ಭಾನುವಾರ, ಮೇ 16, 2021
25 °C
ಡಾ.ರಾಜಕುಮಾರ್ ಜನ್ಮದಿನ ಸರಳ ಆಚರಣೆ

‘ನಾಡು-ನುಡಿ ರಕ್ಷಣೆ: ರಾಜಕುಮಾರ್ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಭಾಷೆ ಮತ್ತು ನಟನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ನಟ ಸಾರ್ವಭೌಮ ಡಾ.ರಾಜಕುಮಾರ್ ಅವರು ಕನ್ನಡ ನಾಡು-ನುಡಿಯ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು’ ಎಂದು ಸಾಹಿತಿ ಶಿರೀಷ್ ಜೋಶಿ ನೆನೆದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಇಲ್ಲಿನ ವಾರ್ತಾಭವನದಲ್ಲಿ ಶುಕ್ರವಾರ ನಡೆದ ಡಾ.ರಾಜಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ರಾಜಕುಮಾರ್ ಅವರ ಭಾಗವಹಿಸುವಿಕೆಯಿಂದಲೇ ಗೋಕಾಕ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಅತ್ಯುತ್ತಮ ಅಭಿನಯ, ಹಿನ್ನೆಲೆ ಗಾಯನ, ಸ್ಪಷ್ಟ ಕನ್ನಡ ಮಾತುಗಳು ಮತ್ತು ಕನ್ನಡಪರ ಕಾಳಜಿಯಿಂದ ನಟಸಾರ್ವಭೌಮರಾಗಿ, ಕರ್ನಾಟಕ ರತ್ನವಾಗಿ ಹೊರಹೊಮ್ಮಿದರು’ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಭಾರ ಉಪ ನಿರ್ದೇಶಕ ಗುರುನಾಥ ಕಡಬೂರ, ‘ಸದಭಿರುಚಿಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿರುವ ರಾಜಕುಮಾರ್ ಅವರ ಸಾಧನೆ ಸ್ಮರಿಸಲು ಪ್ರತಿ ವರ್ಷ ಸರ್ಕಾರದಿಂದ ಏ.24ರಂದು ಅವರ ಜನ್ಮ ದಿನಾಚರಣೆ ಆಯೋಜಿಸಲಾಗುತ್ತಿದೆ’ ಎಂದರು.

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಡಾ.ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಇಲಾಖೆಯ ಸಿಬ್ಬಂದಿ ಅನಂತ ಪಪ್ಪು, ಎಂ.ಎಲ್. ಜಮಾದಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು