ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಮಾತಾಡುವವರಿಗೆ ಗುಂಡಿಕ್ಕುತ್ತಿದ್ದಾರೆ: ಕೊಲ್ಹಾಪುರದ ರವೀಂದ್ರ ಖೈರೆ ವಿಷಾದ

Last Updated 18 ಆಗಸ್ಟ್ 2019, 10:23 IST
ಅಕ್ಷರ ಗಾತ್ರ

ಬೆಳಗಾವಿ: ‘ಸತ್ಯ ಮಾತನಾಡಿದ ಮತ್ತು ಸತ್ಯದ ಆಗ್ರಹ ಮಾಡಿದ ಮಹಾತ್ಮಾ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಡಾ.ನರೇಂದ್ರ ಧಾಭೋಳಕರ, ಗೋವಿಂದ ಪಾನ್ಸರೆ, ಡಾ.ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ ಅವರನ್ನು ಕೂಡ ಅದೇ ರೀತಿ ಕೊಲೆ ಮಾಡಲಾಗಿದೆ’ ಎಂದು ಕೊಲ್ಹಾಪುರದ ಅಟಿಟ್ಯೂಡ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ರವೀಂದ್ರ ಖೈರೆ ಹೇಳಿದರು.

ಇಲ್ಲಿನ ದ.ಮ.ಶಿ. ಮಂಡಳದ ಭಾವುರಾವ ಕಾಕತಕರ ಕಾಲೇಜು ಏರ್ಪಡಿಸಿದ್ದ ‘ಗಾಂಧೀಜಿ ಮತ್ತು ಅವರ ಕೊಡುಗೆಗಳು’ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಧೀಜಿಯವರು ಸತ್ಯ, ಅಹಿಂಸೆ, ಸತ್ಯಾಗ್ರಹ ಎಂಬ ಶಸ್ತ್ರಗಳನ್ನು ಇಡೀ ಪ್ರಪಂಚಕ್ಕೆ ನೀಡಿದರು. ಸ್ವಾತಂತ್ರ್ಯ ದೊರೆತಾಗ ಇಡೀ ದೇಶ ಸಂತೋಷದಲ್ಲಿದ್ದಾಗ ಗಾಂಧೀಜಿಯವರು ದೇಶ ವಿಭಜನೆಯಲ್ಲಿ ನೊಂದವರ ಕಣ್ಣೀರನ್ನು ಒರೆಸುತ್ತಿದ್ದರು. ಆದರೆ, ಕೆಲವರು ವಿಭಜನೆಯ ಸತ್ಯವನ್ನು ಮರೆ ಮಾಚಿ ಬೇರೆ ಸುಳ್ಳನ್ನು ಪಸರಿಸುತ್ತಿದ್ದಾರೆ. ಈ ಬಗ್ಗೆ ಯುವಕರು ಜಾಗೃತರಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ದ.ಮ.ಶಿ. ಮಂಡಳದ ಉಪಾಧ್ಯಕ್ಷ ರಾಜಾಭಾವು ಪಾಟೀಲ ಮಾತನಾಡಿ, ‘ಜಾತಿವಾದ ನಾಶವಾಗಬೇಕಾದರೆ ಗಾಂಧೀಜಿ ಅವರ ಮಹತ್ವ ಮತ್ತು ನೀಡಿದ ಕೊಡುಗೆ, ಸರಳ ಬದುಕಿನ ಸಿದ್ಧಾಂತಗಳನ್ನು ಯುವಜನರು ಅರಿಯಬೇಕು’ ಎಂದು ತಿಳಿಸಿದರು.

ರಾಯಬಾಗ, ರಾಮದುರ್ಗ, ಸವದತ್ತಿ, ಖಾನಾಪುರ, ಮಹಾರಾಷ್ಟ್ರದ ಹಲಕರ್ಣಿ, ಕೋವಾಡ ಮತ್ತು ಬೆಳಗಾವಿ ನಗರದ 71 ವಿದ್ಯಾರ್ಥಿಗಳು ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಪರ್ಯಾಯ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದರು. ಒಟ್ಟು 124 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.

ಪ್ರಾಚಾರ್ಯ ಡಾ.ಎಸ್.ಎನ್. ಪಾಟೀಲ, ವಿಚಾರಸಂಕಿರಣದ ಸಂಚಾಲಕಿ ಡಾ. ಮೀನಾ ಮೋಹಿತೆ ಇದ್ದರು. ಸ್ವಾತಿ ಪಾಟೀಲ ಸ್ವಾಗತಗೀತೆ ಹಾಡಿದರು. ಪ್ರೊ.ಎಂ.ಎಂ. ಪಾಟೀಲ ಪರಿಚಯಿಸಿದರು. ಪ್ರೊ.ಭಕ್ತಿ ದೇಸಾಯಿ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ದ.ಮ.ಶಿ. ಮಂಡಳದ ಸಹ ಕಾರ್ಯದರ್ಶಿ ಪ್ರೊ.ವಿಕ್ರಮ ಪಾಟೀಲ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಬಂಧ ಮಂಡಿಸಿದವರಿಗೆ ಪ್ರಮಾಣಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT