ಬುಧವಾರ, ಆಗಸ್ಟ್ 21, 2019
28 °C

ವಿಳಂಬವಾಗಿ ಸಂಚರಿಸುತ್ತಿರುವ ರೈಲುಗಳು; ಪ್ರಯಾಣಿಕರ ಪರದಾಟ

Published:
Updated:
Prajavani

ಬೆಳಗಾವಿ: ಬೆಳಗಾವಿ ಹಾಗೂ ಖಾನಾಪುರ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದ್ದು, ರೈಲ್ವೆಗಳ ಸಂಚಾರಕ್ಕೂ ಸಂಚಕಾರ ಬಂದಿದೆ. ರೈಲುಗಳು ವಿಳಂಬವಾಗಿ ಸಂಚರಿಸುತ್ತಿದ್ದು, 3ರಿಂದ 4 ತಾಸು ತಡವಾಗಿ ಬರುತ್ತಿವೆ. ಪ್ರಯಾಣಿಕರು ಹೈರಾಣಾಗಿದ್ದಾರೆ.

ತಿನ್ನೈಘಾಟ್‌ದಲ್ಲಿ ಭೂ ಕುಸಿತ ಉಂಟಾಗಿ ರೈಲ್ವೆ ಹಳಿಗಳಿಗೆ ಹಾನಿಯುಂಟಾಗಿತ್ತು. ಇಲಾಖೆಯ ಸಿಬ್ಬಂದಿಗಳು ರಾತೋರಾತ್ರಿ ದುರಸ್ತಿ ಪಡಿಸಿ, ಒಂದು ಮಾರ್ಗವನ್ನು ಸರಿಪಡಿಸಿದ್ದಾರೆ. ಒಂದೇ ಮಾರ್ಗದಲ್ಲಿ ಈಗ ರೈಲುಗಳು ಸಂಚರಿಸುತ್ತಿವೆ. ಹೀಗಾಗಿ ರೈಲ್ವೆಗಳ ಸಂಚಾರದಲ್ಲಿ ವಿಳಂಬವಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.

ವಾಸ್ಕೊ– ನಿಜಾಮುದ್ದೀನ್‌ ರೈಲು 12 ತಾಸು ವಿಳಂಬವಾಗಿ ಬುಧವಾರ ಬೆಳಿಗ್ಗೆ 7.15ಕ್ಕೆ ತಲುಪಿದೆ. ಯಶವಂತಪುರ– ದಾದರ್‌ ರೈಲು 18 ತಾಸು ವಿಳಂಬವಾಗಿ ಬಂದಿದೆ. ಬೆಂಗಳೂರಿನಿಂದ ಕೊಲ್ಹಾಪುರಕ್ಕೆ ಬರುತ್ತಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು 2 ತಾಸು ತಡವಾಗಿ 10.30ಕ್ಕೆ ಬಂದಿದೆ. ಇದೇ ರೀತಿ, ಬೆಂಗಳೂರು– ಅಜ್ಮೇರ್‌ ರೈಲು ಎರಡೂವರೆ ತಾಸು, ತಿರುಪತಿ– ಕೊಲ್ಹಾಪುರ ರೈಲು ಮೂರುವರೆ ತಾಸು ವಿಳಂಬವಾಗಿದೆ.

ಅಜ್ಮೇರ್‌– ಬೆಂಗಳೂರು ರೈಲು 11 ತಾಸು, ಮಿರಜ್‌– ಹುಬ್ಬಳ್ಳಿ ರೈಲು ಮೂರುವರೆ ತಾಸು, ಕೊಲ್ಹಾಪುರ– ಹೈದರಾಬಾದ್‌ ಎರಡೂವರೆ ತಾಸು, ಮಿರಜ್‌– ಬೆಳಗಾವಿ ಪ್ಯಾಸೆಂಜರ್‌ (ಪುಶ್‌ಪುಲ್‌) ಮೂರು ತಾಸು ತಡವಾಗಿ ಬಂದಿದೆ.

ಪ್ರಯಾಣಿಕರ ಪರದಾಟ:

ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಲವೆಡೆ ಕುಸಿತ ಉಂಟಾಗಿದ್ದರಿಂದ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ತುರ್ತಾಗಿ ಹೋಗಬೇಕಾದವರು ರೈಲಿನತ್ತ ಮುಖಮಾಡಿದ್ದಾರೆ. ಆದರೆ, ಇಲ್ಲಿಯೂ ತುಂಬಾ ವಿಳಂಬವಾಗುತ್ತಿರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳು, ಮಹಿಳೆಯರು, ವೃದ್ಧರು ಫ್ಲಾಟ್‌ಫಾರಂನಲ್ಲಿ ತೀರ ಬವಣೆ ಪಡುತ್ತಿದ್ದಾರೆ.

‘ತುರ್ತಾಗಿ ಮಿರಜ್‌ಗೆ ಹೋಗಬೇಕಾಗಿದೆ. ಆದರೆ, ವಿಪರೀತ ಮಳೆ ಹಾಗೂ ಕೃಷ್ಣಾ ನದಿ ಪ್ರವಾಹದಿಂದಾಗಿ ರಸ್ತೆಗಳು ಹಾಳಾಗಿವೆ. ಬಸ್‌, ಟ್ಯಾಕ್ಸಿಗಳು ಚಲಿಸುತ್ತಿಲ್ಲ. ಹೀಗಾಗಿ ರೈಲು ಹಿಡಿಯಲು ಬಂದಿದ್ದೇನೆ. ಆದರೆ, ಇಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕಾಯುತ್ತ ನಿಂತಿದ್ದೇನೆ. ಸಿಕ್ಕ ತಕ್ಷಣ ಹೋಗುತ್ತೇನೆ’ ಎಂದು ರಾಮ ಜಾಧವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯಾಣ ರದ್ದುಗೊಳಿಸಿಲ್ಲ:

‘ಈ ಮಾರ್ಗದ ಮೂಲಕ ಹಾದು ಹೋಗುವ ಯಾವ ರೈಲುಗಳ ಪ್ರಯಾಣವನ್ನೂ ರದ್ದುಪಡಿಸಿಲ್ಲ. ಆದರೆ, ವಿಪರೀತ ಮಳೆಯಿಂದಾಗಿ ವಿಳಂಬವಾಗಿ ಸಂಚರಿಸುತ್ತಿವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ತಿನ್ನೈಘಾಟ್‌ ಬಳಿ ರೈಲು ಹಳಿ ಹಾನಿಗೊಳಗಾಗಿದ್ದರಿಂದ ವಾಸ್ಕೊ– ನಿಜಾಮುದ್ದೀನ್‌ ರೈಲಿನ ಮುಂದಿನ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು. ಪ್ರಯಾಣಿಕರಿಗೆ ಬಾಕಿ ಪ್ರಯಾಣದ ಹಣವನ್ನು ವಾಪಸ್‌ ನೀಡಿ ಕಳುಹಿಸಲಾಯಿತು. ಅವರು ಬಸ್‌ ಅಥವಾ ಟ್ಯಾಕ್ಸಿ ಮೂಲಕ ತಮ್ಮ ತಮ್ಮ ಊರುಗಳಿಗೆ ತಲುಪಿರಬಹುದು’ ಎಂದು ಅವರು ಹೇಳಿದರು.

 

Post Comments (+)