4

ಸಂಸದ ಸುರೇಶ ಅಂಗಡಿಗೆ ರೈತರ ಮುತ್ತಿಗೆ

Published:
Updated:
ಬೆಳಗಾವಿಯ ಕಾಡಾ ಕಚೇರಿ ಬಳಿ ಸಂಸದ ಸುರೇಶ ಅಂಗಡಿ ಅವರಿಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು

ಬೆಳಗಾವಿ: ಇಲ್ಲಿನ ಕಾಡಾ ಕಚೇರಿಯಲ್ಲಿ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದ ಸಂಸದ ಸುರೇಶ ಅಂಗಡಿ ಅವರಿಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಾಡಾ ಕಚೇರಿಗೆ ಸಮೀಪದಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸುತ್ತಿದ್ದ ತಮ್ಮನ್ನು ಬೆಂಬಲಿಸದಿರುವುದನ್ನು ಖಂಡಿಸಿದ ಮುಖಂಡರು, ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಬಂದರು.  ‘ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದರೂ ನೀವು ಬೆಂಬಲಿಸುತ್ತಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೇಲೆ ಒತ್ತಡ ತರಬೇಕು. ನಿಮ್ಮದೂ ಜವಾಬ್ದಾರಿ ಇದೆ ಎನ್ನುವುದನ್ನು ಮರೆಯಬೇಡಿ. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿದ್ದರೂ, ಚಕಾರ ಎತ್ತುತ್ತಿಲ್ಲವೇಕೆ?’ ಎಂದು ಕೇಳಿದರು.

‘ರಾಜ್ಯ ಸರ್ಕಾರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ನಾನೂ ಹೋರಾಟಕ್ಕೆ ಇಳಿಯುತ್ತೇನೆ’ ಎಂದು ಪ್ರತಿಭಟನಾಕಾರರೊಂದಿಗೆ ಧರಣಿ ನಡೆಸಿದರು. ‘ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿಯನ್ನು ಇದೇ 15ರೊಳಗೆ ಕೊಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಭರವಸೆ ನೀಡಿದರು. ಈ ಕುರಿತು ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಮುಖಂಡ ಚೂನಪ್ಪ ಪೂಜೇರಿ ಜೊತೆಗೂ ಸಚಿವರು ಮಾತನಾಡಿದರು.

‘ಸಾಲ ಮನ್ನಾ ಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜುಲೈ 15ರ ಒಳಗೆ ಬಾಕಿ ಪಾವತಿಸಿದ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡುವಂತೆ ಸಕ್ಕರೆ ಆಯುಕ್ತರನ್ನು ಕೋರಲಾಗುವುದು. ಕಡಲೆ ಖರೀದಿ ಹಣ ₹ 132 ಕೋಟಿ ನೀಡಲಾಗಿದೆ. ₹ 8 ಕೋಟಿಯಷ್ಟೇ ಬಾಕಿ ಇದೆ. ಅದನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ₹ 109 ಕೋಟಿ ಬಂದಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !