ರುಚಿಕರ ‘ಫುಲ್‌ ಮೀಲ್ಸ್‌’ಗೆ ಬನಶಂಕರಿ

ಮಂಗಳವಾರ, ಏಪ್ರಿಲ್ 23, 2019
31 °C
ಬಡಕಲ ಗಲ್ಲಿಯಲ್ಲಿದೆ ಈ ಮೆಸ್

ರುಚಿಕರ ‘ಫುಲ್‌ ಮೀಲ್ಸ್‌’ಗೆ ಬನಶಂಕರಿ

Published:
Updated:
Prajavani

ಬೆಳಗಾವಿ: ಶುದ್ಧ ಸಸ್ಯಾಹಾರಿ ‘ಫುಲ್‌ ಮೀಲ್ಸ್‌’ಗೆ ಇಲ್ಲಿನ ಬಡಕಲ್‌ಗಲ್ಲಿಯಲ್ಲಿರುವ ಬನಶಂಕರಿ ಮೆಸ್‌ ಪ್ರಸಿದ್ಧಿಯಾಗಿದೆ.

ಫುಲ್‌ಮೀಲ್ಸ್‌ನಲ್ಲಿ 2 ರೊಟ್ಟಿ ಅಥವಾ ಚಪಾತಿ, 2 ಬಗೆಯ ಪಲ್ಯ, ಜುಣಕಾ, ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ಕೋಸಂಬರಿ, ಅನ್ನ ಹಾಗೂ ಸಾಂಬಾರು ಕೊಡಲಾಗುತ್ತದೆ. ಗ್ರಾಹಕರು ಇಲ್ಲಿ ಹೊಟ್ಟೆ ತುಂಬಾ ಊಟ ಸವಿಯಬಹುದು. ಬೇಕೆನಿಸಿದಷ್ಟು ಪಲ್ಯ, ಅನ್ನ–ಸಾಂಬಾರನ್ನು ಇಲ್ಲಿ ಬಡಿಸಲಾಗುತ್ತದೆ. ಜುಣಕಾ ಉತ್ತರ ಕರ್ನಾಟಕ ಭಾಗದ ವಿಶೇಷ ಪಲ್ಯವಾಗಿದ್ದು, ಗ್ರಾಹಕರು ಮತ್ತಷ್ಟು ಕೇಳಿಪಡೆಯುತ್ತಾರೆ. ಇಲ್ಲಿ ಒಂದು ಊಟಕ್ಕೆ ₹ 70 ದರವಿದೆ.

ಶೇಂಗಾ ಹೋಳಿಗೆ ಈ ಮೆಸ್‌ನ ಮತ್ತೊಂದು ವಿಶೇಷ. ಅದಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಊಟದೊಂದಿಗೆ ಇದು ದೊರೆಯುವುದಿಲ್ಲ. ₹ 15ಕ್ಕೆ ಒಂದು ಹೋಳಿಗೆ. ಈಗ ಬೇಸಿಗೆ ಆಗಿರುವುದರಿಂದ ಪ್ರತಿದಿನ ರಾಗಿ ಅಂಬಲಿಯನ್ನು ಮಾಡಲಾಗುತ್ತಿದೆ. ₹ 10ಕ್ಕೆ ಒಂದು ಗ್ಲಾಸ್‌ ಖರೀದಿಸಬಹುದು. ಗೋಕಾಕ ಕರದಂಟ ಹಾಗೂ ಸಿಹಿಯಾದ ಲಡ್ಡುಗಳೂ ಇಲ್ಲುಂಟು. ಊಟ ಹಾಗೂ ಇನ್ನಿತರ ಆಹಾರ ಖಾದ್ಯಗಳನ್ನು  ಪಾರ್ಸಲ್‌ ಕೂಡ ನೀಡಲಾಗುತ್ತದೆ.

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಬಹಳ ಕಚೇರಿಗಳು, ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಠಾಣೆಗಳ ಸಿಬ್ಬಂದಿ ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಕುಟುಂಬ ಸಮೇತ ಬರುವವರೂ ಉಂಟು. ವ್ಯಾಸಂಗಕ್ಕಾಗಿ, ಕೆಲಸಕ್ಕೆಂದು ಬೇರೆ ಊರುಗಳಿಂದ ಬಂದು ರೂಂಗಳಲ್ಲಿ ಉಳಿದುಕೊಂಡಿರುವವರ ಅಚ್ಚುಮೆಚ್ಚಿನ ಮೆಸ್ ಇದಾಗಿದೆ.

ಗುಣಮಟ್ಟದ ಪದಾರ್ಥಗಳ ಬಳಕೆ:

‘ಆಹಾರ ಸಿದ್ಧಪಡಿಸಲು ಗುಣಮಟ್ಟದ ಪದಾರ್ಥ ಹಾಗೂ ತರಕಾರಿಗಳನ್ನು ಮಾತ್ರ ಬಳಸಲಾಗುತ್ತದೆ. ಅಡುಗೆಗೆ ಸೋಡಾ ಬಳಸುವುದಿಲ್ಲ. ರೊಟ್ಟಿಯನ್ನು ಕೈಯ್ಯಿಂದಲೆ ತಟ್ಟಿ, ಬೇಯಿಸಲಾಗುತ್ತದೆ. ಈ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಅನ್ನಕ್ಕಾಗಿ ಸೋನಾ ಮಸೂರಿ ಅಕ್ಕಿ ಉಪಯೋಗಿಸಲಾಗುತ್ತದೆ. ನಾಲ್ಕು ವರ್ಷಗಳಿಂದ ನಾಲ್ವರು ಸ್ನೇಹಿತರು (ಮಾಲೀಕರು) ಸೇರಿ ಹೋಟೆಲ್ ನಡೆಸಿಕೊಂಡು ಬಂದಿದ್ದೇವೆ. ಎಂದಿನಂತೆ ಗುಣಮಟ್ಟ ಹಾಗೂ ರುಚಿ ಕಾಯ್ದುಕೊಂಡು ಬರುತ್ತಿದ್ದೇವೆ. ಶುಚಿಗೂ ಆದ್ಯತೆ ನೀಡಿದ್ದೇವೆ. ಇದರಿಂದಾಗಿ ನಮ್ಮ ಊಟ ಗ್ರಾಹಕರಿಗೆ ಇಷ್ಟವಾಗುತ್ತಿದೆ‌’ ಎಂದು ಮಾಲೀಕರಲ್ಲೊಬ್ಬರಾದ ವಿಲಾಸ ಕೆರೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೊಬೈಲ್‌ ಬಳಸದಿರಲು ಮನವಿ:

‘ಹೋಟೆಲ್‌ಗೆ ಬರುವವರಲ್ಲಿ ಸರ್ಕಾರಿ ಕಚೇರಿಗಳ ನೌಕರರು ಹಾಗೂ ವಕೀಲರೇ ಹೆಚ್ಚು. ಸುತ್ತಲಿನ ಪಿಜಿ ಹಾಗೂ ಬಾಡಿಗೆ ರೂಂಗಳಲ್ಲಿರುವ ವಿದ್ಯಾರ್ಥಿಗಳು ಕೂಡ ಬರುತ್ತಾರೆ. ನಿತ್ಯ ಮಧ್ಯಾಹ್ನ 12ಗಂಟೆಯಿಂದ ಸಂಜೆ 4 ಹಾಗೂ ಸಂಜೆ 7ರಿಂದ ರಾತ್ರಿ 10ರವರೆಗೆ ಹೋಟೆಲ್‌ ತೆರೆದಿರುತ್ತದೆ. ಊಟ ಮಾಡುವಾಗ ಮೊಬೈಲ್‌ ಬಳಸುತ್ತಾ, ವಾಟ್ಸ್‌ಆ್ಯಪ್‌ ಹಾಗೂ ಫೇಸಬುಕ್‌ ನೋಡುತ್ತಾ ಕೂರದಂತೆ ಹೋಟೆಲ್‌ನಲ್ಲಿ ಭಿತ್ತಿಪತ್ರ ಅಂಟಿಸಿದ್ದೇವೆ. ಮನಸಾರೆ ಊಟ ಮಾಡಬೇಕು ಎನ್ನುವುದು ನಮ್ಮ ಆಶಯ’ ಎಂದು ತಿಳಿಸಿದರು. ಸಂಪರ್ಕಕ್ಕೆ: 98800 49419.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !