ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಬರಿದಾದ ಕಲಭಾಂವಿ ಹೊಸಕೆರೆಯ ಒಡಲು

Published 20 ಮೇ 2024, 5:48 IST
Last Updated 20 ಮೇ 2024, 5:48 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕೆಲವು ವರ್ಷಗಳ ಹಿಂದೆ ತನ್ನೊಡಲು ತುಂಬಿಕೊಂಡು ಊರ ಪ್ರವೇಶ ದ್ವಾರದಲ್ಲೇ ಕೈಬೀಸಿ ಆಮಂತ್ರಣ ನೀಡುತ್ತ ನಿಂತಿದೆಯೆನೋ ಎಂಬಂತಿದ್ದ ತಾಲ್ಲೂಕಿನ ಕಲಭಾಂವಿ ಗ್ರಾಮದ ‘ಹೊಸಕೆರೆ’ ಈ ಬಾರಿ ಮಳೆರಾಯನ ಅವಕೃಪೆಯಿಂದ ಅಲ್ಲಲ್ಲಿ ಪಾದ ಮುಳುಗುವ ನೀರನ್ನು ಬಿಟ್ಟರೆ ಭಣಗುಟ್ಟುತ್ತ ನಿಂತಿದೆ.

‘ನರೇಗಾ ಯೋಜನೆಯಡಿ ಮಾಡಿದ ಕಾಮಗಾರಿಯ ಗುಂಡಿಗಳಿರುವ ಪ್ರದೇಶದಲ್ಲಿ ಮೊನ್ನೆ ಸುರಿದ ಅಲ್ಪಮಳೆಯಿಂದ ನೀರು ತುಂಬಿದೆ. ನೀವು ಹೋದವಾರ ಇಲ್ಲಿಗೆ ಬಂದಿದ್ದರೆ ಕೆರೆ ಭಣಭಣ ಎನ್ನುತ್ತಿತ್ತು’ ಎಂದು ಕೆರೆ ಬಳಿಯ ಕಟ್ಟೆಯ ಮೇಲೆ ಕುಳಿತಿದ್ದ ಗ್ರಾಮಸ್ಥರು ಹೇಳಿದರು.

4 ವರ್ಷಗಳಿಂದ ತುಂಬಿಲ್ಲ: ‘ಶತಮಾನದ ಹಳೆಯದಾದ ಈ ಕೆರೆ ತುಂಬಿದ್ದನ್ನು ನೋಡಿ ನಾಲ್ಕು ವರ್ಷಗಳು ಕಳೆದಿವೆ. ನಂತರದ ವರ್ಷಗಳಲ್ಲಿ ತುಂಬಿಲ್ಲ. ಕೆರೆ ಭರ್ತಿಯಾದರೆ ಊರ ಜನರಿಗೆ ಹೆಚ್ಚು ಅನುಕೂಲವಿದೆ’ ಎನ್ನುತ್ತಾರೆ ಗ್ರಾಮಸ್ಥರಾದ ಬಸಪ್ಪ ಗೂಗಿ ಮತ್ತು ಭೀಮಪ್ಪ ಬಡಿಗೇರ.

‘ಕೆರೆ ತುಂಬಿದಾಗ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರು. ದನಗಳಿಗೆ ಕುಡಿಯಲು ಇದೇ ನೀರು ಬಳಸಲಾಗುತ್ತಿತ್ತು. ದಶಕಗಳ ಹಿಂದಕ್ಕೆ ಹೋದರೆ, ಈ ಕೆರೆಯ ನೀರನ್ನು ಕುಡಿಯಲು ಮತ್ತು ಅಡುಗೆ ಮಾಡಲು ಜನರು ಬಳಸುತ್ತಿದ್ದರು’ ಎಂದು ಈ ಕೆರೆಯ ಉಪಯೋಗದ ಬಗ್ಗೆ ನೆನಪುಗಳನ್ನು ಬಸಪ್ಪ ಜೀವೊಜಿ ಹಂಚಿಕೊಂಡರು.

ಸಾಮರ್ಥ್ಯ ಹೆಚ್ಚಿಸಬೇಕಿದೆ: ಈ ಕೆರೆಯ ಹೂಳೆತ್ತಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿದರೆ, ಪಕ್ಕದ ಜಮೀನುಗಳಲ್ಲಿನ ಕೊಳವೆಬಾವಿಗಳ ಅಂತರ್ಜಲದ ಮೇಲ್ಮಟ್ಟ ಕಾಯ್ದುಕೊಳ್ಳಲು ಸಹಕಾರಿ ಆಗುತ್ತದೆ. ಹಿರಿಯರ ಕೆರೆಯ ನಿರ್ಮಾಣದ ಕಲ್ಪನೆಯೇ ಹಾಗಿತ್ತು’ ಎಂದು ಗ್ರಾಮದ ಮುಖಂಡ ಬಾಬಾಜಾನ ಬೆಳವಡಿ ತಿಳಿಸಿದರು.

‘ಹತ್ತಿರವೇ ಮಲಪ್ರಭಾ ನದಿ ಹರಿದಿದೆ. ನದಿಯಿಂದ ಕೆರೆ ತುಂಬಿಸುವ ಯೋಜನೆಯಿಂದ ಈ ಕೆರೆ ವಂಚಿತವಾಗಿದೆ. ಈ ಯೋಜನೆ ಜಾರಿಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

‘ಕಲಭಾಂವಿ ಗ್ರಾಮದ ಹೊಸಕೆರೆಗೆ ನೀರು ಭರ್ತಿಯಾಗಿ ಕೋಡಿ ಹರಿದರೆ, ಮರಳಿ ಅದು ಸಮೀಪದಲ್ಲಿರುವ ಮಲಪ್ರಭಾ ನದಿಗೆ ಹೋಗಿ ಸೇರುತ್ತದೆ. ಕೆರೆ ನೀರು ಕಡಿಮೆಯಾದರೆ ಅಲ್ಲಿಂದ ಮತ್ತೆ ನೀರು ತುಂಬಿಸಬಹುದಾಗಿದೆ’ ಎಂದು ತಿಳಿಸಿದರು.

ಒಂದು ಕಾಲಕ್ಕೆ ಕುಡಿಯುವ ಉದ್ದೇಶಕ್ಕೂ ಬಳಕೆಯಾಗುತ್ತಿದ್ದ ಕೆರೆ ನಾಲ್ಕು ವರ್ಷಗಳ ಹಿಂದೆ ಭರ್ತಿ ಹೂಳೆತ್ತಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT