ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಖುಷಿ ಖುಷಿಯಾಗಿ ಬನ್ನಿ...

ಕುಂದಾಪುರದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಪ್ರಾತ್ಯಕ್ಷಿಕೆ
Last Updated 29 ಏಪ್ರಿಲ್ 2018, 14:09 IST
ಅಕ್ಷರ ಗಾತ್ರ

ಕುಂದಾಪುರ: ಹಬ್ಬ ಹರಿದಿನ, ಜಾತ್ರೆ, ಉತ್ಸವಗಳಲ್ಲಿ ಹೇಗೆ ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆಯೋ ಅದೇ ರೀತಿಯಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಖುಷಿ ಖುಷಿಯಿಂದ ಬರಬೇಕು ಎನ್ನುವ ಕಾರಣಕ್ಕಾಗಿ ಮತಕೇಂದ್ರದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಸಾಕಷ್ಟು ಪೂರ್ವ ಸಿದ್ಧತೆಯನ್ನು ಮಾಡಿ
ಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಟಿ.ಭೂಬಾಲನ್‌ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದ ಎಸಿ ಕೋರ್ಟ್‌ ಹಾಲ್‌ನಲ್ಲಿ ಶನಿವಾರ ನಡೆದ ಎಲೆಕ್ಟ್ರಾನಿಕ್ ಮತಯಂತ್ರ ಪ್ರಾತ್ಯಕ್ಷಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಮತದಾರರು ಹೆಚ್ಚಿರುವ ಕುಂದಾಪುರ ವಡೇರಹೋಬಳಿಯ ಮಧುಸೂಧನ ಡಿ. ಕುಶೆ ಸರ್ಕಾರಿ ಪ್ರೌಢಶಾಲೆ ಹಾಗೂ ಕೋಣಿ ಗ್ರಾಮದ ಮೇಲ್ಕಟ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಂಕ್ ಮತಗಟ್ಟೆಗಳಾಗಿದೆ. ಇಲ್ಲಿನ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಅಂಗವಿಕಲರಿಗಾಗಿ ಮತಗಟ್ಟೆಯಲ್ಲಿ ರ‍್ಯಾಂಪ್‌ ನಿರ್ಮಾಣ ಮಾಡಲಾಗುವುದು. ಹಿರಿಯ ನಾಗರಿಕರನ್ನು ಮತಗಟ್ಟೆಗೆ ಕರೆತಂದು ಹಿಂದಕ್ಕೆ ಬಿಡಲು ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ವಾಹನ ಸೌಕರ್ಯವಿಲ್ಲದೆ ದೂರದಿಂದ ಕಾಲು ದಾರಿಯಲ್ಲಿ ಮತದಾನ ಕೇಂದ್ರಗಳಿಗೆ ಬರುವ ಹಾಗೂ ಕುದ್ರು ನಿವಾಸಿಗಳಾಗಿರುವ ಮತದಾರರಿಗೆ ಸಂಪರ್ಕ ಸೌಲಭ್ಯ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3 ಮಾದರಿ ಮತಗಟ್ಟೆ, 3 ಯುವ ಮತಗಟ್ಟೆ, ಒಂದು ಅಂಗವಿಕಲರಿಗೆ ಮತಗಟ್ಟೆ ಹಾಗೂ ಸರತಿ ಸಾಲು ರಹಿತ ಮತಗಟ್ಟೆಗಳನ್ನು ತೆರೆಯಲಾಗುವುದು. ಕ್ಷೇತ್ರ ವ್ಯಾಪ್ತಿಯ 215 ಮತಗಟ್ಟೆಗಳಲ್ಲಿ ರ‍್ಯಾಂಪ್‌, ವಿದ್ಯುತ್, ಗಾಲಿ ಕುರ್ಚಿ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮತಘಟ್ಟೆಗಳಿಗೆ ಅವಶ್ಯಕವಿರುವ ಭದ್ರತೆ ಕಲ್ಪಿಸಲಾಗುತ್ತಿದ್ದು, ಮತದಾರರು ಯಾವುದೇ ಭಯವಿಲ್ಲದೆ ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ಈ ಬಾರಿ ಚುನಾವಣೆಯಲ್ಲಿ ಸರತಿ ರಹಿತ ಮತಗಟ್ಟೆ ತೆರೆಯಲಾಗುತ್ತಿದೆ. ಮತದಾರರಿಗೆ ಮತಗಟ್ಟೆಯ ಹೊರಗೆ ಚೀಟಿ ವಿತರಿಸಿ, ಅವರ ಸರತಿ ಬಂದ ನಂತರ ಮತದಾನ ಮಾಡಬಹುದು. ನೀರು, ಶೌಚಾಲಯ, ದಿನಪತ್ರಿಕೆ ವ್ಯವಸ್ಥೆ ಇರುವ ವಿಶ್ರಾಂತಿ ಕೊಠಡಿ ತೆರೆಯಲಾಗುತ್ತದೆ. ಸೆಲ್ಫಿ ಪಾಯಿಂಟ್, ಟೆಚ್ ಪ್ಯಾಡ್ ವ್ಯವಸ್ಥೆ ಮಾಡಿದ್ದು, ಸೆಲ್ಪಿ ಪೋಟೋಗಳನ್ನು ವಾಟ್ಸ್ಅಫ್ 9606779366 ಕಳುಹಿಸಿದರೆ, ಆಯ್ಕೆಯಾದ ಪೋಟೋಗೆ ಚುನಾವಣೆ ನಂತರ ಬಹುಮಾನ ನೀಡಲಾಗುತ್ತದೆ. ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಇವಿಎಂ ಯಂತ್ರಗಳ ಭದ್ರತಾ ಕೊಠಡಿ ಸ್ಥಾಪಿಸಲಾಗುತ್ತದೆ. ಇದೇ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ನಡೆಸಲಾಗುತ್ತದೆ ಬೇರೆ ಕಡೆಯಿಂದ ಬರುವ ಮತಗಟ್ಟೆ ಸಿಬ್ಬಂದಿಗೆ ಮೇ 5 ರಂದು ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ನಾವುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ ಹಾಗೂ ಕುಂದಾಪುರ ಪುರಸಭೆ ಆರೋಗ್ಯಾಧಿಕಾರಿ ರಾಘವೇಂದ್ರ ಎಲೆಕ್ಟ್ರಾನಿಕ್ ಮತಯಂತ್ರದ ಪ್ರಾತ್ಯಕ್ಷಕೆ ನಡೆಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಹಾಯಕ ಅಧಿಕಾರಿ ರವಿ, ಕಂದಾಯ ಇಲಾಖೆ ಕಂದಾಯ ನಿರೀಕ್ಷಕ ನರಸಿಂಹ ಕಾಮತ್‌ ಇದ್ದರು.

7.20 ಲಕ್ಷ ವಶ

ಚುನಾವಣೆ ಘೋಷಣೆ ನಂತರ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ₹ 7,20,310 ವಶಕ್ಕೆ ಪಡೆಯಲಾಗಿದೆ. ದೂರಿನ ಹಿನ್ನೆಲೆಯಲ್ಲಿ 9 ಪ್ರಕರಣ ದಾಖಲಿಸಲಾಗಿದೆ. 6 ಪ್ರಕರಣಗಳ ಎಫ್ಐಆರ್ ಮಾಡಲಾಗಿದೆ. 1380.8 ಲೀಟರ್ ಮದ್ಯ ಹಾಗೂ 447.3 ಲೀಟರ್ ಬೀರ್ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಟಿ.ಭೂಬಾಲನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT