ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳೊಂದಿಗೆ ವಿಜಯೇಂದ್ರ, ಅಶೋಕ ಹೊಂದಾಣಿಕೆ: ಅರವಿಂದ ಲಿಂಬಾವಳಿ

ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪ
Published 22 ನವೆಂಬರ್ 2023, 16:12 IST
Last Updated 22 ನವೆಂಬರ್ 2023, 16:12 IST
ಅಕ್ಷರ ಗಾತ್ರ

ಬೆಳಗಾವಿ: ‘ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೊಂದಾಣಿಕೆಯಿಂದಲೇ ಅವರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನೂ ಗೆಲ್ಲಿಸಬಹುದು. ಹಾಗಾಗಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 66 ಶಾಸಕರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆಯೇ ಗೆದ್ದಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದು ಹೊಂದಾಣಿಕೆ ಮಾಡಿಕೊಳ್ಳುವವರ ಕಾಲ’ ಎಂದು ಲೇವಡಿ ಮಾಡಿದರು.

‘ಬಿ.ವೈ.ವಿಜಯೇಂದ್ರ ಅವರನ್ನು ಅಳೆದು, ತೂಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂತರಾಜ್ ವರದಿ ಜಾರಿಯಾಗಲಿ: ಕಾಂತರಾಜ್‌ ಆಯೋಗದ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂತರಾಜ್‌ ಆಯೋಗದ ವರದಿಯ ಮೂಲಪ್ರತಿ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಆ ವರದಿ ಸಾಫ್ಟ್‌ಕಾಪಿ ಕಂಪ್ಯೂಟರ್‌ನಲ್ಲಿ ಇರುತ್ತದೆ. ಅದನ್ನು ಕಳ್ಳತನ ‌ಮಾಡಲು ಆಗುವುದಿಲ್ಲವಲ್ಲ’ ಎಂದು ಹೇಳಿದ ಅವರು, ‘ಈ ವರದಿ ಜಾರಿಯಾಗಬಾರದು ಎಂದು ಹೇಳುವ ಸಮಾಜಗಳು ಸ್ವಲ್ಪ ಸಾಮಾಜಿಕವಾಗಿ ಯೋಚಿಸಬೇಕು‌’ ಎಂದರು.

‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಕಾಂತರಾಜ್‌ ಆಯೋಗದಿಂದ ವರದಿ ಪಡೆದಿದ್ದರು. ಈಗ ವರದಿ ಜಾರಿಗೆ ಸಿದ್ದರಾಮಯ್ಯ ಒಲವು ತೋರಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ವರದಿ ವಿರೋಧಿಸಿ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ, ಈ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿ. ಸದನದೊಳಗೆ ಈ ವಿಷಯ ಚರ್ಚೆಗೆ ತರಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT