ಸೋಮವಾರ, ಸೆಪ್ಟೆಂಬರ್ 20, 2021
23 °C
ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾಹಿತಿ

ಹುಬ್ಬಳ್ಳಿ: ₹ 600 ಕೋಟಿ ವೆಚ್ಚದಲ್ಲಿ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೆಎಲ್‌ಇ ಸೊಸೈಟಿಯಿಂದ ಹುಬ್ಬಳ್ಳಿಯಲ್ಲಿ 35 ಎಕರೆ ಜಮೀನು ಖರೀದಿಸಲಾಗಿದ್ದು, ಅಲ್ಲಿ ₹ 600 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಕಾಲೇಜು, ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ನಿರ್ಮಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂದಿನ ಯೋಜನೆಗಳ ಮಾಹಿತಿ ನೀಡಿದರು.

‘ಬೆಂಗಳೂರಿನಲ್ಲಿ ₹ 600 ಕೋಟಿ ಹಾಸಿಗೆಗಳ ಆಸ್ಪತ್ರೆಯನ್ನು ₹ 300 ಕೋಟಿ ವೆಚ್ಚದಲ್ಲಿ 2 ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಮುಂಬೈನಲ್ಲಿ 4 ಎಕರೆ ಜಾಗದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಶಾಲೆಯನ್ನು 2 ವರ್ಷಗಳಲ್ಲಿ ನಿರ್ಮಿಸಲಾಗುವುದು. ಪುಣೆಯಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ₹ 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 4 ತಿಂಗಳಲ್ಲಿ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

ಆಸ್ಪತ್ರೆ, ಶಾಲೆ: ‘ಈ ಭಾಗದಲ್ಲಿ ಕ್ಯಾನ್ಸರ್‌ ಆಸ್ಪತ್ರೆಯ ಕೊರತೆ ನೀಗಿಸಲು ಆಸ್ಪತ್ರೆ ನಿರ್ಮಿಸಲಾಗುವುದು. ನಗರದಲ್ಲಿ ₹ 120 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ಆರಂಭಿಸಲಾಗಿದ್ದು, ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಸಾಂಬ್ರಾ ವಿಮಾನನಿಲ್ದಾಣ ರಸ್ತೆಯಲ್ಲಿ ಹೋಮಿಯೋಪತಿ ಆಸ್ಪತ್ರೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗುವುದು. ಹಾರೊಗೇರಿ ಹಾಗೂ ಸಂಕೇಶ್ವರದಲ್ಲಿ ದಾನಿಗಳಿಂದ ದೊರೆತ ತಲಾ 4 ಎಕರೆ ಜಾಗದಲ್ಲಿ 3 ವರ್ಷಗಳಲ್ಲಿ ಶಾಲೆಗಳನ್ನು ನಿರ್ಮಿಸಲಾಗುವುದು. ಚಿಕ್ಕೋಡಿಯಲ್ಲಿ ಸಿಬಿಎಸ್‌ಇ ಶಾಲಾ ಕಟ್ಟಡ ನಿರ್ಮಾಣ ವರ್ಷದೊಳಗೆ ಪೂರ್ಣಗೊಳ್ಳಲಿದೆ. ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ. ಕೆಎಲ್‌ಇ ಆಸ್ಪತ್ರೆಯಲ್ಲಿ ಮತ್ತಷ್ಟು ವಿಶೇಷ ವಿಭಾಗಗಳನ್ನು ಆರಂಭಿಸಲಾಗುವುದು’ ಎಂದು ವಿವರಿಸಿದರು.

ಪ್ರಜಾಪ್ರಭುತ್ವದ ತಳಹದಿಯಲ್ಲಿ: ‘104 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯು, ಸತ್ಯ, ಪ್ರೇಮ, ಸೇವೆ, ಸ್ವಾರ್ಥ, ತ್ಯಾಗ ಧ್ಯೇಯಗಳೊಂದಿಗೆ ಮುನ್ನಡೆಯುತ್ತಿದೆ. ಆಡಳಿತ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. ಪ್ರಜಾಪ್ರಭುತ್ವದ ತಳಹದಿ ಮೇಲೆ ನಡೆಯುತ್ತಿದೆ. ಸದಸ್ಯರು ನಮ್ಮ ಮೇಲಿಟ್ಟ ವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಿದ್ದೇವೆ. ಹೀಗಾಗಿಯೇ, ಸಂಸ್ಥೆಯು ಶಿಕ್ಷಣ, ಆರೋಗ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅದ್ವಿತೀಯವಾದುದನ್ನು ಸಾಧಿಸಿದೆ. 270ಕ್ಕೂ ಹೆಚ್ಚು ಅಂಗ ಸಂಸ್ಥೆಗಳು ದೇಶದಾದ್ಯಂತ ವಿಸ್ತರಿಸಿವೆ. 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 16ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಜಾತ್ಯತೀತ ಹಾಗೂ ಭಾಷಾತೀತವಾಗಿ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಈ ಬಾರಿಯ ಬಜೆಟ್‌ ₹ 2ಸಾವಿರ ಕೋಟಿ ಮೀರಲಿದೆ’ ಎಂದರು.

ನಿರ್ಗಮಿತ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತನಾಡಿ, ‘ಸಂಸ್ಥೆಯ ಯಾರಲ್ಲೂ ಭಿನ್ನಾಭಿ‍ಪ್ರಾಯವಿಲ್ಲ, ಹೀಗಾಗಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದು ಬಹಳ ವಿಶೇಷ. ಇಂಥ ದೊಡ್ಡ ಸಂಸ್ಥೆಯಲ್ಲಿ ಅಗತ್ಯವಾಗಿ ಬೇಕಾದ ಸಮನ್ವಯತೆ ಎಲ್ಲರಲ್ಲೂ ಇದೆ. ನಿರ್ದೇಶಕರಿಗೂ ಜವಾಬ್ದಾರಿ ಕೊಡಲಾಗುತ್ತಿದೆ. ಸಪ್ತರ್ಷಿಗಳ ತ್ಯಾಗ ಹಾಗೂ ದಾನಿಗಳಿಂದ ಸಂಸ್ಥೆ ಬೆಳೆದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದೇವೆ. ಹೀಗಾಗಿ, ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದಿದೆ’ ಎಂದು ತಿಳಿಸಿದರು.

ಪ್ರಾಮಾಣಿಕ ಪ್ರಯತ್ನ: ‘ನನಗೆ 80 ವರ್ಷ ವಯಸ್ಸಾಗಿದೆ. ಆರೋಗ್ಯದ ದೃಷ್ಟಿಯಿಂದಾಗಿ ಹುದ್ದೆಯಲ್ಲಿ ಮುಂದುವರಿಯಲು ಬಯಸಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲೇ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಹಿರಿಯರ ಮಾರ್ಗದರ್ಶನ ಹಾಗೂ ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ನೂತನ ಅಧ್ಯಕ್ಷ ಮಹಾಂತೇಶ ಕೌಜಲಗಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು