ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಭಾಷೆಗಳ ಕಲಿಕೆ ಅಗತ್ಯ: ಯು.ಟಿ.ಖಾದರ್‌

Published 3 ಮಾರ್ಚ್ 2024, 10:55 IST
Last Updated 3 ಮಾರ್ಚ್ 2024, 10:55 IST
ಅಕ್ಷರ ಗಾತ್ರ

ಬೆಳಗಾವಿ: ‘ನಾವು ಮನೆಯಲ್ಲಿ ಯಾವುದೇ ಭಾಷೆ ಮಾತನಾಡಬಹುದು. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರಿಗೆ ಸ್ಪರ್ಧೆಯೊಡ್ಡಲು ಕನ್ನಡದೊಂದಿಗೆ ಬೇರೆ ಬೇರೆ ಭಾಷೆಗಳನ್ನೂ ಕಲಿಯಬೇಕಾದ ಅಗತ್ಯವಿದೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ಇಲ್ಲಿನ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದು ಭಾಷೆ ದ್ವೇಷಿಸಿ, ಇನ್ನೊಂದು ಭಾಷೆ ಬೆಳಗದು. ಹೀಗಾಗಿ ನಾವು ಮಾತೃಭಾಷೆ ಪ್ರೀತಿಸುವ ಜತೆಗೆ, ಅನ್ಯಭಾಷೆಗಳನ್ನೂ ಗೌರವಿಸಬೇಕು. ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ ಹೀಗೆ... ಬೇರೆ ಬೇರೆ ಭಾಷೆ ಕಲಿತರೆ, ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿಶ್ವಾಸದ ಸಮಾಜ ಕಟ್ಟಬಹುದು. ಸಾಧ್ಯವಾದಷ್ಟು ಹೆಚ್ಚಿನ ಭಾಷೆ ಕಲಿಯಲು ಒತ್ತು ಕೊಡಿ’ ಎಂದು ಹೇಳಿದರು.

‘ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ನಮ್ಮ ಪರಿಸರದಲ್ಲಿನ ಎಲ್ಲ ಮಕ್ಕಳೂ ಅಕ್ಷರ ಕಲಿಯಲು ಪ್ರೋತ್ಸಾಹಿಸಬೇಕು. ದೇಶದ ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡು ಹೋಗಬೇಕು’ ಎಂದ ಅವರು, ‘ಒಗ್ಗಟ್ಟಿನಿಂದ ನಿಮ್ಮ ಸಂಘಟನೆಯನ್ನು ಬೆಳೆಸಿ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ಯಾವುದೇ ಕಾಯಕದಲ್ಲಿ ಮೇಲು–ಕೀಳು ಎಂಬುದಿಲ್ಲ. ನಮ್ಮ ಪಾಲಿನ ಕಾಯಕ ನಿಷ್ಠೆಯಿಂದ ಮಾಡಬೇಕು. ವೃತ್ತಿಕೌಶಲ ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿದ ನಾನಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಶಾಸಕ ಆಸೀಫ್‌ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಫಿರೋಜ್‌ ಸೇಠ್‌, ಸಂಘದ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್‌ಸಲೀಮ್‌ ಹಂಚಿನಮನಿ, ಗೌರವಾಧ್ಯಕ್ಷ ಮೊಹಮ್ಮದ್‌ರಫಿ ಪಾಷಾ, ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಇಸ್ಮಾಯಿಲ್‌ ಪಾಷಾ, ಅನ್ವರ್‌ ಲಂಗೋಟಿ, ಸಲೀಮ್‌ ನದಾಫ್‌, ಅಬ್ದುಲ್‌ಖಾದರ್‌ ಮೆಣಸಗಿ, ಮೊಹಮ್ಮದ್‌ ಇಕ್ಬಾಲ್‌ ಅಮ್ಮಿನಭಾವಿ, ಆಸೀಫ್ ಅತ್ತಾರ, ಎ.ಬಿ.ಹಕೀಮ್‌, ಶಬ್ಬೀರ್‌ಅಹಮ್ಮದ್‌ ತಟಗಾರ, ಎಂ.ಎಲ್‌.ಜಮಾದಾರ ಇತರರಿದ್ದರು.

ಒಪಿಎಸ್‌ ಜಾರಿಗೊಳಿಸುತ್ತೇವೆ: ಹೆಬ್ಬಾಳಕರ

‘ನಿಮ್ಮ ಬೇಡಿಕೆಯಂತೆ, ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.

‘ಸರ್ಕಾರಿ ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸಿದರಷ್ಟೇ, ಆಯಾ ರಾಜ್ಯ ಸರ್ಕಾರಗಳಿಗೆ ಉತ್ತಮ ಹೆಸರು ಬರುತ್ತದೆ. ನೀವು ಸರಿಯಾಗಿ ಕಾಯಕ ಮಾಡದಿದ್ದರೆ, ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ. ಸಂಘಟನೆಯಲ್ಲಿ ರಾಜಕೀಯ ತರಬೇಡಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸದಾ ಬದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT