ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ನನ್ನ ಕರ್ಮಭೂಮಿ: ಶೆಟ್ಟರ್‌

ಬೃಹತ್‌ ಬೈಕ್‌ ರ್‍ಯಾಲಿ ನಡೆಸಿದ ಯಡಿಯೂರ‍‍ಪ್ಪ, ಜಗದೀಶ ಶೆಟ್ಟರ್‌
Published 27 ಮಾರ್ಚ್ 2024, 15:56 IST
Last Updated 27 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ನನ್ನ ಕರ್ಮಭೂಮಿ. ಇಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಇಲ್ಲಿಯೇ ಇರುತ್ತೇನೆ. ನಾನು ಹೊರಗಿನವ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ನಗರಕ್ಕೆ ಬುಧವಾರ ಮೊದಲ ಸಲ ಬಂದ ಅವರು ಬೈಕ್‌ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ  ಆಗಿದ್ದ ವೇಳೆ ಇಲ್ಲಿನ ಸುವರ್ಣ ವಿಧಾನಸೌಧ ಉದ್ಘಾಟಿಸಿರುವೆ. ಎರಡು ಸಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿ ಮಾಡಿರುವೆ. ನೀರಾವರಿಗಾಗಿ ಹೋರಾಡಿರುವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ, ವಿರೋಧ ಪಕ್ಷದ ನಾಯಕನಾಗಿ ಪ್ರತಿ ಹಂತದಲ್ಲೂ ಈ ಜಿಲ್ಲೆಗಾಗಿ ದುಡಿದ್ದೇನೆ. ನನ್ನ ಹಾಗೂ ಬೆಳಗಾವಿ ಸಂಬಂಧ 30 ವರ್ಷಕ್ಕೂ ಹಿಂದಿನದ್ದು. ನಾನು ಹೊರಗಿನವನಲ್ಲ. ನಿಮ್ಮವನೇ’ ಎಂದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ‘ಜಗದೀಶ ಶೆಟ್ಟರ್‌ ಅವರಿಗೆ ಜಿಲ್ಲೆಯ ಕಾರ್ಯಕರ್ತರು, ನಾಯಕರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಈ ಹುಮ್ಮಸ್ಸು ನೋಡಿದರೆ ಶೆಟ್ಟರ್‌ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡಿದೆ’ ಎಂದರು.

ಇದಕ್ಕೂ ಮುನ್ನ ಕೋಟೆ ಆವರಣದಲ್ಲಿ ದುರ್ಗಾಮಾತೆಗೆ ಪೂಜೆ ಸಲ್ಲಿಸಿ ಶೆಟ್ಟರ್‌ ರ್‍ಯಾಲಿ ಆರಂಭಿಸಿದರು. ಅವರೊಂದಿಗೆ ಯಡಿಯೂರಪ್ಪ ಹಾಗೂ ಸ್ಥಳೀಯ ನಾಯಕರೂ ಭಾಗಿಯಾದರು. ಅಲ್ಲಿಂದ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಡಾ.ಅಂಬೇಡ್ಕರ್ ಉದ್ಯಾನ, ಛತ್ರಪತಿ ಶಿವಾಜಿ ಉದ್ಯಾನ, ಬಸವೇಶ್ವರ ವೃತ್ತ, ಛತ್ರಪತಿ ಸಂಭಾಜಿ ವೃತ್ತವನ್ನು ಸುತ್ತಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್‌ ಜಾರಕಿಹೊಳಿ, ಟಿಕೆಟ್‌ ಆಕಾಂಕ್ಷಿ ಆಗಿದ್ದ ಮಹಾಂತೇಶ ಕವಟಗಿಮಠ ಸೇರಿ ಹಲವು ನಾಯಕರು ಗೈರಾದರು.

ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ನಡೆಸಿದ ಚುನಾವಣಾ ರ್‍ಯಾಲಿ ವೇಳೆ ಸಂಸದೆ ಮಂಗಲಾ ಅಂಗಡಿ ಅವರು ಸ್ಕೂಟರ್‌ನಲ್ಲಿ ಹಿಂಬಾಲಿಸಿದರು – ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ನಡೆಸಿದ ಚುನಾವಣಾ ರ್‍ಯಾಲಿ ವೇಳೆ ಸಂಸದೆ ಮಂಗಲಾ ಅಂಗಡಿ ಅವರು ಸ್ಕೂಟರ್‌ನಲ್ಲಿ ಹಿಂಬಾಲಿಸಿದರು – ಪ್ರಜಾವಾಣಿ ಚಿತ್ರ

‘ಮೋದಿ ಟೀಕಿಸಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆ’

ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡಿದರೆ ತಾವು ದೊಡ್ಡ ನಾಯಕರಾಗುತ್ತೇವೆ ಎನ್ನುವ ಭ್ರಮೆ ಸಿದ್ದರಾಮಯ್ಯ ಅವರಿಗೆ ಇದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಮುಖ್ಯಮಂತ್ರಿಯಾಗಿ ಅವರೇ ಯೋಚಿಸಬೇಕು’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ‘ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ’ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು ‘ಈ ಮಾತಿಗೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಇಂತಹ ಮಾತು ಕಡಿಮೆ ಮಾಡಿ ನಿಮ್ಮ ಸಿ.ಎಂ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಿ’ ಎಂದರು. ‘ಮೋದಿ ಹೆಸರು ಹೇಳಿ ಮತ ಕೇಳಿದರೆ ಕಪಾಳಮೋಕ್ಷ ಮಾಡಿ’ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ‘ಶಿವರಾಜ್ ತಂಗಡಗಿ ಅಥವಾ ಕಾಂಗ್ರೆಸ್ಸಿಗೆ ಇದು ಶೋಭೆ ತರುವುದಿಲ್ಲ. ಅತಿರೇಕದ ಪರಮಾವಧಿ. ಹಗುರವಾಗಿ ಮಾತನಾಡಿದವರ ಮೇಲೆ ಆ ಪಕ್ಷವೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ‘ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸುವುದು ನಿಶ್ಚಯವಾಗಿದೆ. ಸುಮಲತಾ ಅವರಿಗೆ ಬೇರೆ ಅವಕಾಶ ಇದೆ. ಸಮಾಧಾನದಿಂದ ಇದ್ದರೆ ಮುಂದೆ ಸೂಕ್ತ ಸ್ಥಾನಮಾನ ಸಿಗಲಿದೆ. ದೆಹಲಿ ನಾಯಕರು ಅವರ ಜೊತೆ ಮಾತನಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಪ್ರಮುಖ ನಾಯಕರೆಲ್ಲ ಬೆಳಗಾವಿಯಲ್ಲಿ ಸಭೆಯಲ್ಲಿ ಸೇರಿದ್ದರು. ಒಮ್ಮತದಿಂದ ಜಗದೀಶ ಶೆಟ್ಟರ್ ಅವರನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ’ ಎಂದರು.

ಬೈಕಿನಲ್ಲೇ ಹಿಂಬಾಲಿಸಿದ ಸಂಸದೆ ಸಂಸದೆ ಮಂಗಲಾ ಅಂಗಡಿ

ಕೂಡ ಜಗದೀಶ ಶೆಟ್ಟರ್‌ ಅವರ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡರು. ಮುಂದೆ ಇದ್ದ ತೆರೆದ ವಾಹನದಲ್ಲಿ ಯಡಿಯೂರಪ್ಪ ಜಗದೀಶ ಶೆಟ್ಟರ್‌ ಹಾಗೂ ಸ್ಥಳೀಯ ನಾಯಕರು ಸಂಚರಿಸಿದರು. ಆದರೆ ಮಂಗಲಾ ಅಂಗಡಿ ಅವರನ್ನು ವಾಹನ ಹತ್ತಿಸಲೇ ಇಲ್ಲ. ಅವರು ಕಾರ್ಯಕರ್ತೆಯೊಬ್ಬರ ಸ್ಕೂಟರ್‌ ಹಿಂಬದಿಯಲ್ಲಿ ಕುಳಿತು ಸಂಚರಿಸಬೇಕಾಯಿತು. ಸ್ಥಳೀಯ ನಾಯಕರೂ ಅವರನ್ನು ವಾಹನ ಹತ್ತಿಸುವ ಯತ್ನ ಮಾಡಲಿಲ್ಲ. ನೆತ್ತಿ ಸುಡುವ ಬಿಸಿಲಲ್ಲೂ ಮೂರು ಕಿ.ಮೀ ಪ್ರಯಾಣ ಮಾಡಿ ಮೆರವಣಿಗೆ ಹಿಂಬಾಲಿಸಿದರು. ಶೆಟ್ಟರ್ ಅವರಿಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಅಭಯ ಪಾಟೀಲ ಕೂಡ ಬೈಕಿನಲ್ಲಿ ಸಂಚರಿಸಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT