ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಕಂಬದಲ್ಲಿ ವೀರಭದ್ರ ಸಾಧನೆ 

ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ತರಬೇತಿ
Last Updated 22 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮೂಡಲಗಿ: ಇಲ್ಲಿನ ಚೈತನ್ಯ ಆಶ್ರಮ ವಸತಿ ಶಾಲೆಯ ಮಲ್ಲಕಂಬ ಕ್ರೀಡೆಯ ಕೀರ್ತಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈ ಶಾಲೆಯಲ್ಲಿ ಮಲ್ಲಕಂಬದ ಪಟ್ಟುಗಳನ್ನು ಕಲಿತು ಪರಿಣಿತರಾಗಿರುವ ವೀರಭದ್ರ ಮುಧೋಳ ಕೀರ್ತಿ ತಂದುಕೊಟ್ಟಿದ್ದಾರೆ.

ಈಚೆಗೆ ಮುಂಬೈನ ದಾದರ್ ಶಿವಾಜಿ ಪಾರ್ಕ್‌ನ ಸಮರ್ಥ ವ್ಯಾಯಾಮ ಮಂದಿರದಲ್ಲಿ ನಡೆದ 14 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಅಂತರರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಯಲ್ಲಿ ಭಾರತ ಚಾಂಪಿಯನ್‌ ಆಯಿತು. ಈ ತಂಡದ ಆರು ಆಟಗಾರರ ಪೈಕಿ ಕರ್ನಾಟಕದ ಏಕೈಕ ಆಟಗಾರ ವೀರಭದ್ರ ಮುಧೋಳ ಭಾಗವಹಿಸಿದ್ದರು. ಈ ಮೂಲಕ ಕನ್ನಡ ನಾಡಿಗೆ ಹೆಮ್ಮೆ ತಂದಿದ್ದಾರೆ. ಅವರ ಮಲ್ಲಕಂಬ ಕ್ರೀಡೆಯ ಸಾಧನೆಗೆ ಪ್ರೇರಣೆ, ಪ್ರೋತ್ಸಾಹ ನೀಡಿ ಬೆಳೆಸಿದ್ದು ಇಲ್ಲಿನ ಚೈತನ್ಯ ವಸತಿ ಆಶ್ರಮ ಶಾಲೆ. ಹೀಗಾಗಿ, ಸಂಸ್ಥೆಯವರಿಗೂ ಖುಷಿ ತಂದಿದೆ.

ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಹೊರಟ್ಟಿ ಅವರು ದೇಸಿ ಕ್ರೀಡೆ ಮಲ್ಲಕಂಬವನ್ನು ಬೆಳೆಸುವ ಉದ್ದೇಶದಿಂದ ಈ ಶಾಲೆಯಲ್ಲಿ 2012ರಲ್ಲಿ ಮಲ್ಲಕಂಬದ ತರಬೇತಿ ಪ್ರಾರಂಭಿಸಿದರು. ರಾಯಬಾಗ ತಾಲ್ಲೂಕಿನ ಬೆಂಡವಾಡದ ಗ್ರಾಮೀಣ ಭಾಗದಿಂದ 6ನೇ ತರಗತಿಗೆ ಇಲ್ಲಿ ಕಲಿಯಲು ಬಂದಿದ್ದ ವೀರಭದ್ರಗೆ ಮಲ್ಲಕಂಬ ಬಗ್ಗೆ ಆಸಕ್ತಿ ಮೂಡಿತು. ಓದಿನೊಂದಿಗೆ ನಿತ್ಯ ಎರಡೂ ಹೊತ್ತು ಮಲ್ಲಕಂಬದ ಪಟ್ಟುಗಳ ಬಗ್ಗೆ ತರಬೇತಿ ಪಡೆದು ಅದರಲ್ಲಿ ಪರಿಣತಿ ಗಳಿಸಿದ್ದಾರೆ.

ಪ್ರಾರಂಭದಲ್ಲಿ ರಾಜ್ಯಮಟ್ಟದಲ್ಲಿ ಚಾಂಪಿಯನ್ ಆಗಿ, ನಂತರ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗಮನಸೆಳೆದರು. ವಿವಿಧೆಡೆ ಸ್ಪರ್ಧಿಸಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ. ಈವರೆಗೆ ಸತತ 8 ಬಾರಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ; ರಾಜ್ಯಮಟ್ಟದಲ್ಲಿ ಹಲವು ಬಾರಿ ಚಾಂಪಿಯನ್ ಪಟ್ಟ ಮತ್ತು ಬಂಗಾರ ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ.

‘ಮಲ್ಲಕಂಬದಲ್ಲಿ ಬರುವ ವಿವಿಧ ಪಟ್ಟುಗಳನ್ನು ಸಲೀಸಾಗಿ, ಶುದ್ಧವಾಗಿ ಮಾಡುವುದರಲ್ಲಿ ವೀರಭದ್ರ ಎತ್ತಿದ ಕೈ’ ಎಂದು ಬಾಲ್ಯದಲ್ಲಿ ಮಲ್ಲಕಂಬದ ತರಬೇತಿ ನೀಡಿರುವ ಶಾಲೆಯ ದೈಹಿಕ ಶಿಕ್ಷಕ ಮೆಹಬೂಬ್ ಬಂಡಿವಾಡರ ಮೆಚ್ಚುಗೆ ವ್ಯಕ್ತಪಡಿಸಿದರು. ‘ಕಲಿಯುವುದರಲ್ಲಿ ಹಾಗೂ ಕೃತಿಗೆ ತರುವುದರಲ್ಲಿ ಆತನಿಗೆ ಶ್ರದ್ಧೆ ಇದೆ. ಹೀಗಾಗಿಯೇ ವಿಶ್ವಮಟ್ಟದಲ್ಲಿ ಸಾಧನೆ ಮಾಡಿದ್ದಾನೆ’ ಎನ್ನುತ್ತಾರೆ ಅವರು.

ಯೋಗದಲ್ಲೂ ಪರಿಣತಿ ಇವರು ವೀರಭದ್ರ 6 ಬಾರಿ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮಲೇಷಿಯಾದಲ್ಲಿ ಯೋಗಾಸನ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಓದಿನಲ್ಲೂ ಮುಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT