ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರಲ್ಲ, ನಾವು ಮದ್ಯಪ್ರಿಯರು: ಮದ್ಯಪಾನ ಪ್ರಿಯರ ಹೋರಾಟ ಸಂಘ

ಮದ್ಯಕುಡಿದು ಆದಾಯ ಕೊಡುತ್ತೇವೆ, ನಮಗೂ ಯೋಜನೆ ರೂಪಿಸಿ– ಮದ್ಯಪಾನ ಪ್ರಿಯರ ಹೋರಾಟ ಸಂಘ ಆಗ್ರಹ
Published 14 ಡಿಸೆಂಬರ್ 2023, 15:42 IST
Last Updated 14 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ಬೆಳಗಾವಿ: ‘ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಹಕ್ಕು ನಮಗೂ ಇದೆ’ ಎಂದು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಸದಸ್ಯರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ಮದ್ಯ ಕುಡಿದು ನಾವು ಸರ್ಕಾರಕ್ಕೆ ಎಷ್ಟೊಂದು ಆದಾಯ ಕೊಡುತ್ತೇವೆ. ನಮಗಾಗಿ ಸರ್ಕಾರವೂ ಒಂದಿಷ್ಟು ಯೋಜನೆ ರೂಪಿಸಬೇಕಲ್ಲವೇ’ ಎಂದು ಸಂಘದ ಪ್ರಮುಖರು ಪ್ರಶ್ನಿಸಿದರು.

ಮನವಿ ಸ್ವೀಕರಿಸಲು ಬಂದ ಸಚಿವ ಸಂತೋಷ್‌ ಲಾಡ್‌ ಅವರ ಎದುರು ಅಳಲು ತೋಡಿಕೊಂಡ ಅವರು, ‘ಕುಡುಕ’ ಎಂಬ ಪದಬಳಕೆಯನ್ನು ಸರ್ಕಾರ ನಿಷೇಧಿಸಬೇಕು. ನಮ್ಮನ್ನು ಮದ್ಯಪ್ರಿಯರು ಎಂದು ಕರೆದರೆ ತಪ್ಪೇನಿಲ್ಲ’ ಎಂದರು.

‘ನಿತ್ಯ ದುಡಿ. ಸತ್ಯ ನುಡಿ. ಸ್ವಲ್ಪ ಕುಡಿ. ಮನೆಗೆ ನಡಿ’ ಎಂಬ ಘೋಷವಾಕ್ಯದಂತೆ ನಾವು ಬಾಳ್ವೆ ನಡೆಸಿದ್ದೇವೆ. ಒಂದು ಸಾವಿರ ರೂಪಾಯಿ ದುಡಿದರೆ, ₹ 100 ಮದ್ಯಕ್ಕೆ ಖರ್ಚು ಮಾಡ್ತೀವಿ. ಉಳಿದ ₹ 900 ಕುಟುಂಬಕ್ಕೆ ಕೊಡ್ತೀವಿ’ ಎಂದು ಸಮರ್ಥಿಸಿಕೊಂಡರು.

‘ಒಂದೆಡೆ ಮದ್ಯ ಮಾರಾಟಕ್ಕೆ ಮಳಿಗೆಗಳಿಗೆ ಸರ್ಕಾರ ಪರವಾನಗಿ ನೀಡುತ್ತದೆ. ಮತ್ತೊಂದೆಡೆ, ಮದ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸುವುದು ಎಷ್ಟು ಸರಿ?' ಎಂದು ಅವರು ವಾದಿಸಿದರು. ‘ಈಗ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳೆದಿದೆ. ಮದ್ಯ ಸೇವಿಸಿದವರು ವಾಹನವೇರಿದರೆ, ಸ್ಟಾರ್ಟ್‌ ಆಗದಂತೆ ಸೆನ್ಸರ್ಅ ಳವಡಿಸಿ’ ಎಂದು ಸಲಹೆಯನ್ನೂ ಕೊಟ್ಟರು.

ಪ್ರತಿಯೊಂದು ಬೇಡಿಕೆಗಳನ್ನು ಆಲಿಸಿದ ಸಚಿವರು ಕೆಲ ಕ್ಷಣ ತಬ್ಬಿಬ್ಬಾದರು. ನಂತರ ನಗೆ ಬೀರುತ್ತ, ‘ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವೆ’ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ವೆಂಕಟೇಶಗೌಡ ಬೋರೆಹಳ್ಳಿ, ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ ಇತರರಿದ್ದರು.

ಮದ್ಯಪ್ರಿಯರ ಬೇಡಿಕೆಗಳು

* ‘ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಿ ಮದ್ಯ ಮಾರಾಟದ ಆದಾಯದ ಶೇ 10ರಷ್ಟನ್ನು ಆ ನಿಧಿಗೆ ಮೀಸಲಿಡಿ.

* ಲಿವರ್ ಸಮಸ್ಯೆಯಿಂದ ಬಳಲುವವರ ಚಿಕಿತ್ಸಾವೆಚ್ಚವನ್ನು ಸರ್ಕಾರವೇ ಭರಿಸಬೇಕು.

* ರಕ್ಷಣೆ ಮತ್ತು ಸುರಕ್ಷಿತ ಪ್ರಯಾಣಕ್ಕೆ ಬಾರ್‌ಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. 

* ಮದ್ಯಪ್ರಿಯರ ನಿಗಮ–ಮಂಡಳಿ ಸ್ಥಾಪಿಸಿ ಸಾಲ ವಸತಿ ಸೌಕರ್ಯ ಒದಗಿಸಬೇಕು.

* ಮದ್ಯಪ್ರಿಯರ ಪ್ರತಿಭಾವಂತ ಮಕ್ಕಳಿಗೆ ಮಾಸಾಶನ ಕೊಡಬೇಕು.

* ಮದ್ಯ ಸೇವಿಸಿ ಮೃತಪಟ್ಟ ವ್ಯಕ್ತಿಗೆ ₹ 10 ಲಕ್ಷ ಪರಿಹಾರ ಕೊಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT