‘ಚಾತುರ್ಯ’ ಕಳೆದುಕೊಂಡ ‘ಮಿಡಿ’ ಬಸ್‌ಗಳು!

ಮಂಗಳವಾರ, ಜೂನ್ 18, 2019
31 °C
ಕೆಲವೇ ತಿಂಗಳಷ್ಟೇ ಇತ್ತು ಅತ್ಯಾಧುನಿಕ ವ್ಯವಸ್ಥೆ

‘ಚಾತುರ್ಯ’ ಕಳೆದುಕೊಂಡ ‘ಮಿಡಿ’ ಬಸ್‌ಗಳು!

Published:
Updated:
Prajavani

ಬೆಳಗಾವಿ: ನಗರದಲ್ಲಿ ಸಂಚರಿಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ 20 ‘ಮಿಡಿ’ (ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ) ಹೆಸರಿನ ಬಸ್‌ಗಳು ತಮ್ಮ ಚಾತುರ್ಯವನ್ನು ಕಳೆದುಕೊಂಡು, ಸಾಮಾನ್ಯ ಬಸ್‌ಗಳಂತೆಯೇ ಆಗಿ ಹೋಗಿವೆ.

ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಜಾರಿಯಾಗಿದ್ದ ‌ಜವಾಹರಲಾಲ್‌ ನೆಹರೂ ನಗರ ಪುನರುಜ್ಜೀವನ ಯೋಜನೆ (ಜೆ– ನರ್ಮ್‌)ಯಲ್ಲಿ ನಗರಕ್ಕೂ ಬಸ್‌ಗಳನ್ನು ಹಂಚಿಕೆ ಮಾಡಲಾಗಿತ್ತು. 2016ರ ಜೂನ್‌ ತಿಂಗಳಿಂದ ಹಂತ ಹಂತವಾಗಿ ಇವುಗಳು ಕಾರ್ಯಾಚರಣೆ ಆರಂಭಿಸಿದ್ದವು. ಬಸ್‌ನಲ್ಲಿ ಅಳವಡಿಸಿರುವ ಆಧುನಿಕ ತಂತ್ರಜ್ಞಾನದ ಬಳಕೆಯ ಕುರಿತು ಚಾಲಕರು ಹಾಗೂ ನಿರ್ವಾಹಕರಿಗೆ ತರಬೇತಿಯನ್ನೂ ನೀಡಲಾಗಿತ್ತು.

ಸಾಮಾನ್ಯ ಬಸ್‌ಗಳಲ್ಲಿ 44, ಮಿನಿ ಬಸ್‌ಗಳಲ್ಲಿ 26 ಸೀಟುಗಳಿರುತ್ತವೆ. ಆದರೆ, ಈ ಮಿಡಿ ಬಸ್‌ಗಳಲ್ಲಿ 32 ಸೀಟುಗಳಿವೆ. ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್)ಯನ್ನು ಹೊಂದಿದ್ದರಿಂದಾಗಿ ಹಾಗೂ ಅತ್ಯಾಧುನಿಕ ಸೌಲಭ್ಯಗಳಿಂದಾಗಿ ಇವು ಗಮನಸೆಳೆದಿದ್ದವು. ಸುರಕ್ಷತೆ ದೃಷ್ಟಿಯಿಂದಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಬಸ್‌ ಸಾಗುವ ಮಾರ್ಗಸೂಚಿ ತಿಳಿಸಲು ಫಲಕದ ಬದಲಿಗೆ ಕೆಂಪು ಅಕ್ಷರಗಳು ಪ್ರಸಾರವಾಗುವ ಡಿಜಿಟಲ್ ಬೋರ್ಡ್‌ ಅಳವಡಿಸಲಾಗಿತ್ತು. ಮುಂದೆ ಬರುವ ನಿಲ್ದಾಣ ಯಾವುದು ಎನ್ನುವುದನ್ನು ತಿಳಿಸುವುದಕ್ಕೆ ಸ್ಪೀಕರ್‌ ವ್ಯವಸ್ಥೆ (ಸ್ವಯಂಚಾಲಿತ) ಇದ್ದವು. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದಾಗಿ ಸಾರ್ವಜನಿಕರ ಪ್ರಯಾಣವನ್ನು ಸುಲಭವಾಗಿಸಿದ್ದವು. ಆದರೆ, ಈ ವ್ಯವಸ್ಥೆ ಕೆಲವೇ ತಿಂಗಳಲ್ಲಿ ನಿಂತು ಹೋಗಿದೆ! ಪರಿಣಾಮ, ನಗರದಲ್ಲಿ ಸಂಚರಿಸುತ್ತಿರುವ ಬೇರೆ ಬಸ್‌ಗಳಿಗೂ ಇವುಗಳಿಗೂ ವ್ಯತ್ಯಾಸವೇನೂ ಉಳಿದಿಲ್ಲ.

ವ್ಯವಸ್ಥೆಗಳು ಕಾಣುತ್ತಿಲ್ಲ:

ಈ ಬಹುತೇಕ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಾಣಿಸುತ್ತಿಲ್ಲ. ಕೆಲವು ಬಸ್‌ಗಳಲ್ಲಿ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಮಾರ್ಗಸೂಚಿ ತಿಳಿಸುವ ಡಿಜಿಟಲ್‌ ಫಲಕ ಕಾರ್ಯನಿರ್ವಹಿಸುತ್ತಿಲ್ಲ. ನಿಲ್ದಾಣ ತಿಳಿಸುವ ಧ್ವನಿವರ್ಧಕದ ವ್ಯವಸ್ಥೆಯೂ ಇಲ್ಲವಾಗಿದೆ. ಇದರಿಂದಾಗಿ ಇವು ಮೆರುಗು ಕಳೆದುಕೊಂಡಿವೆ. ಬಸ್‌ಗಳು ಎಲ್ಲಿ ಹೋಗುತ್ತಿವೆ, ಯಾವ ನಿಲ್ದಾಣವನ್ನು ಯಾವ ಸಮಯಕ್ಕೆ ತಲುಪಿದವು ಎನ್ನುವುದನ್ನು ಕೇಂದ್ರ ಕಚೇರಿಯಲ್ಲಿ ಕುಳಿತು ತಿಳಿದುಕೊಳ್ಳುವುದಕ್ಕೆ ಜಿಪಿಎಸ್‌ ಅಳವಡಿಕೆ ವ್ಯವಸ್ಥೆಯ ಉದ್ದೇಶವನ್ನೂ ಹೊಂದಲಾಗಿತ್ತು.

ಈ ಬಸ್‌ಗಳ ಕಾರ್ಯಾಚರಣೆಯಿಂದಾಗಿ, ಟಂಟಂ, ಟೆಂಪೊ, ಆಟೊರಿಕ್ಷಾ ಮೊದಲಾದವುಗಳನ್ನು ಅವಲಂಬಿಸಿದ್ದ ವಿವಿಧ ಮಾರ್ಗಗಳ ಜನರಿಗೆ ಅನುಕೂಲವಾಗಿದೆ. ಆದರೆ, ಸುಧಾರಿತ ತಂತ್ರಜ್ಞಾನ ಕೆಲವೇ ತಿಂಗಳಲ್ಲೇ ಅಂತ್ಯವಾಗಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸ ಪ್ರಯಾಣಿಕರು, ಮಾರ್ಗಸೂಚಿ ಹಾಗೂ ಮುಂದಿನ ನಿಲ್ದಾಣಗಳ ಮಾಹಿತಿ ಪಡೆಯುವುದಕ್ಕಾಗಿ ನಿರ್ವಾಹಕರು ಅಥವಾ ಸಹಪ್ರಯಾಣಿಕರ ಮೇಲೆಯೇ ಅವಲಂಬಿತವಾಗಬೇಕಾದ ಸ್ಥಿತಿ ಇದೆ.

ಗುತ್ತಿಗೆ ಮುಗಿದಿದೆ:

‘ಬಸ್‌ಗಳಲ್ಲಿ ಡಿಜಿಟಲ್‌ ಬೋರ್ಡ್‌ ಇವೆ. ಆದರೆ, ಅವು ಕೆಲಸ ಮಾಡುತ್ತಿಲ್ಲ. ಅನೌನ್ಸ್‌ಮೆಂಟ್‌ ಕೂಡ ಮಾಡಲಾಗುತ್ತಿಲ್ಲ. ಕೆಲವು ತಿಂಗಳಷ್ಟೇ ಈ ವ್ಯವಸ್ಥೆ (ಉಪಕರಣಗಳು) ಇತ್ತು. ಪ್ರಯಾಣಿಕರು ಹಾಗೂ ನಮಗೂ ಅನುಕೂಲವಾಗಿತ್ತು. ಅಧಿಕಾರಿಗಳು ಇತ್ತ ಗಮನಹರಿಸಿದಂತಿಲ್ಲ. ನಿರ್ವಹಣೆಗೆ ಹೆಚ್ಚಿನ ಆದ್ಯತೆ ದೊರೆಯುತ್ತಿಲ್ಲ’ ಎಂದು ನಿರ್ವಾಹಕರೊಬ್ಬರು ಪ್ರತಿಕ್ರಿಯಿಸಿದರು.

‌‘ಇಲಾಖೆಯ ಕೇಂದ್ರ ಕಚೇರಿಯವರು ಖಾಸಗಿ ಕಂಪನಿಯೊಂದಿಗೆ ಒಪ್ಪಂದ (ವಾರ್ಷಿಕ ನಿರ್ವಹಣೆ ಒಪ್ಪಂದ) ಮಾಡಿಕೊಂಡಿದ್ದರು. ಅದು, ಪೂರ್ಣಗೊಂಡಿದ್ದರಿಂದ ಮಿಡಿ ಬಸ್‌ಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ. ಒ‍ಪ್ಪಂದ ನವೀಕರಣಕ್ಕೆ ಆ ಕಂಪನಿಯವರು ಒಪ್ಪಿಲ್ಲ. ನಾವಾದರೂ ಏನು ಮಾಡಲಾದೀತು?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ನಗರ ಸಾರಿಗೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !