ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣ: 13 ಲಕ್ಷ ರಾಮ ನಾಮಾವಳಿ, 52 ಲಕ್ಷ ಬಾರಿ ಜಪ

ರಾಮ ಮಂದಿರ ನಿರ್ಮಾಣ ಸಂಕಲ್ಪ ತೊಟ್ಟು ಜಪ ಮಾಡಿದ ಹಿರಿಯ ಜೀವಗಳು
Published 23 ಜನವರಿ 2024, 4:19 IST
Last Updated 23 ಜನವರಿ 2024, 4:19 IST
ಅಕ್ಷರ ಗಾತ್ರ

ಬೆಳಗಾವಿ: 20 ಸಾವಿರದಷ್ಟು ರಾಮನ ರಂಗೋಲಿ, 13 ಲಕ್ಷ ರಾಮ ನಾಮ ಬರವಣಿಗೆ ಮತ್ತು 52 ಲಕ್ಷ ಬಾರಿ ಜಪ. ಇದು ಜಿಲ್ಲೆಯ ಗೋಕಾಕ ನಗರದ ನಿವಾಸಿ ಸೀತಾಬಾಯಿ ರಾಮಚಂದ್ರ ನಾಯಕ ಅವರ ಸಂಕಲ್ಪ.

84 ವರ್ಷದ ಸೀತಾಬಾಯಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು 2002ರಿಂದ ಜಪ ಶುರು ಮಾಡಿದರು. ಕನಸಿನ ಮಂದಿರ ನಿರ್ಮಾಣವಾದ ಕಾರಣ ಅವರು ಬರವಣಿಗೆಗಳನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ.

ಆರಂಭದಲ್ಲಿ ತಮ್ಮ ಮನೆಯಲ್ಲಿ ರಾಮನ ಕೋಟಿ ರಂಗೋಲಿ ಹಾಕುವ ಸಂಕಲ್ಪ ಮಾಡಿದರು. 20 ಸಾವಿರ ದಾಟಿದ ಬಳಿಕ ಅವರ ಪತಿ ನಿಧನರಾದರು. ರಂಗೋಲಿ ಹಾಕುವುದು ನಿಲ್ಲಿಸಿದ ಸೀತಾಬಾಯಿ ಅವರು, ನೋಟ್‌ಪುಸ್ತಕದಲ್ಲಿ ‘ಶ್ರೀರಾಮ ಜಯರಾಮ ಜಯಜಯ ರಾಮ’ ಜಪವನ್ನು ಕನ್ನಡದಲ್ಲಿ ಬರೆಯತೊಡಗಿದರು. ಇದರಲ್ಲಿ 13 ಅಕ್ಷರಗಳು ಇರುವ ಕಾರಣ 13 ಲಕ್ಷ ಬಾರಿ ಬರೆದರು. ಎರಡು ವರ್ಷಗಳ ಹಿಂದೆ ಅವರ ಕಣ್ಣುಗಳ ದೃಷ್ಟಿ ಮಂಜಾಯಿತು. ಬರೆಯಲು ಆಗಲಿಲ್ಲ. ಆಗ ಇದೇ ನಾಮದ ಜಪ ಶುರು ಮಾಡಿದರು.

ತಾಯಿಯ ಸಂಕಲ್ಪಕ್ಕೆ ನೆರವಾದ ಪುತ್ರ ಶ್ರೀರಂಗ ಅವರು ಎಣಿಕೆ ಯಂತ್ರ ತಂದರು. ಈವರೆಗೆ ಅದರಲ್ಲಿ 52 ಲಕ್ಷ ಬಾರಿ ಜಪಿಸಿದ ಧ್ವನಿ ಮುದ್ರಣವಾಗಿದೆ. ಈ ಜಪವನ್ನು ಒಂದು ಕೋಟಿ ಮಾಡಲು ಅವರು ಪಣ ತೊಟ್ಟಿದ್ದಾರೆ.

ಸೀತಾಬಾಯಿ ಅವರ ಪುತ್ರ ದಿನಸಿ ಅಂಗಡಿ ಹೊಂದಿದ್ದು, ಅ‌ಲ್ಲಿ ಕೂತಾಗ ಜಪಿಸುತ್ತಾರೆ. ಬೆಳಗಾವಿಯಲ್ಲಿ 7ನೇ ತರಗತಿಯವರೆಗೆ ಓದಿದ ಅವರು ಮೂಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಿತಾಹಾರಿ, ಮೃದುಭಾಷಿ, ದಿನಕ್ಕೆ ಒಂದೇ ಹೊತ್ತಿನ ಊಟ ಮಾಡುತ್ತಾರೆ. ಸಿನಿಮಾ, ಧಾರಾವಾಹಿ ನೋಡುವ ರೂಢಿ ಇಲ್ಲ.

ಚಚಡಿ ಗ್ರಾಮದ ವಿಶ್ವನಾಥ ಕರಾಡೆ ಮತ್ತು ಪತ್ನಿ ತ್ರಿವೇಣಿ
ಚಚಡಿ ಗ್ರಾಮದ ವಿಶ್ವನಾಥ ಕರಾಡೆ ಮತ್ತು ಪತ್ನಿ ತ್ರಿವೇಣಿ
ನನಗೆ ರಕ್ತದೊತ್ತಡ ಮಧುಮೇಹ ಮುಂತಾದ ಕಾಯಿಲೆ ಇಲ್ಲ. ರಾಮನಾಮ ಜಪ ಸದ್ವಿಚಾರ ಮತ್ತು ಧ್ಯಾನವೇ ಇದಕ್ಕೆ ಕಾರಣ
ಸೀತಾಬಾಯಿ ರಾಮಚಂದ್ರ ನಾಯಕ, ಗೋಕಾಕ ನಿವಾಸಿ

51 ಲಕ್ಷ ಬಾರಿ ‘ಶ್ರೀರಾಮ’

2010ರಲ್ಲಿ ರಾಮ ಜಪ ಸಂಕಲ್ಪ ತೊಟ್ಟ ನಿವೃತ್ತ ಶಿಕ್ಷಕ ವಿಶ್ವನಾಥ ಅರ್ಜುನಪ್ಪ ಕರಾಡೆ ಅವರು ಈವರೆಗೆ 51 ಲಕ್ಷ ಬಾರಿ ‘ಶ್ರೀರಾಮ’ ನಾಮ ಬರೆದಿದ್ದಾರೆ. ಬೆಳಗಾವಿಯಲ್ಲಿ ಇರುವ ಅವರು ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಸರ್ದಾರ ವಿ.ಜಿ.ದೇಸಾಯಿ ಪ್ರೌಢಶಾಲೆಯಲ್ಲಿ 36 ವರ್ಷ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಪತ್ನಿ ತ್ರಿವೇಣಿ ಕೂಡ ಇದೇ ಶಾಲೆಯ ಶಿಕ್ಷಕಿಯಾಗಿ ನಿವೃತ್ತರಾದ ಬಳಿಕ ಪತಿಯ ಸಂಕಲ್ಪಕ್ಕೆ ಸಹಕಾರ ನೀಡಿದ್ದಾರೆ. ‘ಪ್ರತಿ ದಿನವೂ 108 ಬಾರಿ ‘ಶ್ರೀರಾಮ’ ನಾಮಾವಳಿ ಬರೆಯುತ್ತೇನೆ. 2010ರ ಅಕ್ಟೋಬರ್‌ 25ರಂದು ಸಂಕಲ್ಪ ಮಾಡಿದೆ. ಶ್ರೀರಾಮನ ಮೇಲಿನ ಭಕ್ತಿ ಹಗೂ ಏಕಾಗ್ರತೆ ಸಾಧಿಸುವ ಉದ್ದೇಶದಿಂದ ಬರೆದೆ. ರಾಮ ಮಂದಿರ ಉದ್ಘಾಟನೆಯ ಮೂಲಕ ನನ್ನ ಸಂಕಲ್ಪ ಈಡೇರಿದ ಸಮಾಧಾನವಿದೆ’ ಎನ್ನುತ್ತಾರೆ ವಿಶ್ವನಾಥ. ಅವರ ವಯಸ್ಸು 75.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT