ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌ಗೆ ಮೊಟ್ಟೆ ಎಸೆದು ವ್ಯಾಪಾರಿ ದರೋಡೆ

ನಾಯಿಂಗ್ಲಜ್-ಹತ್ತರವಾಟ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಘಟನೆ
Last Updated 3 ಜುಲೈ 2019, 16:02 IST
ಅಕ್ಷರ ಗಾತ್ರ

ನಿಪ್ಪಾಣಿ/ ಬೆಳಗಾವಿ: ಮಂಗಳವಾರ ತಡರಾತ್ರಿ ಚಿಕ್ಕೋಡಿ ತಾಲ್ಲೂಕಿನ ನಾಯಿಂಗ್ಲಜ್-ಹತ್ತರವಾಟ ರಸ್ತೆಯಲ್ಲಿ ಹೋಗುತ್ತಿದ್ದ ಕಾರ್‌ಗೆ ಏಕಾಏಕಿ ಮೊಟ್ಟೆಗಳನ್ನು ಒಡೆದು ನಿಲ್ಲಿಸಿ ಅಡ್ಡಗಟ್ಟಿದ ದರೋಡೆಕೋರರು, ಕಾರಿನಲ್ಲಿದ್ದ ವ್ಯಾಪಾರಿಯೊಬ್ಬರಿಂದ ₹ 1.68 ಲಕ್ಷ ನಗದು ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ನಾಯಿಂಗ್ಲಜ್ ಗ್ರಾಮದ ನಿವಾಸಿ ಸತ್ಯಗೌಡ ದತ್ತಾತ್ರೇಯ ಪಾಟೀಲ (28) ಹಣ ಹಾಗೂ ವಸ್ತುಗಳನ್ನು ಕಳೆದುಕೊಂಡವರು. ಅವರು ಬೆಳಗಾವಿಯಿಂದ ಸ್ವಗ್ರಾಮಕ್ಕೆ ಟಾಟಾ ಇಂಡಿಕಾ ಕಾರಿನಲ್ಲಿ ಹೋಗುವಾಗ ಈ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದೆ.

‘ನಾನು ಊರಿಗೆ ಹೋಗುವಾಗ ಕಾರಿನ ಮೇಲೆ ಮೂವರು ದರೋಡೆಕೋರರು ಮೊಟ್ಟೆಗಳನ್ನು ಎಸೆದರು. ಕಾರು ನಿಲ್ಲಿಸಿ ಹೊರ ಬರುತ್ತಿದ್ದಂತೆಯೇ ನನ್ನ ಮೇಲೆ ಹಲ್ಲೆ ನಡೆಸಿದರು. ಕಿರುಚಿಕೊಂಡೆನಾದರೆ ಸಹಾಯಕ್ಕೆ ಬರಲು ಅಲ್ಲಿ ಯಾರೂ ಇರಲಿಲ್ಲ. ನನ್ನ ಬಳಿ ಇದ್ದ ₹ 1.68 ಲಕ್ಷ ನಗದು, ₹ 25ಸಾವಿರ ಮೌಲ್ಯದ ಲ್ಯಾಪ್‌ಟಾಪ್, ₹ 10ಸಾವಿರ ಮೌಲ್ಯದ ಮೊಬೈಲ್ ಫೋನ್, ₹ 35ಸಾವಿರ ನಮೂದಿಸಿರುವ ಚೆಕ್ ಹಾಗೂ ಇತರ ದಾಖಲೆಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು’ ಎಂದು ಸತ್ಯಗೌಡ ಖಡಕಲಾಟ ಠಾಣೆಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ, ಚಿಕ್ಕೋಡಿ ಎಎಸ್‌ಪಿ ಮಿಥುನಕುಮಾರ ಜಿ.ಕೆ., ಪಿಎಸ್ಐ ಬಸಲಿಂಗಯ್ಯ ಸುಬ್ಬಾಪುರಮಠ ಭೇಟಿ ನೀಡಿ ‍ಪರಿಶೀಲಿಸಿದರು.‌

‘ಈ ಮಾರ್ಗದಲ್ಲಿ ತಡರಾತ್ರಿ ಹೆಚ್ಚಿನ ಜನರು ಓಡಾಡುವುದಿಲ್ಲ. ಇದೆಲ್ಲವೂ ಗೊತ್ತಿದ್ದವರೇ ಈ ಕೃತ್ಯ ಎಸಗಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ಸ್ಥಳದಲ್ಲಿ ಮದ್ಯ ಸೇವಿಸಿ ನಂತರ, ಕಾರಿಗೆ ಮೊಟ್ಟೆ ಒಡೆದು ಅಡ್ಡಗಟ್ಟಿದ್ದಾರೆ ಎಂದು ಗೊತ್ತಾಗಿದೆ ಸುತ್ತಮುತ್ತಲಿನ ಪ್ರದೇಶದವರೇ ಈ ಕೆಲಸ ಮಾಡಿರುವ ಸಂಶಯವಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಲಾಶಗುವುದು’ ಎಂದು ಎಸ್ಪಿ ತಿಳಿಸಿದರು.

ಖಡಕಲಾಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT