ನಿಪ್ಪಾಣಿ: ನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿರುವ ‘ಪ್ರಜಾವಾಣಿ ಉತ್ತಮ ಓದುಗ’ ಸ್ಪರ್ಧೆಯಲ್ಲಿ ಪ್ರಶಿಕ್ಷಣಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಒಂದು ವಾರದಿಂದ ನಡೆದ ‘ಓದುವ ಹಬ್ಬ’ ಶನಿವಾರ ಕೊನೆಗೊಳ್ಳಲಿದೆ. ಕೊನೆಯ ದಿನ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಮೊದಲ ಮೂವರಿಗೆ ಪುಸ್ತಕ ಬಹುಮಾನ ಹಾಗೂ ಇಬ್ಬರು ‘ಉತ್ತಮ ಓದುಗೆ’ ನಗದು ಪ್ರಶಸ್ತಿ ನೀಡಲಾಗುವುದು.
ಕಾಲೇಜಿನಲ್ಲಿ ಚಟುವಟಿಕೆ ಆಧರಿತ ಅವಧಿ ಭಾಗವಾಗಿ ಇದನ್ನು ಮಾಡಲಾಗುತ್ತಿದೆ. ಪ್ರತಿ ದಿನವೂ 30 ‘ಪ್ರಜಾವಾಣಿ’ ಪ್ರತಿಗಳು ಹಾಗೂ 5 ಡೆಕ್ಕನ್ ಹೆರಾಲ್ಡ್ ಪ್ರತಿಗಳನ್ನು ಸಂಜೆ ಒಂದು ತಾಸು ಪ್ರಶಿಕ್ಷಣಾರ್ಥಿಗಳು ಓದುತ್ತಿದ್ದಾರೆ. ಮೊದಲ ವಾರ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ 35 ಪ್ರಶಿಕ್ಷಣಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ತೊಡಗಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಬಸನಗೌಡ ಪಾಟೀಲ ತಿಳಿಸಿದ್ದಾರೆ.
ಸುದ್ದಿ, ಲೇಖನ, ವಿಶೇಷ ವರದಿ, ಸಂಪಾದಕೀಯಗಳ ಓದು–ಬರಹ– ಸಂಗ್ರಹ ಇದರಲ್ಲಿ ಸೇರಿದೆ. ಸ್ಥಳೀಯ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸುದ್ದಿ, ಕ್ರೀಡಾ ಸುದ್ದಿಗಳು, ಅಭಿಮತ, ಆಳ– ಅಗಲ, ಒಳನೋಟ, ವಾಚಕರ ವಾಣಿ, ಭಾನುವಾರದ ಪುರವಣಿ, ಶಿಕ್ಷಣ, ಕ್ಷೇಮ ಕುಶಲ, ತಂತ್ರಜ್ಞಾನ, ಸ್ಪರ್ಧಾವಾಣಿ, ಸಿನಿಮಾ ಪುರವಣಿ, ಭೂಮಿಕಾ ಪುರವಣಿ ಸೇರಿದಂತೆ ಒಂದು ವಾರದಲ್ಲಿ ಬರುವ ಎಲ್ಲ ಅಂಶಗಳನ್ನೂ ಓದಿನಲ್ಲಿ ಕಡ್ಡಾಯ ಮಾಡಲಾಗಿದೆ.
ಶನಿವಾರ 50 ಅಂಕಗಳ ಒಂದು ತಾಸಿನ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚು ಅಂಕ ಗಳಿಸುವ ಮೊದಲ ಮೂವರಿಗೆ ಪುಸ್ತಕ ಬಹುಮಾನ ನೀಡಲಾಗುವುದು. ಜತೆಗೆ ‘ಉತ್ತಮ ಪ್ರಜಾವಾಣಿ ಓದುಗ’, ‘ಉತ್ತಮ ಡೆಕ್ಕನ್ ಹೆರಾಲ್ಡ್ ಓದುಗ’ರನ್ನು ಆಯ್ಕೆ ಮಾಡಿ ನಗದು ಬಹುಮಾನ ನೀಡಲಾಗುತ್ತದೆ.
‘ಪ್ರತಿ ದಿನ ‘ಪ್ರಜಾವಾಣಿ’ ಓದುವುದರಿಂದ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅನುಕೂಲವಾಗುತ್ತದೆ. ಮುಖ್ಯ ಶಿಕ್ಷಕರ ಅರ್ಹತಾ ಪರೀಕ್ಷೆ, ಕೆಇಎಸ್, ಪಿಡಿಒ, ಎಫ್‍ಡಿಎ, ಎಸ್‍ಡಿಎ, ಕೆಎಎಸ್, ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇದೇ ಪತ್ರಿಕೆ ಓದಬೇಕು. ನಿಖರವಾದ, ನಿಜವಾದ ಹಾಗೂ ವಿಶ್ವಾಸಾರ್ಹ ವಿಷಯಗಳು ಪ್ರಜಾವಾಣಿಯಲ್ಲಿಯೇ ಬರುತ್ತವೆ. ಹಾಗಾಗಿ, ಈ ಪತ್ರಿಕೆ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಪ್ರಾಚಾರ್ಯ ಹೇಳೀದರು.
ನಿಪ್ಪಾಣಿ ನಗರದ ಕೆಎಲ್‍ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಪ್ರಜಾವಾಣಿ’ ಓದಿನಲ್ಲಿ ನಿರತರಾದ ಪ್ರಶಿಕ್ಷಣಾರ್ಥಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.