ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಬಸ್ ಪ್ರಯಾಣಕ್ಕೆ ಡಿಜಿಟಲ್ ಪಾವತಿ

Published 18 ಫೆಬ್ರುವರಿ 2024, 3:13 IST
Last Updated 18 ಫೆಬ್ರುವರಿ 2024, 3:13 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ ಪ್ರಯಾಣಿಕರ ಅನುಕೂಲಕ್ಕೆ ಆರಂಭಿಸಿರುವ ಡಿಜಿಟಲ್  ಸೌಲಭ್ಯಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಳಗಾವಿ ವಿಭಾಗದ 428 ಮಾರ್ಗಗಳಲ್ಲಿ ಪ್ರಯಾಣಿಕರು ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿಸಿ, ಟಿಕೆಟ್ ಪಡೆಯಬಹುದು.

ಬೆಳಗಾವಿ ವಿಭಾಗದಲ್ಲಿ ನಗರ ಘಟಕ–2 ಹೊರತುಪಡಿಸಿ ಉಳಿದ 5 ಘಟಕಗಳಲ್ಲಿ ಈ ಸೌಲಭ್ಯ ಫೆಬ್ರುವರಿ 6ರಂದು ಆರಂಭಿಸಲಾಯಿತು. 11 ದಿನಗಳಲ್ಲಿ ಪ್ರಯಾಣಿಕರು ಕ್ಯೂಆರ್‌ ಕೋಡ್‌ ಮೂಲಕ  ₹10.59 ಲಕ್ಷ ಪಾವತಿಸಿ, ಟಿಕೆಟ್‌ ಪಡೆದಿದ್ದಾರೆ.

‘ಚಿಲ್ಲರೆ ಕಾರಣಕ್ಕೆ ಪ್ರಯಾಣಿಕರು ಮತ್ತು ನಿರ್ವಾಹಕರ ಮಧ್ಯೆ ಗಲಾಟೆ ಆಗುತ್ತಿತ್ತು. ಡಿಜಿಟಲ್ ವ್ಯವಸ್ಥೆ ಮೂಲಕ ಪರಿಹಾರ ಸಿಕ್ಕಂತಾಗಿದೆ. ಇಂದು ಬಹುತೇಕರ ಬಳಿ ಮೊಬೈಲ್‌ಗಳಿವೆ. ಗೂಗಲ್‌ ಪೇ, ಫೋನ್‌ಪೇ ಸೇರಿ ಯುಪಿಐ ಆಧರಿತ ವ್ಯವಸ್ಥೆ ಮೂಲಕ ಹಣ ಪಾವತಿಸಿ, ಟಿಕೆಟ್‌ ಪಡೆಯಬಹುದು’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.

‘ಬೆಳಗಾವಿ ವಿಭಾಗದ ಬಸ್‌ಗಳು ರಾಜ್ಯದ ವಿವಿಧ ಜಿಲ್ಲೆಗಳ ಜತೆಗೆ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಸಹ ಕಾರ್ಯಾಚರಣೆ ನಡೆಸುತ್ತವೆ. ಮೂರು ರಾಜ್ಯಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಕ್ಯೂಆರ್‌ ಕೋಡ್‌ ಮೂಲಕ ಹಣ ಪಡೆದು ಟಿಕೆಟ್‌ ಕೊಡುತ್ತೇವೆ. 813 ನಿರ್ವಾಹಕರ ಹೆಸರಿನಲ್ಲಿ ಕ್ಯೂಆರ್‌ ಕೋಡ್‌ ರಚಿಸಿದ್ದೇವೆ. ಪ್ರಯಾಣಿಕರು ಪಾವತಿಸಿದ ಹಣ ನೇರವಾಗಿ ಸಂಸ್ಥೆಯ ಖಾತೆಗೆ ಜಮೆ ಆಗುತ್ತದೆ’ ಎಂದು ಅವರು ಹೇಳಿದರು.

‘ಬೆಳಗಾವಿ ನಗರದ ಆಯ್ದ ಮಾರ್ಗಗಳಲ್ಲಿ ನಗದು ರಹಿತ ಪ್ರಯಾಣಕ್ಕಾಗಿ ರಾಜ್ಯದಲ್ಲೇ ಪ್ರಥಮ ಬಾರಿ ಪರಿಚಯಿಸಿದ್ದ ಟ್ರಾವೆಲ್‌ (ರೆಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್‌ ಡಿವೈಸ್‌) ಕಾರ್ಡ್‌ಗಳ ಸೇವೆ ಈಗ ನಗರ ಮತ್ತು ಉಪ ನಗರಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವ ಎಲ್ಲ ಬಸ್‌ಗಳಿಗೂ ವಿಸ್ತರಿಸಿದ್ದೇವೆ. 2022ರ ಆಗಸ್ಟ್‌ನಿಂದ ಈವರೆಗೆ 6,715 ಟ್ರಾವೆಲ್‌ ಕಾರ್ಡ್‌ ವಿತರಿಸಲಾಗಿದೆ. ಪ್ರಯಾಣಿಕರು ಇದಕ್ಕೆ ಕನಿಷ್ಠ ₹50ರಿಂದ ₹200ವರೆಗೆ ರೀಚಾರ್ಜ್‌ ಮಾಡಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಟಿಕೆಟ್‌ ಮಷಿನ್‌ನಲ್ಲಿ ಸ್ಕ್ಯಾನ್‌ ಮಾಡಿ ಪ್ರಯಾಣಿಸುತ್ತಾರೆ’ ಎಂದರು.

ಅಂಕಿ–ಅಂಶ

ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗ 565 ಒಟ್ಟು ಮಾರ್ಗಗಳು428 ಯುಪಿಐ ವ್ಯವಸ್ಥೆ ಜಾರಿಯಲ್ಲಿರುವ ಮಾರ್ಗಗಳು₹10.59 ಲಕ್ಷ 11 ದಿನಗಳ ಅವಧಿಯಲ್ಲಿ ಸಂಗ್ರಹವಾದ ಮೊತ್ತ6715 ಟ್ರಾವೆಲ್‌ ಕಾರ್ಡ್‌ಗಳ ವಿತರಣೆ

ಕ್ಯುಆರ್‌ ಕೋಡ್‌ ಸ್ಕ್ಯಾನ್ ಮಾಡಿ ಹಣ ಪಾವತಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರಿಂದ ಚಿಲ್ಲರೆ ಸಮಸ್ಯೆ ಕೂಡ ನಿವಾರಣೆಯಾಗಿದೆ.
ಗಣೇಶ ರಾಠೋಡ, ವಿಭಾಗೀಯ ನಿಯಂತ್ರಣಾಧಿಕಾರಿ ವಾಯವ್ಯ ರಾಜ್ಯ ಸಾರಿಗೆ ಸಂಸ್ಥೆ, ಬೆಳಗಾವಿ
ಬಸ್‌ಗಳಲ್ಲಿ ಸಂಚರಿಸುವಾಗ ಚಿಲ್ಲರೆ ಕಿರಿಕಿರಿಯಾಗುತ್ತಿತ್ತು. ಕ್ಯೂಆರ್ ಕೋಡ‌್ ಮೂಲಕ ಹಣ ಪಾವತಿಗೆ ಅವಕಾಶ ಕೊಟ್ಟಿದ್ದರಿಂದ ಅನುಕೂಲವಾಗಿದೆ.
ಮಲ್ಲಿಕಾರ್ಜುನ ಅರಳಿಕಟ್ಟಿ, ಪ್ರಯಾಣಿಕ ಬೈಲೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT