ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓತಾರಿ’ ಕುಟುಂಬಕ್ಕೆ ಮೂರ್ತಿ ತಯಾರಿಕೆಯೇ ಉದ್ಯಮ

ಅಕ್ಷರ ಗಾತ್ರ

ಚಿಕ್ಕೋಡಿ: ನಾಲ್ಕು ತಲೆಮಾರುಗಳಿಂದ ಹಿತ್ತಾಳೆ ಮತ್ತು ಬೆಳ್ಳಿಯಿಂದ ದೇವರ ಮೂರ್ತಿಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿರುವ ಪಟ್ಟಣದ 6 ಕುಟುಂಬಗಳ 20 ಕಲಾವಿದರು ಈ ಕಾಯಕವನ್ನೇ ಉದ್ಯಮವನ್ನಾಗಿ ರೂಪಿಸಿಕೊಂಡು ಬಂದಿದ್ದಾರೆ.

ಪಟ್ಟಣದ ಓತಾರಿ ಗಲ್ಲಿಯಲ್ಲಿ ನೆಲೆಸಿರುವ ಅನಿಲ ಓತಾರಿ, ಅಶೋಕ ಓತಾರಿ, ತಾನಾಜಿ ಓತಾರಿ, ಸಾಗರ ಓತಾರಿ, ವಿನೋದ ಓತಾರಿ, ಸಂತೋಷ ಓತಾರಿ ಕುಟುಂಬದವರು ವಂಶಪಾರಂಪರ್ಯವಾಗಿ ಬೆಳೆದುಕೊಂಡು ಬಂದಿರುವ ಮೂರ್ತಿ ತಯಾರಿಕೆ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಅದು ಅವರ ಬದುಕಿಗೆ ಆಸರೆಯೂ ಆಗಿದೆ.

100 ಗ್ರಾಂ.ನಿಂದ ಮೊದಲ್ಗೊಂಡು 50 ಕಿ.ಗ್ರಾಂ. ತೂಕದ ಹಿತ್ತಾಳೆಯ ದೇವರ ಮೂರ್ತಿಗಳನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸ್ಥಳೀಯವಾಗಿ ದೊರಕುವ ಕಚ್ಚಾ ಹಿತ್ತಾಳೆಯನ್ನು ಕರಗಿಸಿ ಯಂತ್ರದ ಮೂಲಕ ದೇವರ ಮೂರ್ತಿಯ ರೂಪ ನೀಡುತ್ತಾರೆ. ನಂತರ ಆ ಮೂರ್ತಿಗೆ ಕುಸುರಿ ಕೆತ್ತನೆ ಮಾಡಿ ಅತ್ಯಾಕರ್ಷಕವಾಗಿಸುತ್ತಾರೆ.

ಇವರಿಗೆ, ಬೆಳಗಾವಿ, ಹುಬ್ಬಳ್ಳಿ, ಪುಣೆ, ಕೊಲ್ಹಾಪುರ, ಸೊಲ್ಲಾಪುರ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆಯಿಂದ ದೇವರ ಮೂರ್ತಿಗಳನ್ನು ಮಾಡಿಕೊಡುವಂತೆ ಬೇಡಿಕೆಗಳು ಬರುತ್ತವೆ. ತಮಗೆ ಬರುವ ಬೇಡಿಕೆಗೆ ಅನುಗುಣವಾಗಿ ಮೂರ್ತಿಗಳನ್ನು ತಯಾರಿಸಿ ಕೊಡುತ್ತಾರೆ. ಗಣಪತಿ, ದುರ್ಗಾ, ಹನುಮಂತ, ಲಕ್ಷ್ಮಿ, ಶ್ರೀಕೃಷ್ಣ, ನರಸಿಂಹ ಸೇರಿದಂತೆ ವಿವಿಧ ದೇವರುಗಳ ಮೂರ್ತಿಗಳನ್ನು ಹಾಗೂ ಮಂದಿರದ ಕಳಸ ಮತ್ತು ದೇವರ ಮೂರ್ತಿಗಳ ಹಿಂಭಾಗದಲ್ಲಿ ಅಲಂಕಾರಕ್ಕಾಗಿ ಬಳಸುವ ಲೋಹದ ಪದಾರ್ಥವನ್ನೂ ಇವರು ತಯಾರಿಸುತ್ತಾರೆ.

‘ನಾಲ್ಕು ತಲೆಮಾರುಗಳಿಂದ ತಮ್ಮ ಕುಟುಂಬಗಳು ಮೂರ್ತಿ ತಯಾರಿಕೆ ಕಾಯಕವನ್ನು ಉದ್ಯಮದ ರೀತಿಯಲ್ಲಿ ಬೆಳೆಸಿಕೊಂಡು ಬಂದಿದ್ದೇವೆ. ದಿನವೀಡಿ ಮೂರ್ತಿ ತಯಾರಿಸಿದರೆ ದಿನವೊಂದಕ್ಕೆ ಖರ್ಚು ವೆಚ್ಚ ಕಳೆದ ಒಬ್ಬರಿಗೆ ₹ 500ರಿಂದ ₹600ರತನಕ ಆದಾಯ ಸಿಗುತ್ತದೆ. ಈ ಕಾಯಕ ನಮ್ಮ ಜೀವನಕ್ಕೆ ಆಧಾರವಾಗಿದೆ. ಇದು ನಮ್ಮ ಕುಲಕಸುಬೂ ಆಗಿದೆ. ಉದ್ಯಮದಂತೆಯೂ ಆಗಿ ಹೋಗಿದೆ’ ಎಂದು ರೋಹಿತ್ ರಮೇಶ ಓತಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಕ್ಷೇತ್ರದಲ್ಲೂ ಇಂದು ಆಧುನಿಕತೆ ಆವರಿಸುತ್ತಿದೆ. ಅದಕ್ಕೆ ಅನುಗುಣವಾಗಿ ಓತಾರಿ ಕುಟುಂಬಗಳೂ ಮೂರ್ತಿ ತಯಾರಿಕೆಯಲ್ಲೂ ಆಧುನಿಕತೆ ಅಳವಡಿಸಿಕೊಳ್ಳುವಲ್ಲಿ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ನವ ನವೀನ ತಾಂತ್ರಿಕತೆಯ ಯಂತ್ರೋಪಕರಣಗಳ ಅವಶ್ಯಕತೆ ಇದೆ. ಸಾಲ ಮಂಜೂರಿಗಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಸರ್ಕಾರ ತಮಗೆ ಆರ್ಥಿಕ ನೆರವು ಒದಗಿಸಿದರೆ ಉದ್ಯಮದಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ: 98443 75320 (ರೋಹಿತ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT