ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಣ್ಮನ ಸೆಳೆದ ಸಂಗೊಳ್ಳಿ ರಾಯಣ್ಣ ಉತ್ಸವದ ಕಲಾಮೇಳ

Published 17 ಜನವರಿ 2024, 8:20 IST
Last Updated 17 ಜನವರಿ 2024, 8:20 IST
ಅಕ್ಷರ ಗಾತ್ರ

ಸಂಗೊಳ್ಳಿ (ಬೆಳಗಾವಿ ಜಿಲ್ಲೆ): ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಆರಂಭವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024 ಜಾನಪದ ಕಲಾಮೇಳ ಕಣ್ಮನ ಸೆಳೆಯಿತು.

ಶಾಸಕ ಮಹಾಂತೇಶ ಕೌಜಲಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಾಪಂ ಇಒ ಸುಭಾಷ ಸಂಪಗಾಂವಿ, ತಹಶೀಲ್ದಾರ ಸಚ್ಚಿದಾನಂದ ಕುಚನೂರ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಬ್ರಿಟಿಷರ ವಿರುದ್ಧ ಪರಾಕ್ರಮ ಮೆರೆದ ರಾಯಣ್ಣನ ತ್ಯಾಗ- ಬಲಿದಾನಗಳನ್ನು ಕಲಾಮೇಳ ನೆನಪಿಸುವಂತೆ ಮಾಡಿತು. ಡೊಳ್ಳು, ಡಮರುಗ ತಂಡಗಳ ನಾದ ಕ್ರಾಂತಿಯ ಧ್ವನಿಯನ್ನು ಹೊರ ಹಾಕಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಿದರಿಗೆ ಗ್ರಾಮಸ್ಥರು ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಸಂಭ್ರಮಿಸಿದರು. ಕಲಾಮೇಳ ತಂಡಗಳಿಗೆ ರಾಗಿ ಅಂಬಲಿ, ಕುಡಿಯುವ ನೀರು ವಿತರಿಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸಂಗೀತಕ್ಕೆ ಯುವ ಪಡೆ ಕುಣಿದು ಕುಪ್ಪಳಿಸಿತು.

ಸುರೇಬಾನ ಕವಿರತ್ನ ಕಾಳಿದಾಸ ಜಗ್ಗಲಗಿ ಮೇಳ, ರಾಮದುರ್ಗ ಶಾಖಾಂಬರಿ ಮಹಿಳಾ ಗೊಂಬೆ ಕುಣಿತ, ಕೊಣ್ಣೂರ ಬರಮಲಿಂಗೇಶ್ವರ ಮಹಿಳಾ ಡೊಳ್ಳು ಕುಣಿತ, ಗುಂಡೇನಟ್ಟಿ ಬಸವೇಶ್ವರ ಜಗ್ಗಲಗಿ ಮೇಳ, ಹಾಸನದ ಸಣ್ಣ ಸ್ವಾಮಿ ಡೊಳ್ಳು ಕುಣಿತ, ದೇವೀರಮ್ಮ ತಂಡದ ಕಸಾಳೆ ನೃತ್ಯ, ಸಂಕನಕಟ್ಟಿ ಪರಮಾನಂದ ಕರಡಿಮಜಲು, ಅರಸೀಕೆರೆ ಜಯರಾಮ ತಂಡದ ನಂದಿಧ್ವಜ, ಕಲ್ಲೋಳಿ ಗೂಳಪ್ಪ ವಿಜಯ ನಗರ ತಂಡದ ವೀರಗಾಸೆ, ಕಲ್ಲೋಳಿ ಮಹಾಂತೇಶ ಹೂಗಾರ ತಂಡದ ಸನಾದಿ ಮೇಳ, ಹಲ್ಯಾಳ ಶಶಿಧರ ಭಜಂತ್ರಿ ತಂಡದ ತಾಸೆ ವಾದನ ಮತ್ತು ಸನಾದಿ ಮೇಳ, ತುಮಕೂರು ಬಾನುಪ್ರಕಾಶ ತಂಡದ ನೀಲು ಕುದುರೆ ಗೊಂಬೆ ಕುಣಿತ, ನಿಟ್ಟೂರ ಸಂಗಮೇಶ ತಂಡದ ನಂದಿಧ್ವಜ, ಕೊಣ್ಣೂರ ಬೀರಲಿಂಗೇಶ್ವರ ತಂಡದ ಡೊಳ್ಳು ಕುಣಿತ ನೋಡುಗರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT