ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ್‌ಗೆ ಸಚಿವ ಸ್ಥಾನ ತಪ್ಪಿದ್ದು ನೋವಾಗಿದೆ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

Last Updated 22 ಡಿಸೆಂಬರ್ 2018, 8:37 IST
ಅಕ್ಷರ ಗಾತ್ರ

ಬೆಳಗಾವಿ: ‘ಬೇರೆಯವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಖುಷಿ ಇದೆ. ಆದರೆ, ರಮೇಶ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ನಿಜವಾಗಿಯೂ ವೈಯಕ್ತಿಕವಾಗಿ ದುಃಖವಾಗಿದೆ. ಇದು ಆಗಬಾರದಿತ್ತು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅವರೊಬ್ಬ ಪ್ರಭಾವಿ ನಾಯಕ. ಗೋಕಾಕ ಮತ ಕ್ಷೇತ್ರ ಲಿಂಗಾಯತರ ಪ್ರಭಾವವಿರುವ ಕ್ಷೇತ್ರ. ಅಂಥ ಸಾಮಾನ್ಯ ಕ್ಷೇತ್ರದಲ್ಲಿ ಸತತ 5 ಬಾರಿ ಗೆದ್ದಿರುವ ಹಿರಿಯರು. ಅವರನ್ನು ಇಷ್ಟು ಬೇಗ ಸಂಪುಟದಿಂದ ತೆಗೆಯಬಾರದಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಸರ್ಕಾರ ಸುಭದ್ರವಾಗಿದೆ. ಬಿಜೆಪಿಯವರಿರಲಿ, ಕಾಂಗ್ರೆಸ್‌ನವರಿರಲಿ ಯಾರಿಗೂ ಚುನಾವಣೆಗೆ ಹೋಗಲು ಮನಸ್ಸಿಲ್ಲ. ಏಕೆಂದರೆ, ಎಲ್ಲರೂ ಕಷ್ಟಪಟ್ಟು ಗೆದ್ದು ಬಂದವರೇ. ಮತ್ತೊಮ್ಮೆ ಚುನಾವಣೆ ನಡೆಸಿ ರಾಜ್ಯಕ್ಕೆ ಹೊರೆ ಮಾಡುವುದು ಸರಿಯಲ್ಲ’ ಎಂದರು.

‘ಲಿಂಗಾಯತರನ್ನು ಕಡೆಗಣಿಸಿಲ್ಲ. ಎಂ.ಬಿ. ಪಾಟೀಲರಿಗೆ ಅವಕಾಶ ಸಿಕ್ಕಿದೆ. ಸಚಿವ ಸಂಪುಟ ವಿಸ್ತರಣೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಬಹಳಷ್ಟು ಹರಸಾಹಸಗಳು ಕೂಡ ನಡೆದಿದ್ದವು. ಈಗ ಎಲ್ಲವೂ ಸುಖಾಂತ್ಯವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಶುಭ ಕೋರಿದರು.

‘ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದು ನಾನು ಹೇಳಿರಲಿಲ್ಲ. ಹೈಕಮಾಂಡ್‌ ಹೇಳಿದಂತೆ ಕೇಳುವವಳು; ಪಕ್ಷದ ಚೌಕಟ್ಟಿನಲ್ಲಿ ಇರುವವಳು ನಾನು. ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಅವರು ಕೊಟ್ಟಿದ್ದನ್ನು ಪ್ರಸಾದವೆಂದು ಸ್ವೀಕರಿಸುತ್ತೇನೆ. ಅಂಜಲಿ ನಿಂಬಾಳ್ಕರ್‌ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದು ಸೇರಿದಂತೆ ಪಕ್ಷದ ಎಲ್ಲ ನಿರ್ಧಾರಗಳೂ ತೃಪ್ತಿ ತಂದಿವೆ. ಬೇಸರವೇನಿಲ್ಲ. ಸಮ್ಮಿಶ್ರ ಸರ್ಕಾರವಿರುವುದರಿಂದ ಎಲ್ಲರಿಗೂ ಅವಕಾಶ ಆಗುವುದಿಲ್ಲ. ಜನರು ನನ್ನನ್ನು ಪ್ರಭಾವಿ ಎಂದು ಗುರುತಿಸುತ್ತಾರೆ. ಆ ಬಿರುದೇ ಸಾಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಪಕ್ಷದಲ್ಲಿ ಯಾರೂ ಅತೃಪ್ತರಿಲ್ಲ. ಅತೃಪ್ತರನ್ನು ಬಿಜೆಪಿವರು ಸಂಪರ್ಕಿಸಿದದರೆ, ಬಿಜೆಪಿಯವರ ಸಂಪರ್ಕದಲ್ಲಿ ನಾವಿರುತ್ತೇವೆ’ ಎಂದರು.

ಶಾಸಕ ಎನ್. ಎ. ಹ್ಯಾರಿಸ್ಅಸಮಾಧಾನ

ಬೆಂಗಳೂರು: ನಾನು ಮೊದಲಿನಿಂದಲೂ ಸಚಿವ ಸ್ಥಾನ ಕೇಳುತ್ತಿದ್ದೇನೆ. ಈ ಬಾರಿ ಸಚಿವ ಸ್ಥಾನ ಸಿಗುತ್ತೆ ಎಂಬ ಆಶಾಭಾವನೆಯಲ್ಲಿದ್ದೆ. ಆದರೆ, ಈಗ ಮತ್ತೆ ನಿರಾಸೆಯಾಗಿದೆ.ನನಗೆ ಯಾವುದೇ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ಬೇಡ.ಬಕೊಟ್ಟರೆ ಸಚಿವ ಸ್ಥಾನ ಮಾತ್ರ ಕೊಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT