ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಮಕ್ಕಳ ಸಹಾಯಧನ: ಪರಿಷ್ಕರಣೆಗೆ ಆಗ್ರಹ

ವಿಶೇಷ ಅನುದಾನ ನೀಡಲು ಆಗ್ರಹ
Last Updated 16 ಡಿಸೆಂಬರ್ 2018, 11:38 IST
ಅಕ್ಷರ ಗಾತ್ರ

ಬೆಳಗಾವಿ: ಅಂಗವಿಕಲರ ವಿಶೇಷ ಶಾಲೆಗಳ ಅನುದಾನ ಸಂಹಿತೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಹಾಗೂ ಸಿಬ್ಬಂದಿಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು ಎಂದು ಮಾಹೇಶ್ವರಿ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಆಗ್ರಹಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗವಿಕಲರ ವಿಶೇಷ ಶಾಲೆಗಳು ಬಹುತೇಕ ಸಂಘ-ಸಂಸ್ಥೆಗಳ ಮೂಲಕವೇ ನಡೆಯುತ್ತಿವೆ. ಇಲ್ಲಿನ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹ 1 ಸಾವಿರದಂತೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸಬೇಕು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರವು ಸಹಾಯಧನ ಹೆಚ್ಚಿಸದಿರುವುದರಿಂದ ವಿಶೇಷ ಮಕ್ಕಳು ಹಲವು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ’ ಎಂದು ಹೇಳಿದರು.

‘ವಿಶೇಷ ಶಾಲೆಗಳಲ್ಲಿ ಹಲವು ಮಾದರಿಯ ನ್ಯೂನತೆಯುಳ್ಳ ಮಕ್ಕಳು ಇದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳೂ ವಿಭಿನ್ನವಾಗಿವೆ. ಅವರಿಗೆ ಅಗತ್ಯ ಸಾಧನ–ಸಲಕರಣೆಗಳನ್ನು ಕಲ್ಪಿಸಬೇಕಾದ ಹೊಣೆಗಾರಿಕೆ ಸಂಸ್ಥೆ ಮತ್ತು ಸರ್ಕಾರದ ಮೇಲಿದೆ. ಪ್ರಸ್ತುತ ನೀಡುತ್ತಿರುವ ಸಹಾಯಧನ ಮತ್ತು ಸೌಲಭ್ಯಗಳಿಂದ ಮಕ್ಕಳಿಗೆ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟಸಾಧ್ಯವಾಗಿದೆ’ ಎಂದು ತಿಳಿಸಿದರು.

‘ವಿಶೇಷ ಮಕ್ಕಳಿಗೆ ಅಧ್ಯಯನ, ತರಬೇತಿಗೆ ವಿಶೇಷ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಬೇಕಿದೆ. ಅವರಿಗೆ ಸಮರ್ಪಕ ವೇತನ ಹಾಗೂ ಪಾಠೋಪಕರಣದ ಕೊರತೆ ಕಂಡುಬರುತ್ತಿದೆ’ ಎಂದರು.

‘ಪ್ರಸ್ತುತ ಸರ್ಕಾರ ನೀಡುತ್ತಿರುವ ಸಹಾಯಧನದಿಂದ ವಿಶೇಷ ಶಾಲೆಗಳನ್ನು ನಡೆಸಲು ಆಗುತ್ತಿಲ್ಲ. ಮಕ್ಕಳ ಪಾಲಕರು ಹಾಗೂ ದಾನಿಗಳಿಂದ ಪಡೆದ ದೇಣಿಗೆಯಿಂದ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಇತ್ತ ಗಮನಹರಿಸಿ, ವಿಶೇಷ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು. ಸಂಘ- ಸಂಸ್ಥೆಗಳು ತಮ್ಮ ವೈಯಕ್ತಿಕ ಖಾತೆಯಿಂದ ಸಿಬ್ಬಂದಿಗೆ ಪಾವತಿಸಿದ ₹ 31 ಲಕ್ಷ ವೇತನ ಬಾಕಿ ಉಳಿದಿದ್ದು, ಅದನ್ನೂ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ವಿಕಾಸ ಕಲಘಟಗಿ, ಜಯರಾಮ ಸುತಾರ, ಪ್ರಭಾಕರ ನಾಗರಮುನ್ನೊಳಿ, ಗಣೇಶ ಹೆಗಡೆ, ಆನಂದ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT