ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚನ್ನಮ್ಮನ ಉತ್ಸವ’ಕ್ಕೆ ಕಳೆಗಟ್ಟಿದ ಕಿತ್ತೂರು

Published 23 ಅಕ್ಟೋಬರ್ 2023, 2:45 IST
Last Updated 23 ಅಕ್ಟೋಬರ್ 2023, 2:45 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇಲ್ಲಿಯ ಕೋಟೆ ಆವರಣದಲ್ಲಿ ಅ. 23ರಿಂದ 25ರವರೆಗೆ ವರ್ಣರಂಜಿತವಾಗಿ ನಡೆಯಲಿರುವ ರಾಣಿ ‘ಚನ್ನಮ್ಮನ ಕಿತ್ತೂರು ಉತ್ಸವ’ಕ್ಕೆ ಪಟ್ಟಣ ನವವಧುವಿನಂತೆ ಸಜ್ಜಾಗಿ ನಿಂತಿದೆ.

ವಿಜಯದಶಮಿ ಹಬ್ಬವೂ ಜತೆಯಲ್ಲಿ ಬಂದಿರುವುದರಿಂದ ಉತ್ಸವವು ಹೆಚ್ಚು ಕಳೆಗಟ್ಟುವಂತೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಗಿರುವ ಆಶ್ವಾರೂಢ ಚನ್ನಮ್ಮನ ಪ್ರತಿಮೆ, ಮಹಾದ್ವಾರ, ವರ್ತುಲ, ಅರಳಿಕಟ್ಟಿ ವೃತ್ತ, ಕೋಟೆ, ಕೋಟೆಯ ಒಳಾವರಣ, ಬತೇರಿ, ರಸ್ತೆಗಳ ಇಕ್ಕೆಲಗಳು, ಸರ್ಕಾರಿ ಕಚೇರಿಗಳು ವಿಶಿಷ್ಟ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಕಳೆದ ವರ್ಷದಿಂದ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಬೊಮ್ಮಾಯಿ ಸರ್ಕಾರ ಘೋಷಿಸಿದೆ. ಹೀಗಾಗಿ ಅನುದಾನವು ಕೋಟಿಗಳ ಲೆಕ್ಕದಲ್ಲಿ ಬರುತ್ತಿದೆ. ಇದರಿಂದ ಮುಖ್ಯ ವೇದಿಕೆ ಸೇರಿ ಸಮಾನಾಂತರ ಎರಡು ವೇದಿಕೆಗಳಿಗೆ ಈ ಸಲವೂ ಸ್ಥಳ ಗುರುತಿಸಲಾಗಿದೆ. ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ‘ಸರದಾರ ಗುರುಸಿದ್ದಪ್ಪ’ ಮತ್ತು ಸರ್ಕಾರಿ ಬಾಲಕಿಯರು ಪ್ರೌಢಶಾಲೆ ಬಳಿಯಿರುವ ರಾಜಗುರು ಗುರುಭವನದಲ್ಲಿ ‘ವಡ್ಡರ ಯಲ್ಲಣ್ಣ’ ಹೆಸರನ್ನು ಸಮಾನಾಂತರ ವೇದಿಕೆಗೆ ಇಡಲಾಗಿದೆ.

ಈ ಬಾರಿ ಉತ್ಸವವಕ್ಕೆ ಸರ್ಕಾರ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕೋಟೆಯ ಸುತ್ತಲೂ ಸ್ವಚ್ಛತೆ ಕಾಮಗಾರಿ ಇದೇ ಮೊದಲ ಸಲ ಕೈಗೊಳ್ಳಲಾಗಿದೆ. ಕೋಟೆಯ ಒಳಾವರಣದಲ್ಲಿ ಈ ಬಾರಿ ವಸ್ತುಸಂಗ್ರಹಾಲಯ, ತಿನಿಸು ಕಟ್ಟೆ ನಿರ್ಮಿಸಲಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದ್ದಾರೆ.

10 ಸಾವಿರ ಆಸನ: ಕೋಟೆ ಆವರಣದೊಳಗೆ ನಿರ್ಮಾಣಗೊಂಡಿರುವ 6 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್‌ ಶಾಮಿಯಾನ ಉತ್ಸವದ ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅ. 23 ರಂದು ಸಂಜೆ 7ಕ್ಕೆ ಅಧಿಕೃತವಾಗಿ ಉತ್ಸವ ಉದ್ಘಾಟಿಸುವರು.

ಮೂರು ದಿನಗಳ ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಮಳೆಯಾದರೂ ನೀರು ಸೋರಿಕೆ ಆಗದಂತೆ ಮುಖ್ಯ ವೇದಿಕೆ ಹಾಗೂ ವಸ್ತು ಮಾರಾಟ, ಪ್ರದರ್ಶನ ಮಳಿಗೆಯನ್ನು ‘ವಾಟರ್‌ಪ್ರೂಫ್‌’ ಆಗಿ ನಿರ್ಮಿಸಲಾಗಿದೆ.

ಅಷ್ಟ ದಿಕ್ಕುಗಳಿಂದ ಬರುವ ಜನರನ್ನು ಸ್ವಾಗತಿಸಲು ತಾತ್ಕಾಲಿಕ ‘ಮಹಾದ್ವಾರ’ಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸರದಾರ ಗುರುಸಿದ್ದಪ್ಪ ಸೇರಿದಂತೆ ಸಂಸ್ಥಾನ ಕಾಲದ ಅನೇಕ ವೀರರ ನಾಮಕರಣ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನ, ಜಲಕ್ರೀಡೆ ಏರ್ಪಡಿಸಲಾಗಿದೆ. ಕಬಡ್ಡಿ, ವಾಲಿಬಾಲ್, ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಯ ಕಣಗಳಿಗೆ ಅಂತಿಮ ರೂಪ ನೀಡುವ ಕೆಲಸ ಭಾನುವಾರ ಸಂಜೆಯವರೆಗೂ ಬಿರುಸಿನಿಂದ ನಡೆದಿತ್ತು. ಬೆಳಗಾವಿ ಜಿಲ್ಲಾಡಳಿತದ ನಿರ್ದೇಶನದಂತೆ, ಲೋಕೋಪಯೋಗಿ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಉತ್ಸವದ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದ್ದು, ಸಮಗ್ರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕ್ಯಾಮೆರಾ ಕಣ್ಗಾವಲು

ಉತ್ಸವಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಎಸ್‌ಪಿ, ಇಬ್ಬರು ಡಿವೈಎಸ್‌ಪಿ, ಐವರು ಸಿಪಿಐ, 16 ಎಸ್ಐ ಸೇರಿ 450 ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

ಪಟ್ಟಣದ ವಿವಿಧೆಡೆ 40 ಕಡೆ ಸಿಸಿಟಿವಿ ಕ್ಯಾಮೆರಾಗಳು ಹದ್ದಿನಗಣ್ಣು ನೆಟ್ಟಿವೆ. ಗೊಂದಲ ಸೃಷ್ಟಿಸುವವರು, ಕಿಸೆಗಳ್ಳರ ಮೇಲೆ ಕಣ್ಗಾವಲು ಇಡಲಾಗಿದೆ.

ಮಾಧ್ಯಮ ಕೇಂದ್ರ

ಮುಖ್ಯವೇದಿಕೆಯ ಹಿಂಭಾಗದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ಪತ್ರಿಕಾಗೋಷ್ಠಿ ನಡೆಸಲು ಯೋಗ್ಯವಾಗುವಂತೆ ಅಲ್ಲಿನ ವ್ಯವಸ್ಥೆ ರೂಪಿಸಲಾಗಿದೆ.

ಸಂತೆ ರದ್ದು; ಮದ್ಯ ಮಾರಾಟ ಸ್ಥಗಿತ

ಉತ್ಸವದ ನಿಮಿತ್ತ ಅ. 23 ರಂದು ನಡೆಯಲಿರುವ ಸೋಮವಾರ ಪೇಟೆಯ ಸಂತೆಯನ್ನು ರದ್ದು ಪಡಿಸಲಾಗಿದೆ. ತಾಲ್ಲೂಕಿನಾದ್ಯಂದ ಮೂರು ದಿನಗಳವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ವಿಜಯಜ್ಯೋತಿಗೆ ಸ್ವಾಗತ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯಿಂದ ಅ. 23ರಂದು ಬೆಳಿಗ್ಗೆ 10 ಕ್ಕೆ ಚನ್ನಮ್ಮ ವರ್ತುಲಕ್ಕೆ ಆಗಮಿಸುವ ವಿಜಯಜ್ಯೋತಿಯನ್ನು ಸಚಿವ ಸತೀಶ ಜಾರಕಿಹೊಳಿ ಬರಮಾಡಿಕೊಳ್ಳುವರು. ಅನಂತರ ಪಟ್ಟಣದಲ್ಲಿ ಜ್ಯೋತಿಯ ಮೆರವಣಿಗೆ ನಡೆಯಲಿದೆ. ನೆಲದ ಕಲೆ ಬಿಂಬಿಸುವ ಕಲಾತಂಡಗಳು ಇದರಲ್ಲಿ ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT