ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿ ಉತ್ತೇಜನಕ್ಕೆ ಆರ್ಥಿಕ ನೆರವು

ದೃಢೀಕರಣ ಕಾರ್ಯಕ್ರಮಕ್ಕೂ ಚಾಲನೆ
Last Updated 20 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸಾವಯವ ಕೃಷಿ ಮಾಡುವ ರೈತರನ್ನು ಉತ್ತೇಜಿಸಲು ಹಾಗೂ ಅವರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಹೊಸ ಯೋಜನೆ ಜಾರಿಗೊಳಿಸಿದೆ.

ಸಾವಯವ ಕೃಷಿ ಉತ್ಪನ್ನಗಳ ಬಗೆಗಿನ ಅರಿವಿನಿಂದಾಗಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಗ್ರಾಹಕರು ಸಾವಯವ ಕೃಷಿ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ಈ ಬೇಡಿಕೆ ಪೂರೈಸುವಲ್ಲಿ ಮತ್ತು ಗುಣಮಟ್ಟ ಕಾಪಾಡುವಲ್ಲಿ ಕಂಡುಬರುತ್ತಿರುವ ನ್ಯೂನತೆಗಳನ್ನು ಸರಿಪಡಿಸಲು, ಮಾರುಕಟ್ಟೆ ಆಧಾರಿತವಾದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

ಯೋಜನೆ ಕುರಿತು 2018–19ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದೀಗ, ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ.

ಏನಿದು ಕಾರ್ಯಕ್ರಮ?

ರಾಜ್ಯದಲ್ಲಿ ಪ್ರಸ್ತುತ ಇರುವ 1 ಲಕ್ಷ ಹೆಕ್ಟೇರ್ ಪ್ರಮಾಣೀಕೃತ ಸಾವಯವ ಕೃಷಿ ಪ್ರದೇಶವನ್ನು ಮುಂದಿನ ಮೂರು ವರ್ಷಗಳಲ್ಲಿ 1.50 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿಗೆ ಪೂರಕವಾದ ವಿವಿಧ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲು, ಸಾವಯವ ಕೃಷಿ ಪದ್ಧತಿ ಅಳವಡಿಕೆ ಹಾಗೂ ಸಾವಯವ ದೃಢೀಕರಣಕ್ಕೆ ಒಳಪಡಿಸುವುದಕ್ಕಾಗಿ ರೈತರಿಗೆ ಸಹಾಯಧನವನ್ನೂ ನೀಡಲಾಗುವುದು.

ಈಗಾಗಲೇ ನೋಂದಾಯಿಸಲಾಗಿರುವ ಹಾಗೂ ಆಸಕ್ತ ಸಂಘ–ಸಂಸ್ಥೆಗಳು, ಕೃಷಿಕರ ಸಂಘಗಳು, ಖಾಸಗಿ ಸಂಸ್ಥೆಗಳು, ರೈತ ಉತ್ಪಾದನಾ ಸಂಸ್ಥೆಗಳು, ಕೃಷಿಕರು ಪ್ರಮಾಣೀಕರಣಕ್ಕಾಗಿ ಯೋಜನಾ ಪ್ರಸ್ತಾವಗಳನ್ನು ಕೃಷಿ ಇಲಾಖೆಗೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸಾವಯವ ಕೃಷಿ ದೃಢೀಕರಣಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯುತ್ತಿರುವವರು ಈ ಯೋಜನೆಯಡಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.

ಮಾರುಕಟ್ಟೆ ಒದಗಿಸಲು

‘ಈ ಯೋಜನೆಯಡಿ ಸಾವಯವ ದೃಢೀಕರಣವನ್ನು ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆಯ (ಕೆಎಸ್‌ಒಸಿಎ) ಮೂಲಕ ಮಾಡಲಾಗುತ್ತದೆ. ದೃಢೀಕರಣದ ಮೂಲಕ ಅವರಿಗೆ ಮಾರುಕಟ್ಟೆ ಒದಗಿಸಿಕೊಡುವ ಮಹತ್ವದ ಉದ್ದೇಶವನ್ನು ಹೊಂದಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಯಡಿ ಎಷ್ಟು ಮಂದಿ ಬೇಕಾದರೂ ಅರ್ಜಿ ಸಲ್ಲಿಸಬಹುದು. ಅವುಗಳನ್ನು ಮುಂದಿನ ಪ್ರಕ್ರಿಯೆಗಾಗಿ ಕಳುಹಿಸಿಕೊಡಲಾಗುವುದು. ರೈತ ಫಲಾನುಭವಿಯಾಗಿದ್ದಲ್ಲಿ ಕನಿಷ್ಠ 1 ಎಕರೆ ಹಿಡುವಳಿ ಪ್ರದೇಶ ಹೊಂದಿರಬೇಕು. ಸಂಘ ಸಂಸ್ಥೆಗಳ ಪ್ರಸ್ತಾವವಾಗಿದ್ದಲ್ಲಿ ಗುಚ್ಛ ಮಾದರಿಯಲ್ಲಿ ಕನಿಷ್ಠ 50 ಹೆಕ್ಟೇರ್‌ ಪ್ರದೇಶವಿರಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ. ಶೇ 75ರಷ್ಟು ಸಹಾಯಧನ ದೊರೆಯಲಿದೆ’ ಎಂದು ಮಾಹಿತಿ ನೀಡಿದರು.

ಸಹಾಯಧನ ಮಾಹಿತಿ

ಜೋಡಿ ಅಂಕಣದ ಎರೆಹುಳು ತೊಟ್ಟಿ ನಿರ್ಮಾಣಕ್ಕೆ ₹ 22ಸಾವಿರ ಘಟಕ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದ್ದು, ₹ 16500, ಜೈವಿಕ ಗೊಬ್ಬರ ತಯಾರಿಕಾ ಘಟಕಕ್ಕೆ ₹ 52ಸಾವಿರ ನಿಗದಿಪಡಿಸಲಾಗಿದ್ದು, ₹ 39ಸಾವಿರ ಹಾಗೂ 2 ಜಾನುವಾರು ನಿಲ್ಲುವ ಕೊಟ್ಟಿಗೆ ನಿರ್ಮಾಣಕ್ಕೆ ₹ 12ಸಾವಿರ ನಿಗದಿಪಡಿಸಲಾಗಿದ್ದು, ₹ 9ಸಾವಿರ ಸಹಾಯಧನ ದೊರೆಯುತ್ತದೆ. ಬೇಸಾಯ ಮಾಡುವಾಗ ರಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅವುಗಳ ಬದಲಿಗೆ ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ ಅಥವಾ ಸಗಣಿ ಮೊದಲಾದವುಗಳನ್ನು ಭೂಮಿಗೆ ಹಾಕುವಂತೆ ಮಾಡಲು ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ ಆರ್ಥಿಕ ನೆರವನ್ನೂ ಒದಗಿಸಲಾಗುತ್ತಿದೆ.

ದೃಢೀಕರಣ ಪಡೆದವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಸಹಾಯವಾಗಲಿದೆ. ಜಿಲ್ಲಾ ಪ್ರಾಂತ ಸಾವಯವ ಕೃಷಿಕರ ಸಂಘಗಳ ಒಕ್ಕೂಟದಲ್ಲಿ ಜಿಲ್ಲೆಯ 2,794 ಮಂದಿ ಸಾವಯವ ಕೃಷಿಕರು ನೋಂದಾಯಿಸಿ ಸದಸ್ಯರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಬಹಳಷ್ಟು ಮಂದಿ ಸಾವಯವ ಕೃಷಿ ಮಾಡುತ್ತಿದ್ದು, ಅವರನ್ನು ದೃಢೀಕರಣ ಕಾರ್ಯಕ್ರಮಕ್ಕೆ ಒಳಪಡಿಸಲು ಉದ್ದೇಶಿಸಲಾಗಿದೆ. ಸಾವಯವ ಕೃಷಿಯಲ್ಲಿ ತರಕಾರಿ, ಕಾಳುಗಳು, ಗೋಧಿ, ಭತ್ತ ಮೊದಲಾದವುಗಳನ್ನು ಇಲ್ಲಿನ ರೈತರು ಬೆಳೆಯುತ್ತಿದ್ದಾರೆ. ಕೆಲವರು ಸಾವಯವ ಬೆಲ್ಲವನ್ನೂ ಉತ್ಪಾದನೆ ಮಾಡುತ್ತಿದ್ದಾರೆ. ಅವರಿಗೆ ಮಾರುಕಟ್ಟೆ ಒದಗಿಸಲು ಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ 3,320 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಇದನ್ನು ಕೆಲವೇ ವರ್ಷಗಳಲ್ಲಿ 5ಸಾವಿರ ಹೆಕ್ಟೇರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT