ಪಾದಚಾರಿಗಳಿಗೆ ‘ಮಾರ್ಗ’ವಿಲ್ಲ; ಇರುವೆಡೆ ಜಾಗವಿಲ್ಲ!

ಶುಕ್ರವಾರ, ಜೂಲೈ 19, 2019
24 °C
ಸ್ಮಾರ್ಟ್‌ ಸಿಟಿ ಬೆಳಗಾವಿಯಲ್ಲಿ ಸಂವೇದನೆ ಇಲ್ಲದ ಪಾಲಿಕೆ, ಪೊಲೀಸ್ ಇಲಾಖೆ

ಪಾದಚಾರಿಗಳಿಗೆ ‘ಮಾರ್ಗ’ವಿಲ್ಲ; ಇರುವೆಡೆ ಜಾಗವಿಲ್ಲ!

Published:
Updated:
Prajavani

ಬೆಳಗಾವಿ: ಯೋಜಿತವಾಗಿ ಬೆಳವಣಿಗೆ ಆಗದಿರುವುದು, ಆಡಳಿತ ನಡೆಸುತ್ತಿರುವ ನಗರಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಬೇಕಾದ ಪೊಲೀಸರ ನಿರ್ಲಕ್ಷ್ಯ ಹಾಗೂ ಸಂವೇದನೆಯ ಕೊರತೆಯಿಂದಾಗಿ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಪಾದಚಾರಿ ಮಾರ್ಗಗಳು ಇಲ್ಲದಿರುವುದು; ಕೆಲವೆಡೆ ಇದ್ದರೂ ಓಡಾಡಲು ಜಾಗವಿಲ್ಲದಿರುವುದೇ ಇದಕ್ಕೆ ಕಾರಣ.‌

ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಆಯ್ಕೆಯಾಗಿರುವ ಈ ನಗರದಲ್ಲಿ ಸಾಮಾನ್ಯ ಜನರಿಗೆ ನೆರವಾಗುವ ‘ಪಾದಚಾರಿ ಮಾರ್ಗ’ಗಳ ಅಭಿವೃದ್ಧಿಗೆ, ಬಳಕೆಗೆ ಮುಕ್ತಗೊಳಿಸುವುದಕ್ಕೆ ಆದ್ಯತೆಯನ್ನೇ ನೀಡಿಲ್ಲ! ‍

ಪಾದಚಾರಿ ಮಾರ್ಗಗಳು ಅನ್ಯ ಉದ್ದೇಶಕ್ಕೆ, ವ್ಯಾಪಾರ–ವಹಿವಾಟು ನಡೆಸುವುದಕ್ಕೆ, ವಾಹನಗಳ ನಿಲುಗಡೆಗೆ ಬಳಕೆಯಾಗುತ್ತಿದ್ದರೂ ‘ಹೇಳುವವರು–ಕೇಳುವವರು’ ಇಲ್ಲದಂತಾಗಿದೆ. ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಪಾಲಿಕೆ ಅಧಿಕಾರಿಗಳು, ಪೊಲೀಸರು ವರ್ತಿಸುತ್ತಿರುವುದು ಅಚ್ಚರಿ ಮೂಡಿಸುತ್ತದೆ. ಪಾದಚಾರಿ ಮಾರ್ಗ– ಜನರಿಗೆ ಒದಗಿಸಬೇಕಾದ ಕನಿಷ್ಠ ಮೂಲಸೌಲಭ್ಯ. ಇದನ್ನು ಕಲ್ಪಿಸುವುದಕ್ಕೂ ಆದ್ಯತೆ ಸಿಕ್ಕಿಲ್ಲ.

ರಸ್ತೆಯಲ್ಲೇ ನಡೆಯಬೇಕು!:

ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ‘ಮಿನಿ ವಾಣಿಜ್ಯ ಕೇಂದ್ರ’ಗಳಂತಾಗಿವೆ. ಪಾದಚಾರಿಗಳು ಮುಖ್ಯರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ. ಅಪಘಾತಗಳಿಗೆ ತುತ್ತಾಗುವ ಆತಂಕ!

ಈ ಮಾರ್ಗಗಳ ‘ಒತ್ತುವರಿ’ ತೆರವು ಕಾರ್ಯಾಚರಣೆ ಕಾಲಕಾಲಕ್ಕೆ ನಡೆಯುತ್ತಲೇ ಇಲ್ಲ. ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವ ಮಹತ್ವದ ಕೆಲಸಕ್ಕೆ ಪಾಲಿಕೆ ಮುಂದಾಗಿಲ್ಲ. ಪಾಲಿಕೆ–ಪೊಲೀಸ್ ಇಲಾಖೆಯ ಸಮನ್ವಯದ ಕೊರತೆಯಿಂದಾಗಿ ಶ್ರೀಸಾಮಾನ್ಯರು ತೊಂದರೆಗೆ ಒಳಗಾಗುತ್ತಿದ್ದಾರೆ. ‘ಒತ್ತುವರಿದಾರರು’ ರಾಜಾರೋಷವಾಗಿ ಪಾದಚಾರಿ ಮಾರ್ಗಗಳನ್ನು ಅನಧಿಕೃವಾಗಿ ಬಳಸುವುದಕ್ಕೆ ಕಡಿವಾಣವೇ ಬಿದ್ದಿಲ್ಲ.

ನಿಲ್ದಾಣಗಳ ಬಳಿಯೇ ಇಲ್ಲ!:

ಹೆಚ್ಚು ಜನದಟ್ಟಣೆ ಕಂಡುಬರುವ ಕೇಂದ್ರ, ನಗರ ಬಸ್‌ನಿಲ್ದಾಣದ ಸುತ್ತಮುತ್ತ ಪಾದಚಾರಿ ಮಾರ್ಗವನ್ನು ಎಷ್ಟು ಹುಡುಕಿದರೂ ಸಿಗುವುದೇ ಇಲ್ಲ! ರಸ್ತೆಯನ್ನೂ ತಳ್ಳುಗಾಡಿಗಳವರು, ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುತ್ತಾರೆ.

ಬಸ್‌ಗಳಿಂದ ಇಳಿದವರು ಹಾಗೂ ಬಸ್ ನಿಲ್ದಾಣಕ್ಕೆ ಹೋಗುವವರು ಮುಖ್ಯರಸ್ತೆಯಲ್ಲಿಯೇ ನಡೆದುಕೊಂಡು ಬರಬೇಕು; ಹೋಗಬೇಕು. ಹೀಗಾಗಿ, ಇಲ್ಲಿ ರಸ್ತೆ ಅಪಘಾತಗಳು ಸಾಮಾನ್ಯ. ಸಂಚಾರ ಪೊಲೀಸರು ಕಣ್ಣಿದ್ದೂ ಕುರುಡರಂತೆ ವರ್ತಿಸುವ ವಿದ್ಯಮಾನವೂ ಇಲ್ಲಿ ಸಾಮಾನ್ಯ ಸಂಗತಿಯೇ.

‘ಶಾಸ್ತ್ರ’ಕ್ಕೊಮ್ಮೆ ತಳ್ಳುಗಾಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತದೆ. ಮರುದಿನ ಮತ್ತದೇ ಸ್ಥಿತಿ! ಜನಸಾಮಾನ್ಯರೆಲ್ಲರಿಗೂ ಆಗುವ ತೊಂದರೆ ಅಧಿಕಾರಿಗಳ ಕಣ್ಣಿಗೆ ಮಾತ್ರ ಕಾಣಿಸುವುದೇ ಇಲ್ಲ! ಎಲ್ಲದಕ್ಕೂ ದೂರು, ಮನವಿ ಸಲ್ಲಿಕೆಗಾಗಿಯೇ ಕಾಯುವ ಪೊಲೀಸರು ಸ್ವಯಂಸ್ಫೂರ್ತಿಯಿಂದ ಕಾರ್ಯಾಚರಣೆ ನಡೆಸುವ ಗೋಜಿಗೆ ಹೋಗುವುದೇ ಇಲ್ಲ!

ರೈಲು ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಭರ್ರನೆ ನುಗ್ಗುವ ವಾಹನಗಳ ಸಮೀಪವೇ ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ನಡೆದುಕೊಂಡು ಹೋಗಬೇಕಾದ ಸ್ಥಿತಿ.

ಇಡೀ ‘ನಗರ ಸಂಚಾರ’ ಮಾಡಿದರೆ ಪಾದಚಾರಿ ಮಾರ್ಗಗಳಿಗೆ ಆದ್ಯತೆ ನೀಡದಿರುವುದು ರಾಚುತ್ತದೆ. ಬಹುತೇಕ ಕಡೆಗಳಲ್ಲಿ ರಸ್ತೆಯಷ್ಟೇ ಇದೆ. ಇದು ನಗರಾಭಿವೃದ್ಧಿಯಲ್ಲಿ ಆಗಿರುವ ಪ್ರಮುಖ ವೈಫಲ್ಯ.

ಅಪಾಯಕ್ಕೆ ಆಹ್ವಾನ:

ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ, ಅಲ್ಲಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿಲ್ಲ. ಹಲವರು ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ. ಇಲ್ಲಿ ಸಂಚಾರ ಪೊಲೀಸರು ಪಾದಚಾರಿ ಮಾರ್ಗದಲ್ಲೇ ತಮ್ಮ ದ್ವಿಚಕ್ರವಾಹನಗಳನ್ನು ನಿಲ್ಲಿಸುವುದೂ ಆಗಾಗ ಕಂಡುಬರುತ್ತದೆ.

ಕಾಲೇಜು ರಸ್ತೆಯ ಚಿನ್ನಾಭರಣ ಅಂಗಡಿಯೊಂದರ ಎದುರು ಪಾದಚಾರಿ ಮಾರ್ಗವನ್ನೇ ‘ಪಾರ್ಕಿಂಗ್ ತಾಣ’ವನ್ನಾಗಿ ಮಾಡಿಕೊಂಡಿರುವುದು ನಿತ್ಯವೂ ಕಾಣಸಿಗುವ ದೃಶ್ಯ.

ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿ (ಜಿಲ್ಲಾಸ್ಪತ್ರೆ ಕಾಂಪೌಂಡ್ ಬದಿ) ಹಣ್ಣು, ಎಳನೀರು ಮಾರುವವರು ಹಲವು ವರ್ಷಗಳಿಂದಲೂ ಇದು ತಮ್ಮ ಜಾಗವೇನೋ ಎನ್ನುವಂತೆ ‘ನೆಲೆ’ ಮಾಡಿಕೊಂಡಿದ್ದಾರೆ. ಬಿಮ್ಸ್‌ ಆಸ್ಪತ್ರೆ ಎದುರಿನ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಅಧಿಕಾರಿಗಳಿಗೆ ಕಾಣಿಸುವುದಿಲ್ಲವೇ?!

ಕ್ಲಬ್‌ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಆಟೊರಿಕ್ಷಾಗಳ ಹಾವಳಿ. ತಮ್ಮ ಮಾರ್ಗ ದುರ್ಬಳಕೆ ಆಗಿರುವುದರಿಂದಾಗಿ ಪಾದಚಾರಿಗಳು ನೂರಾರು ಭಾರಿ ವಾಹನಗಳು ಸಂಚರಿಸುವ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುವುದು ಕಂಡುಬರುತ್ತದೆ. ಇದು, ಅಪಘಾತ, ಅನಾಹುತಗಳಿಗೆ ಆಹ್ವಾನ ನೀಡುತ್ತಿದೆ.

‘ಮಾರ್ಗ’ವೆಲ್ಲಿದೆ?:

ಅಂಬೇಡ್ಕರ್‌ ರಸ್ತೆಯಲ್ಲಿ ಮುಂದೆ ಸಾಗಿದರೆ ನೆಹರೂ ನಗರ, ಸದಾಶಿವನಗರಕ್ಕೆ ರಸ್ತೆ. ಅಲ್ಲಿ, ಫುಟ್‌ಪಾತೇ ಇಲ್ಲ. ಇನ್ನು ಲಕ್ಷ್ಮಿ ಕಾಂಪ್ಲೆಕ್ಸ್‌ ಬಳಿ ಪಾದಚಾರಿ ಮಾರ್ಗದಲ್ಲಿ ತರಕಾರಿ ವ್ಯಾಪಾರಿಗಳು ‘ಅಂಗಡಿ’ ಹಾಕಿಕೊಂಡಿರುತ್ತಾರೆ. ಮೊದಲೇ ಕಿಷ್ಕಿಂದೆಯಂತಿರುವ ಈ ರಸ್ತೆಗಳು ಮತ್ತಷ್ಟು ‘ಕುಗ್ಗಿ’ ಹೋಗಿವೆ. ಆಟೊರಿಕ್ಷಾ, ಕಾರು, ದ್ವಿಚಕ್ರವಾಹನಗಳ ಭರಾಟೆಯ ನಡುವೆಯೇ ಆ ಪ್ರದೇಶದಿಂದ ಹೊರಗೆ ಬರುವಷ್ಟರಲ್ಲಿ ಪಾದಚಾರಿಗಳು ಹೈರಾಣಾಗಿ ಹೋಗಿರುತ್ತಾರೆ.

ಇಲ್ಲಿನ ಬಹುತೇಕ ಕಡೆಗಳಲ್ಲಿ ನಿಗದಿತ ಜಾಗವೇ ಇಲ್ಲದಿರುವುದರಿಂದಾಗಿ ಪಾದಚಾರಿ ಮಾರ್ಗಗಳು ಹಾಗೂ ರಸ್ತೆಗಳೇ ವಾಹನಗಳ ‘ಪಾರ್ಕಿಂಗ್’ಗೆ ಸ್ಥಳವಾಗಿವೆ.

ಖಡೇಬಜಾರ್‌, ಸಮಾದೇವಿ ಗಲ್ಲಿ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ್, ಚವಾಟ ಗಲ್ಲಿ, ಗವಳಿ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ.... ಹೀಗೆ ಯಾವುದೇ ಪ್ರಮುಖ ರಸ್ತೆಗಳನ್ನು ನೋಡಿದರೂ ಅಲ್ಲಿ ವಾಹನಗಳು ರಸ್ತೆಯಲ್ಲಿಯೇ ನಿಂತಿರುತ್ತವೆ. ಅಲ್ಲದೇ, ಅಂಗಡಿಗಳ ವ್ಯಾಪಾರ–ವಹಿವಾಟು ರಸ್ತೆಗೂ ಚಾಚಿಕೊಂಡಿರುತ್ತದೆ!

ಹಾಗಾದರೆ ಇಲ್ಲಿ ಪಾದಚಾರಿಗಳಿಗೆ ಮಾರ್ಗವೆಲ್ಲಿದೆ!? ಇದು ಬಹುತೇಕ ರಸ್ತೆ, ಬಡಾವಣೆಗಳಲ್ಲಿ ಎದುರಾಗುವ ಪ್ರಶ್ನೆ. ಉತ್ತರವನ್ನು ನಗರಪಾಲಿಕೆಯವರೇ ಕೊಡಬೇಕು.

‘ಟೋಯಿಂಗ್ ವಾಹನಗಳನ್ನು ತರಿಸಲಾಗುವುದು’:

‘ನಗರದಲ್ಲಿ ಟೋಯಿಂಗ್ ವಾಹನಗಳು (ನಿಲ್ದಾಣವಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದರೆ ವಾಹನಗಳನ್ನು ಸಾಗಿಸುವುದಕ್ಕೆ) ಇಲ್ಲದಿರುವುದರಿಂದ ಬಹಳ ತೊಂದರೆಯಾಗಿದೆ. 2ಕ್ಕೆ ವಾಹನಗಳ ಖರೀದಿಗೆ ಟೆಂಡರ್ ಪ‍್ರಕ್ರಿಯೆ ನಡೆಸಲಾಗಿದೆ. ಶೀಘ್ರವೇ ಲಭ್ಯವಾಗಲಿದ್ದು, ನಂತರ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಡಿಸಿಪಿ ಯಶೋದಾ ಎಸ್. ವಂಟಗೋಡಿ ಪ್ರತಿಕ್ರಿಯಿಸಿದರು.

‘ಕಡಿಮೆ ಸಂಖ್ಯೆಯ ಸಿಬ್ಬಂದಿಯನ್ನೇ ಬಳಸಿಕೊಂಡು ಸಂಚಾರ ನಿರ್ವಹಣೆ ಮಾಡುತ್ತಿದ್ದೇವೆ. ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ಮಾಡಿರುವುದು ಕಂಡುಬಂದಲ್ಲಿ ಆದ್ಯತೆಯ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧೇ ಕೇಸ್ ಹಾಕಲಾಗುತ್ತಿದೆ’ ಎಂದು ಹೇಳಿದರು.

‘ಜನರೂ ಸಂವೇದನೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಪಾರ್ಕಿಂಗ್‌ ಇಲ್ಲದ ಸ್ಥಳದಲ್ಲಿ ವಾಹನ ನಿಲ್ಲಿಸಬಾರದು ಎನ್ನುವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಎಲ್ಲವನ್ನೂ ಪೊಲೀಸರೇ ಮಾಡಲಾಗದು. ಜನರೂ ಸಹಕರಿಸಬೇಕು’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !