ಗ್ರಾಮ ಪಂಚಾಯಿತಿ ವಿಸರ್ಜನೆ ಬೆದರಿಕೆ ಹಾಕಿದ ಮಹಾರಾಷ್ಟ್ರ: ಕನ್ನಡಿಗರ ಪ್ರತಿರೋಧ
ವಿಜಯಪುರ: ‘ಮೂಲಸೌಕರ್ಯ ಕಲ್ಪಿಸದಿದ್ದರೆ ಕರ್ನಾಟಕ ಸೇರುತ್ತೇವೆ’ ಎಂದು ಠರಾವು ಪಾಸು ಮಾಡಿರುವ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲ್ಲೂಕಿನ 11 ಗ್ರಾಮ ಪಂಚಾಯ್ತಿಗಳನ್ನು ವಿಸರ್ಜನೆ ಮಾಡುವುದಾಗಿ, ಗ್ರಾಮ ಪಂಚಾಯ್ತಿಗಳ ನೌಕರರನ್ನು ಸೇವೆಯಿಂದ ವಜಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರ ಸರ್ಕಾರದ ಎಚ್ಚರಿಕೆಗೆ ಬಗ್ಗದ ಗಡಿನಾಡ ಕನ್ನಡಿಗರು ಈ ಸಂಬಂಧ ಅಕ್ಕಲಕೋಟ ತಾಲ್ಲೂಕಿನ ತಡವಳದಲ್ಲಿ ಸಭೆ ನಡೆಸಿ, ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
‘ಗ್ರಾಮ ಪಂಚಾಯ್ತಿಗಳನ್ನು ವಿಸರ್ಜನೆ ಮಾಡಿದರೂ, ನೌಕರರನ್ನು ಸೇವೆಯಿಂದ ವಜಾ ಮಾಡಿದರೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಗಲ್ಲು ಶಿಕ್ಷೆ ನೀಡಿದರೂ ಹೆದರುವುದಿಲ್ಲ. ಮೊದಲು ಮೂಲ ಸೌಕರ್ಯ ಕಲ್ಪಿಸಿ. ಅದು ನಮ್ಮ ಹಕ್ಕಿದೆ’ ಎಂದು ಹೇಳಿದ್ದಾರೆ.
‘2002ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ 22 ಗ್ರಾಮಗಳ ಜನರು ಅಗತ್ಯ ಮೂಲಭೂತ ಸೌಕರ್ಯ ನೀಡಿ ಇಲ್ಲವೇ, ಮಹಾರಾಷ್ಟ್ರಕ್ಕೆ ಸೇರುತ್ತೇವೆ ಎಂದು ನಿರ್ಧರಿಸಿದ್ದರು. ಅಂದಿನ ಕರ್ನಾಟಕ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರ್ಕಾರ ₹ 204 ಕೋಟಿ ಅನುದಾನ ನೀಡಿ, ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದರು. ಅದೇ ಮಾದರಿಯಲ್ಲೇ ಮಹಾರಾಷ್ಟ್ರ ಸರ್ಕಾರ ನಮ್ಮ ಭಾಗದ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಅನುದಾನ ಒದಗಿಸಬೇಕು’ ಎಂದು ಅಕ್ಕಲಕೋಟ ತಾಲ್ಲೂಕಿನ ಕನ್ನಡಿಗರು ಸಭೆ ನಡೆಸಿ, ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.