ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಅಕ್ರಮ ಸಾಗಣೆ: ₹25 ಲಕ್ಷ ಮೌಲ್ಯದ ಮದ್ಯ ವಶ

Published 25 ನವೆಂಬರ್ 2023, 7:04 IST
Last Updated 25 ನವೆಂಬರ್ 2023, 7:04 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಶುಕ್ರವಾರ, ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ₹25 ಲಕ್ಷ ಬೆಲೆಯ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿವಿಧ ಬ್ರ್ಯಾಂಡ್‌ಗಳ ದುಬಾರಿಯ ಮದ್ಯದ ಬಾಟಲಿಗಳನ್ನು 90 ರಟ್ಟಿನ ಬಾಕ್ಸ್‌ನಲ್ಲಿ ಇಡಲಾಗಿತ್ತು. ಈ ಬಾಕ್ಸ್‌ಗಳು ಕಾಣಿಸದಂತೆ ಟ್ರಕ್ಕಿನ ಒಳಭಾಗದಲ್ಲಿ ಮತ್ತೊಂದು ಕಬ್ಬಿಣದ ಫಲಕ ಅಳವಡಿಸಲಾಗಿತ್ತು. ಹೊರಗಿನಿಂದ ನೋಡಿದರೆ ಇಡೀ ಟ್ರಕ್‌ ಖಾಲಿ ಕಾಣಿಸುವಂತೆ ಮಾಡಲಾಗಿತ್ತು. ₹15 ಲಕ್ಷದ ವಾಹನವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕಣಕುಂಬಿ ಅಬಕಾರಿ ಸಿಬ್ಬಂದಿ ಯಥಾ ಪ್ರಕಾರ ಶುಕ್ರವಾರ ನಸುಕಿನ 4.30ಕ್ಕೆ ಗಸ್ತಿನಲ್ಲಿದ್ದರು. ಈ ವೇಳೆ ಖಾಲಿ ಟ್ರಕ್‌ವೊಂದು ಗೋವಾದಿಂದ ಖಾನಾಪುರ ಮಾರ್ಗವಾಗಿ ಬೆಳಗಾವಿಗೆ ಸಂಚರಿಸುತ್ತಿತ್ತು. ಟ್ರಕ್‌ ನಿಲ್ಲಿಸಿ ತಪಾಸಣೆ ಮಾಡಲಾಗಿ, ಅದರಲ್ಲಿ ಏನೂ ಕಾಣಿಸಲಿಲ್ಲ. ಖಾಲಿ ಟ್ರಕ್‌ ಇಷ್ಟು ದೂರ ಸಂಚಾರ ಮಾಡಲು ಏನು ಕಾರಣ ಎಂದು ಅನುಮಾನಗೊಂಡ ಅಧಿಕಾರಿಗಳು, ಕೂಲಂಕಶ ತಪಾಸಣೆ ಶುರು ಮಾಡಿದರು. ಹೊರಗಡೆಯಿಂದ ವಾಹನದ ಉದ್ದ ಹೆಚ್ಚು ಇದ್ದು, ಒಳಗಡೆಯಿಂದ ಕಡಿಮೆ ಜಾಗ ಕಂಡುಬಂತು. ತಪಾಸಣೆ ಮಾಡಿದಾಗ ಅಪಾರ ಪ್ರಮಾಣದ ಮದ್ಯವನ್ನು ಮುಚ್ಚಿಟ್ಟಿದ್ದು ಕಂಡುಬಂತು.

ಗೋವಾದಿಂದ ಖರೀದಿಸಿದ ಅಪಾರ ಪ್ರಮಾಣದ ಮದ್ಯವನ್ನು ಟ್ರಕ್‌ನಲ್ಲಿ ಮುಚ್ಚಿಟ್ಟು ಸಾಗಿಸಲಾಗುತ್ತಿತ್ತು. ವಾಹನ ಚಾಲಕ ಬಿಹಾರ ಮೂಲದ ಸುಭೋದ ಮಹತೊ (49) ಎಂಬಾತನನ್ನು ಬಂಧಿಸಲಾಗಿದೆ. ವಾಹನದ ಮಾಲೀಕನ ವಿರುದ್ಧ ಕೂಡ ದೂರು ದಾಖಲಿಸಲಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ.

ಅಬಕಾರಿ ಹೆಚ್ಚುವರು ಆಯುಕ್ತ ಡಾ.ವೈ.ಮಂಜುನಾಥ, ಜಂಟಿ ಆಯುಕ್ತ ಫಿರೋಜ್‌ಖಾನ್‌ ಕಿಲ್ಲೇದಾರ, ಉಪ ಆಯುಕ್ತೆ ಎಂ.ವಣಜಾಕ್ಷಿ, ಅಧೀಕ್ಷಕ ವಿಜಯಕುಮಾರ ಜೆ. ಹಿರೇಮಠ, ಉಪ ಅಧೀಕ್ಷಕ ರವಿ ಎಂ. ಮುರಗೋಡ, ಖಾನಾಪುರ ವಲಯ ನಿರೀಕ್ಷಕ ಮಲ್ಲೇಶ ಉಪ್ಪಾರ, ಬೆಳಗಾವಿ ಉಪ ವಿಭಾಗದ ನಿರೀಕ್ಷಕರಾದ ಮಂಜುನಾಥ ಗಲಗಲಿ, ಕಣಕುಂಬಿ ತನಿಖಾ ಠಾಣೆಯ ಬಾಳಗೌಡ ಪಾಟೀಲ, ಕರೆಪ್ಪ ಹೊಳೆನ್ನವರ, ಚಂದ್ರಶೇಖರ ಕ್ಷೀರಸಾಗರ, ಅಮೃತ ಪೂಜೇರಿ, ಶರಣಪ್ಪ ತಳವಾರ ಹಾಗೂ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡರು.

ಖಚಿತ ಮಾಹಿತಿ ಮೇರೆಗೆ ಯೋಜಿತ ದಾಳಿ ಸಿನಿಮೀಯ ಮಾದರಿಯಲ್ಲಿ ಮದ್ಯ ಸಾಗಣೆ ನಸುಕಿನ 4.30ಕ್ಕೆ ದಾಳಿ ಮಾಡಿದ ಅಬಕಾರಿ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT