ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ನೆರೆ ಸಂತ್ರಸ್ತರಿಗೆ ಅನ್ನ ದಾಸೋಹ

ಅಥಣಿಯಲ್ಲಿ ಧರೆಪ್ಪ ಠಕ್ಕಣ್ಣವರ ಸೇವಾ ಕಾರ್ಯ
Last Updated 30 ಜುಲೈ 2021, 12:14 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರಿಗೆ ಮುಖಂಡ, ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಧರೆಪ್ಪ ಶಿವಪ್ಪ ಠಕ್ಕಣ್ಣವರ ಅನ್ನದಾಸೋಹ ಮಾಡುತ್ತಾ ಗಮನಸೆಳೆದಿದ್ದಾರೆ.

ತಮ್ಮ ವಾಹನದಲ್ಲಿ (ಲಾರಿ) ಅಕ್ಕಿ ಚೀಲಗಳನ್ನು, ಒಲೆ, ಅಡುಗೆಗೆ ಬೇಕಾಗುವ ವಸ್ತುಗಳನ್ನು ತುಂಬಿಕೊಂಡು ಕಾಳಜಿ ಕೇಂದ್ರಗಳ ಬಳಿಗೆ ಹೋಗುತ್ತಿದ್ದಾರೆ. ತಮ್ಮ ಸ್ನೇಹಿತರು ಮತ್ತು ಬೆಂಬಲಿಗರೊಂದಿಗೆ ಅಲ್ಲೇ ಅಡುಗೆ ತಯಾರಿಸಿ ಆಹಾರ ಪೂರೈಸುತ್ತಿದ್ದಾರೆ. ಮೂರು ದಿನಗಳಿನದ ಮಸಾಲಾಅನ್ನ ತಯಾರಿಸಿ ಬಾಳೆಹಣ್ಣಿನೊಂದಿಗೆ ಸಂತ್ರಸ್ತರಿಗೆ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ರಡ್ಡೆರಟ್ಟಿ ಪ್ರೌಢಶಾಲೆಯ ಕಾಳಜಿ ಕೇಂದ್ರದಲ್ಲಿ ಬೆಳಿಗ್ಗೆ 11 ಗಂಟೆಯಾದರೂ ತಾಲ್ಲೂಕು ಆಡಳಿತದಿಂದ ಸಂತ್ರಸ್ತರಿಗೆ ಉಪಾಹಾರ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ರಸ್ತೆ ಬಂದ್ ಮಾಡಿದ್ದರು. ಆ ಸಮಯದಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಊಟದ ವ್ಯವಸ್ಥೆಯನ್ನು ಧರೆಪ್ಪ ಮಾಡಿದರು.

‘ತಾಲ್ಲೂಕಿನ 10 ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುತ್ತಾ ಆಹಾರ ಪೂರೈಸುತ್ತಿದ್ದಾರೆ. ನಿಮ್ಮೆಲ್ಲ ಕಷ್ಟಗಳೊಂದಿಗೆ ಇದ್ದೇವೆ ಎಂಬ ಧೈರ್ಯ ತುಂಬುತ್ತಿದ್ದಾರೆ.

ಕಳೆದ ತಿಂಗಳು ಕೋವಿಡ್ ಸಂಕಷ್ಟದಲ್ಲೂ 15 ದಿನಗಳವರೆಗೆ ತಮ್ಮ ಮನೆಯಲ್ಲಿ ಅಡುಗೆ ಮಾಡಿಸಿ ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಿ ತಂದು ಆಸ್ಪತ್ರೆಯಲ್ಲಿನ ರೋಗಿಗಳು, ಕೊರೊನಾ ಯೋಧರು ಮತ್ತು ಬಡವರಿಗೆ ಹಂಚಿಕೆ ಮಾಡಿ ಗಮನಸೆಳೆದಿದ್ದರು. 2019ರಲ್ಲಿ ಪ್ರವಾಹ ಬಂದಿದ್ದ ಸಂದರ್ಭದಲ್ಲೂ ವಾರದವರೆಗೆ 10 ಕಾಳಜಿ ಕೇಂದ್ರಗಳಲ್ಲಿ ಆಹಾರ ಪದಾರ್ಥ ಪೂರೈಸಿ ಸಹಾಯ ಹಸ್ತ ಚಾಚಿದ್ದರು.

ಈಗ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಅವರಿಗೆ ನಿಶಾಂತ ದಳವಾಯಿ, ರವಿ ಬಡಕಂಬಿ, ಸಿದ್ದು ಕೊಕಟನೂರ, ತೌಸಿಫ್‌ ಸಾಂಗಲಿಕರ, ಪರಶುರಾಮ ಸೋನಕರ, ಬಸವರಾಜ ಠಕ್ಕಣ್ಣವರ, ಬಸವರಾಜ ಬಂಗಿ, ಸಂತೋಷ ಗಾಳಿ, ಮೌಲಾ ಬಾಗವಾನ, ವಿಜಯ ಜಕ್ಕಪ್ಪಣ್ಣವರ, ಅಮಿತ ಜಕಾತಿ, ಬಾಹುಬಲಿ ಅಜಪ್ಪಗೋಳ, ಮಲ್ಲುಗೌಡಾ ಸತ್ತಿ ಸಾಥ್‌ ನೀಡುತ್ತಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ಮಾನವೀಯತೆ ತೋರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೋವಿಡ್ ಸಮಯದಲ್ಲಿ ರೋಗಿಗಳಿಗೆ ಮತ್ತು ನಮಗಾಗಿ ದುಡಿಯುತ್ತಿರುವ ಸೇನಾನಿಗಳಿಗೆ ನೆರವಾಗಿದ್ದೆ. ಈಗ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದೇನೆ’ ಎಂದು ಧರೆಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT