ಬೆಳಗಾವಿ: ಹುಕ್ಕೇರಿ ಪುರಸಭೆಯಲ್ಲಿ ಕತ್ತಿ ಸಹೋದರರ ಕೋಟೆಗೆ ‘ಕೈ’ ಲಗ್ಗೆ!

7
ರಾಯಬಾಗ, ಕುಡಚಿಯಲ್ಲಿ ಶಕ್ತಿ ವೃದ್ಧಿಸಿಕೊಂಡ ಕಾಂಗ್ರೆಸ್‌

ಬೆಳಗಾವಿ: ಹುಕ್ಕೇರಿ ಪುರಸಭೆಯಲ್ಲಿ ಕತ್ತಿ ಸಹೋದರರ ಕೋಟೆಗೆ ‘ಕೈ’ ಲಗ್ಗೆ!

Published:
Updated:

ಬೆಳಗಾವಿ: ಹುಕ್ಕೇರಿ ಪುರಸಭೆಯಲ್ಲಿ ಹಿಂದಿನ ಚುನಾವಣೆಯಲ್ಲಿ ‘ಶೂನ್ಯ’ ಸಾಧನೆ ಮಾಡಿ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್‌, ಈ ಬಾರಿಯ ಚುನಾವಣೆಯಲ್ಲಿ ಸರಳ ಬಹುಮತ ಪಡೆಯುವ ಮೂಲಕ, ಆ ಭಾಗದ ಪ್ರಭಾವಿ ಶಾಸಕ ಬಿಜೆಪಿಯ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಕತ್ತಿ ಸಹೋದರರಿಗೆ ಬಲವಾದ ಹೊಡೆತ ಕೊಟ್ಟಿದೆ.

ಮಾಜಿ ಸಚಿವ ಎ.ಬಿ. ಪಾಟೀಲ ಹಾಗೂ ಬೆಂಬಲಿಗರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಅಧಿಕಾರ ಉಳಿಸಿಕೊಳ್ಳಲು ವಿಫಲವಾಗಿದೆ.

2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 19 ವಾರ್ಡ್‌ಗಳಿದ್ದವು. ಆಗ, 18ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 23 ವಾರ್ಡ್‌ಗಳಿಗೆ ಈಗ ನಡೆದ ಚುನಾವಣೆಯಲ್ಲಿ 12 ಕಾಂಗ್ರೆಸ್‌, 8 ಬಿಜೆಪಿ ಹಾಗೂ ಮೂವರು ‍ಪಕ್ಷೇತರರು ಗೆದ್ದಿದ್ದಾರೆ.

ಒಬ್ಬ ಪಕ್ಷೇತರಗೆ ಬೇಡಿಕೆ

ಸಂಕೇಶ್ವರದಲ್ಲಿ 23 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸಮಬಲ ಸಾಧಿಸಿವೆ. ಅತಂತ್ರವಾಗಿರುವ ಇಲ್ಲಿ, ಗೆದ್ದಿರುವ ಏಕೈಕ ಪಕ್ಷೇತರ ಅಭ್ಯರ್ಥಿ ಯಾರಿಗೆ ಬೆಂಬಲ ಕೊಡುತ್ತಾರೋ ಆ ಪಕ್ಷದವರು ಅಧಿಕಾರದ ಗದ್ದುಗೆ ಏರಬಹುದಾಗಿದೆ. ಅವರನ್ನು (ಅಜಿತ ಕರಜಗಿ) ಒಲಿಸಿಕೊಳ್ಳಲು ಎರಡು ಪಕ್ಷಗಳಿಂದಲೂ ಕಸರತ್ತು ಆರಂಭವಾಗಿದೆ.

ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ, ಹುಕ್ಕೇರಿ ಮತಕ್ಷೇತ್ರದ ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದಲ್ಲಿ ಬಿಜೆಪಿಯ ಉಮೇಶ ಕತ್ತಿಗೆ ಅವರಿಗಿಂತ ಕಾಂಗ್ರೆಸ್‌ ಅಭ್ಯರ್ಥಿ ಎ.ಬಿ. ಪಾಟೀಲಗೆ ಹೆಚ್ಚಿನ ಮತಗಳು ದೊರೆತಿದ್ದವು. ಈಗ ಇವರೆಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೂ ಬಿಜೆಪಿಗೆ ಎಚ್ಚರಿಕೆ ಗಂಟೆ ಬಾರಿಸಿದೆ ಎಂದು ಹೇಳಲಾಗುತ್ತಿದೆ.

ಅಣ್ಣಾಸಾಹೇಬ ಕೈ ಮೇಲು

ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಅವರ ಪುತ್ರ ಶಾಸಕ ಗಣೇಶ ಹುಕ್ಕೇರಿ ಅವರ ಸ್ವಕ್ಷೇತ್ರ ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕೈ ಮೇಲಾಗಿದೆ. ಅಲ್ಲಿ ‘ಅಭಿವೃದ್ಧಿ ರಂಗ’ದ ಹೆಸರಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. 13 ಬಿಜೆಪಿ ಬೆಂಬಲಿತರು ಹಾಗೂ 10 ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಸದಲಗಾ ಪುರಸಭೆಯಲ್ಲಿ ಜೆಡಿಎಸ್‌ನ ಇಬ್ಬರು ಗೆದ್ದಿರುವುದು ವಿಶೇಷ. ಬಿಜೆಪಿಯ 13, ಕಾಂಗ್ರೆಸ್‌ ಬೆಂಬಲಿತರ 8 ಮಂದಿ ಗೆದ್ದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಗಡಿ ನಿಪ್ಪಾಣಿ ನಗರಸಭೆ ಅತಂತ್ರವಾಗಿದೆ. 31 ಸದಸ್ಯ ಬಲದ ಅಲ್ಲಿ, ಬಿಜೆಪಿ ಬೆಂಬಲಿತರು 13, ಕಾಂಗ್ರೆಸ್‌ ಬೆಂಬಲಿಗರು 12 ಹಾಗೂ 6 ಮಂದಿ ಪಕ್ಷೇತರರು ಗೆದ್ದಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಾಗಿತ್ತು. ಪಕ್ಷೇತರರನ್ನು ಒಗ್ಗೂಡಿಸಿಕೊಂಡವರು ಅಧಿಕಾರ ಹಿಡಿಯಬಹುದಾಗಿದೆ.

ಪಾಟೀಲ ಹಿಡಿತ

ರಾಯಬಾಗ ಪಟ್ಟಣ ಪಂಚಾಯ್ತಿ ಹಾಗೂ ಕುಡಚಿ ಪುರಸಭೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿದಿದೆ. ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಶಾಸಕರಾದ ದುರ್ಯೋಧನ ಐಹೊಳೆ ಹಾಗೂ ಪಿ. ರಾಜೀವಗೆ ತೀವ್ರ ಮುಖಭಂಗವಾಗಿದೆ. ಆ ಭಾಗದ ‍ಪ್ರಭಾವಿ ನಾಯಕ  ವಿಧಾನಪರಿಷತ್‌ ಸದಸ್ಯ ಕಾಂಗ್ರೆಸ್‌ನ ವಿವೇಕರಾವ್ ಪಾಟೀಲ, ಶ್ಯಾಮ ಘಾಟಗೆ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ಉಳಿಸಿಕೊಡುವಲ್ಲಿ ಅವರ ನೇತೃತ್ವದ ಪಡೆ ಯಶಸ್ವಿಯಾಗಿದೆ.

19 ಸದಸ್ಯ ಬಲದ ರಾಯಬಾಗ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌–11, ಬಿಜೆಪಿ–7 ಹಾಗೂ ಪಕ್ಷೇತರ (ಅವರೂ ಕಾಂಗ್ರೆಸ್ ಬೆಂಬಲಿತರು) ಹಾಗೂ 23 ಸದಸ್ಯ ಬಲದ ಕುಡಚಿ ಪುರಸಭೆಯಲ್ಲಿ 14 ಸ್ಥಾನ ಕಾಂಗ್ರೆಸ್‌, 9 ಸ್ಥಾನ ಬಿಜೆಪಿ ಪಾಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !