದಿಂದ ರಕ್ತಪರಿಚಲನೆ ಆಗದಂತೆ ಬಂದ್‌ ಮಾಡಬೇಕು. ಅದಕ್ಕೆ ಪರ್ಯಾಯವಾಗಿ ಇನ್ನೊಂದು ನರ ಜೋಡಿಸಬೇಕು. ಇದಕ್ಕೆ ಹಾಕುವ ಹೊಲಿಗೆಯ ದಾರವು ಕೂದಲಿಗಿಂತ ಶೇ 100ರಷ್ಟು ಕಡಿಮೆ ಗಾತ್ರ ಹೊಂದಿರುತ್ತದೆ. ಹೀಗಾಗಿ, ಇಡೀ ಶಸ್ತ್ರಚಿಕಿತ್ಸೆಯನ್ನು ಸೂಕ್ಷ್ಮದರ್ಶಕದ ಮೂಲಕವೇ ಮಡಬೇಕಾಗುತ್ತದೆ’ ಎಂದುಶಸ್ತ್ರಚಿಕಿತ್ಸೆ ಮಾಡಿದ ನರರೋಗ ತಜ್ಞ ಡಾ.ಶಿವಶಂಕರ ಬಿ. ಮರಜಕ್ಕೆ ತಿಳಿಸಿದರು.

‘ಈಗ ಮಹಿಳೆಗೆ ಮಾಡಿದ್ದು ಕೂಡ ಇದೇ ತರದ ಬೈಪಾಸ್‌ ಶಸ್ತ್ರಚಿಕ್ರಿಯೆ. ಅವರ ಕೈಯಲ್ಲಿನ ನರ ತೆಗೆದುಕೊಂಡು ಮಿದುಳಿನ ಹೊರಮಾರ್ಗದ ಮೂಲಕ ಕಸಿ ಮಾಡಲಾಗಿದೆ. ಇದರಿಂದ ಅವರ ಒಂದು ಕಣ್ಣಿನ ದೃಷ್ಟಿ ಮತ್ತೆ ಬಂದಿದೆ. ಈಗ ಮಹಿಳೆ ಸಂಪೂರ್ಣ ಗುಣವಾಗಿದ್ದು, ಓಡಾಡಿಕೊಂಡಿದ್ದಾರೆ’ ಎಂದರು.

‘ಸಣ್ಣ ಪ್ರಮಾಣದ ಗಂಟಿನ ಶಸ್ತ್ರತ್ರಚಿಕಿತ್ಸೆಗೆ ಒಳಗಾದರೂ ಶೇ 50ರಷ್ಟು ಮಂದಿ ಮಾತ್ರ ಬದುಕುಳಿಯುತ್ತಾರೆ. ಆದರೆ, ಈ ಮಹಿಳೆ ಮಿದುಳಿನಲ್ಲಿ ಆಗಿದ್ದ 10.5 ಸೆ.ಮೀ. ಗಂಟು. ಮಿದುಳಿನಲ್ಲಿ ಇಷ್ಟು ದೊಡ್ಡ ಗಂಟು ಉಂಟಾದ ಪ್ರಕರಣಗಳು ವಿಶ್ವದಲ್ಲೇ ಅತಿ ವಿರಳ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ. ಬೈಪಾಸ್‌ ಶಸ್ತ್ರಚಿಕಿತ್ಸೆ ಮಾಡುವಂಥ ಎಂಟು ಆಸ್ಪತ್ರೆಗಳು ದೇಶದಲ್ಲಿವೆ. ಅದರಲ್ಲಿ ಕನೇರಿಯಂಥ ಸಣ್ಣ ಹಳ್ಳಿಯಲ್ಲಿ ಇಷ್ಟು ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದ್ದು ವಿಶೇಷ’ ಎಂದರು.

ಅರಿವಳಿಕೆ ತಜ್ಞ ಡಾ.ಪ್ರಕಾಶ ಭರಮಗೌಡರ, ಹೃದ್ರೋಗ ತಜ್ಞ ಡಾ.ಅಮೋಲ್‌ ಬೋಜೆ ಈ ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿದ್ದರು.

‘ರಿಯಾಯಿತಿಯಲ್ಲಿ ಚಿಕಿತ್ಸೆ’
ಸಿದ್ಧಗಿರಿ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಇಂಥ ಜಟಿಲ ಶಸ್ತ್ರಚಿಕಿತ್ಸೆಗೆ ಕನಿಷ್ಠ ₹ 10ರಿಂದ ₹ 12 ಲಕ್ಷದವರೆಗೆ ವೆಚ್ಚವಾಗುತ್ತದೆ. ಮಹಿಳೆಗೆ ಸರ್ಕಾರಿ ಯೋಜನೆ ಆರೋಗ್ಯ ವಿಮೆ ಇರುವುದರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದರ ಹೊರತಾಗಿಯೂ ಜಟಿಲ ಸಮಸ್ಯೆಯಿಂದ ಬಳಲುತ್ತಿರುವ ಬಡವರು ನಮ್ಮ ಆಸ್ಪತ್ರೆಗೆ ಬಂದರೆ ಅತಿ ಕಡಮೆ ದರದಲ್ಲಿ ಸೇವೆ ನೀಡಲಿದ್ದೇವೆ’ ಎಂದರು.

‘ಸಿದ್ಧಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಚಾರಿಟಬಲ್‌ ಆಸ್ಪತ್ರೆಯಾಗಿದೆ. ಹೀಗಾಗಿ, ಲಾಭಕ್ಕಾಗಿ ಅಲ್ಲದೇ ಕೇವಲ ಹಳ್ಳಿ ಜನರ ಸೇವೆಯ ದೃಷ್ಟಿಯಿಂದ ಆಸ್ಪತ್ರೆ ನಡೆಸುತ್ತಿದ್ದೇವೆ. ಗ್ರಾಮೀಣ ಮಟ್ಟದಲ್ಲೂ ಕಾರ್ಪೊರೇಟ್‌ ಮಟ್ಟದ ವೈದ್ಯಕೀಯ ಸೌಲಭ್ಯ ನೀಡಬೇಕು ಎಂಬುದು ನಮ್ಮ ಕನಸಾಗಿತ್ತು. ಈಗ ಅದು ನನಸಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT