ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ನನ್ನ ಕೊನೆ ವೈಫಲ್ಯ ಎಂದುಕೊಂಡಿದ್ದೆ: UPSCಯಲ್ಲಿ ಗೆದ್ದ ರಾಹುಲ ಪಾಟೀಲ

5ನೇ ಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲವಾದ ಕಲಕಾಂಬದ ಗ್ರಾಮದ ರಾಹುಲ ಪಾಟೀಲ
Published 18 ಏಪ್ರಿಲ್ 2024, 4:15 IST
Last Updated 18 ಏಪ್ರಿಲ್ 2024, 4:15 IST
ಅಕ್ಷರ ಗಾತ್ರ

ಬೆಳಗಾವಿ: ಎರಡು ಬಾರಿ ಯುಪಿಎಸ್‌ಸಿ ಮುಖ್ಯಪರೀಕ್ಷೆ ಹಂತದವರೆಗೆ ಹೋಗಿದ್ದ ನಾನು, ನಾಲ್ಕನೇ ಪ್ರಯತ್ನದಲ್ಲಿ ಪೂರ್ವಭಾವಿ ಪರೀಕ್ಷೆ ಹಂತವನ್ನೂ ದಾಟಲಿಲ್ಲ. ಇದರಿಂದ ನಿರಾಸೆಯಾಗಿದ್ದು ನಿಜ. ಆದರೆ, ಇದೇ ನನ್ನ ಕೊನೆಯ ವೈಫಲ್ಯವೆಂದು ನಿರ್ಧರಿಸಿ ಮುನ್ನಡೆದೆ. ಐದೂವರೆ ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಿದೆ...

ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 804ನೇ ರ್‍ಯಾಂಕ್‌ ಗಳಿಸಿದ ತಾಲ್ಲೂಕಿನ ಕಲಕಾಂಬ ಗ್ರಾಮದ ರಾಹುಲ ಜಯವಂತ ಪಾಟೀಲ (28) ಹೀಗೆ ತಮ್ಮ ಸಂತಸ ಹಂಚಿಕೊಂಡರು. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ವಿವರ ಇಲ್ಲಿದೆ.

ನಿಮ್ಮ ಬಗ್ಗೆ ಹೇಳಿ

ನಮ್ಮ ತಂದೆ ಜಯವಂತ ಕೃಷಿಕರು. ಆದರೆ, ಕಲಿಕೆಗೆ ನೀರೆರೆದು ಪ್ರೋತ್ಸಾಹಿಸಿದರು. ವನಿತಾ ವಿದ್ಯಾಲಯ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 96.96 ಅಂಕ, ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಪಿಯು ಪರೀಕ್ಷೆಯಲ್ಲಿ ಶೇ 97 ಅಂಕ ಹಾಗೂ ಬೆಂಗಳೂರಿನ ಆರ್‌.ವಿ. ಕಾಲೇಜಿನಲ್ಲಿ ಬಿ.ಇ (ಮೆಕ್ಯಾನಿಕಲ್‌) ಕೋರ್ಸ್‌ನಲ್ಲಿ 10ಕ್ಕೆ 8.86 ಸಿಜಿಪಿಎ ಅಂಕ ಗಳಿಸಿದ್ದೇನೆ.

ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ಹೇಗಿತ್ತು?

ಇದರಲ್ಲಿ ಬಹು ಆಯ್ಕೆ ಪ್ರಶ್ನೆ ಕೇಳುವುದರಿಂದ ನಿಖರವಾದ ಉತ್ತರಿಸಬೇಕು. ವಿವಿಧ ಕೋಚಿಂಗ್‌ ಸಂಸ್ಥೆಗಳು ನಡೆಸುವ ಅಣಕು ಪರೀಕ್ಷೆಗಳಿಗೆ ಹಾಜರಾಗಬೇಕು. ನನ್ನ ಪ್ರಕಾರ, ಕನಿಷ್ಠ 50 ಅಣಕು ಪರೀಕ್ಷೆಗಳನ್ನು ಬರೆಯಬೇಕು.

ಮುಖ್ಯಪರೀಕ್ಷೆ ಸಿದ್ಧತೆ ಹೇಗಿತ್ತು?

ಈ ಪರೀಕ್ಷೆಗೆ ಬರವಣಿಗೆ ಮುಖ್ಯ. ಇಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ವಿವರಣೆ ರೂಪದಲ್ಲಿ ಉತ್ತರಿಸುವುದು ಅಗತ್ಯ. ಹಾಗಾಗಿ ನಾನು ಬರವಣಿಗೆಯನ್ನು ಸುಧಾರಿಸಿಕೊಂಡೆ. 15ರಿಂದ 20 ವರ್ಷಗಳ ಹಳೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ.

ಸಂದರ್ಶನದ ಅನುಭವ ಹೇಗಿತ್ತು?

ಸಂದರ್ಶನ ಪ್ರಕ್ರಿಯೆಯಲ್ಲಿ ನಮ್ಮ ಜ್ಞಾನಕ್ಕಿಂತ, ವ್ಯಕ್ತಿತ್ವ ಹೇಗಿದೆ ಎಂದು ಪರೀಕ್ಷಿಸಲಾಗುತ್ತದೆ. ನಾನು ಐಚ್ಛಿಕವಾಗಿ ಭೂಗೋಳಶಾಸ್ತ್ರ ವಿಷಯ ಆಯ್ದುಕೊಂಡಿದ್ದೆ. ಹಾಗಾಗಿ ಕರ್ನಾಟಕದ ಇತಿಹಾಸ, ಬಾದಾಮಿ ಚಾಲುಕ್ಯರು, ದೆಹಲಿ, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ವಾಯುಮಾಲಿನ್ಯ ಪ್ರಮಾಣದ ಮತ್ತಿತರ ವಿಷಯಗಳ ಕುರಿತಾಗಿ ಐವರು ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿದೆ. 40 ನಿಮಿಷಗಳ ಸಂದರ್ಶನದಲ್ಲಿ ನನಗೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಹೇಳಿದೆ. ಸಂದರ್ಶನದಲ್ಲಿ ಆಯ್ಕೆಯಾಗಬೇಕೆಂದರೆ, ನಮ್ಮ ಸಂವಹನಾ ಶೈಲಿ ಉತ್ತಮವಾಗಿರಬೇಕು. ಸತ್ಯವನ್ನೇ ತಿಳಿಸಬೇಕು.

ಅಧ್ಯಯನ ಸಾಮಗ್ರಿಗಳ ಆಯ್ಕೆ ಹೇಗಿರಬೇಕು?

ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಟೆಲಿಗ್ರಾಮ್‌ನಲ್ಲೂ ಪುಸ್ತಕಗಳ ಮಾಹಿತಿಯಿದೆ. ಪೂರಕವಾಗಿ ಲಭ್ಯವಾಗುವ ಎಲ್ಲ ಮಾದರಿಗಳ ಅಧ್ಯಯನ ಸಾಮಗ್ರಿ ಅಗತ್ಯ. ನಾನು ‘ಆರ್‌’ ಸ್ಟ್ಯಾಟರ್ಜಿ (ರೀಡಿಂಗ್, ರಿವೈಸಿಂಗ್‌, ರಿ–ಕಾಲಿಂಗ್‌ ಮತ್ತು ರಿ–ಪ್ರೊಡ್ಯೂಸಿಂಗ್‌) ಪಾಲಿಸಿದೆ.

ಕೋಚಿಂಗ್ ಅಗತ್ಯವೇ?

ಒಂದೂವರೆ ವರ್ಷದ ಹಿಂದೆ ದೆಹಲಿಗೆ ಹೋಗಿ ಕೋಚಿಂಗ್‌ ಪಡೆದೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವವರಿಗೆ ನಾನು ಕೂಡ ತರಬೇತಿ ಕೊಟ್ಟೆ. ಕೋಚಿಂಗ್‌ ಸಿಕ್ಕರೆ ಹೆಚ್ಚಿನ ಅಂಕ ಗಳಿಸಬಹುದು. ಸ್ವ ಅಧ್ಯಯನದ ಮೂಲಕವೇ ಗುರಿ ಮುಟ್ಟಬಹುದು.

ದಿನಪತ್ರಿಕೆಗಳ ಓದು ಎಷ್ಟು ಅವಶ್ಯಕ?

ಯುಪಿಎಸ್‌ಸಿ ಪರೀಕ್ಷೆ ಎದುರಿಸುವವರು ದಿನಪತ್ರಿಕೆ ಓದಲು ಪ್ರತಿದಿನ 1 ತಾಸು ಮೀಸಲಿಡಬೇಕು. ಅದರಲ್ಲಿನ ಪ್ರಚಲಿತ ವಿದ್ಯಮಾನಗಳ ಮೇಲೆ ಗಮನ ಹರಿಸಬೇಕು.

ತಯಾರಿ ನಡೆಸಿದವರಿಗೆ ನಿಮ್ಮ ಕಿವಿಮಾತು?

ಕೀಳರಿಮೆಯಿಂದ ಹೊರಬರಬೇಕು. ಇದು ಕಠಿಣವಾದ ಪರೀಕ್ಷೆ. ಆದರೆ, ಸಿದ್ಧತೆಗೆ ಬದ್ಧತೆ ಬೇಕು. ಸಾಧಿಸುತ್ತೇನೆಂಬ ಛಲವಿರಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕು. ಏನು ಓದಬೇಕು ಎಂಬುದು ಎಷ್ಟು ಮುಖ್ಯವೋ, ಅಂತೆಯೇ ಏನು ಓದಬಾರದು ಎಂಬುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT