ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟುಕನ ಕೈಗೆ ಕುರಿ ಕೊಟ್ಟಂತೆ: ಆನಂದ್ ಸಿಂಗ್‌ಗೆ ಅರಣ್ಯ ಖಾತೆಗೆ ವ್ಯಾಪಕ ಟೀಕೆ

Last Updated 12 ಫೆಬ್ರುವರಿ 2020, 20:36 IST
ಅಕ್ಷರ ಗಾತ್ರ

ಹೊಸಪೇಟೆ: ಅರಣ್ಯ ಪ್ರದೇಶದ ಗಡಿ ಗುರುತು ಬದಲಿಸಿರುವುದು ಹಾಗೂ ಅಕ್ರಮವಾಗಿ ಅದಿರು ರಫ್ತು ಮಾಡಿರುವುದಕ್ಕೆ ಸಂಬಂಧಿಸಿದಂತೆ ಆನಂದ್‌ ಸಿಂಗ್‌ ವಿರುದ್ಧ ನ್ಯಾಯಾಲಯದಲ್ಲಿ ಒಟ್ಟು 15 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಅವರಿಗೆ ಅರಣ್ಯ ಖಾತೆ ಕೊಟ್ಟಿರುವುದು ‘ಕಟುಕನ ಕೈಗೆ ಕುರಿ ಕೊಟ್ಟಂತಾಗಿದೆ’ ಎಂಬ ಟೀಕೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆಯ ಗಡಿ ಗುರುತು ಬದಲಿಸಿರುವುದು, ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಗಣಿ ಗುತ್ತಿಗೆ ಪಡೆದಿರುವುದು ಹಾಗೂ ಬೆಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿರುವುದಕ್ಕೆ ಸಂಬಂಧಿಸಿ ಸಿಂಗ್‌ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯ, ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ ಹಾಗೂ ಹೊಸಪೇಟೆಯ ಸೆಷೆನ್ಸ್‌ ನ್ಯಾಯಾಲದಯಲ್ಲಿ ಕಳವು, ವಂಚನೆ, ವಿಶ್ವಾಸದ್ರೋಹ ಕುರಿತು ಭಾರತೀಯ ದಂಡ ಸಂಹಿತೆ ಹಾಗೂ ಗಣಿ ಮತ್ತು ಖನಿಜ ಕಾಯ್ದೆಯಡಿ ದಾಖಲಾದ ಒಟ್ಟು 15 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಅಕ್ರಮವಾಗಿ ಅದಿರು ಸಾಗಣೆಗೆ ಸಂಬಂಧಿಸಿ 2013 ಹಾಗೂ 2015ರಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡವು ಸಿಂಗ್‌ ಅವರನ್ನು ಬಂಧಿಸಿತ್ತು. ಗಂಭೀರ ಅಪರಾಧ ಸ್ವರೂಪದ ಪ್ರಕರಣಗಳ ವಿಚಾರಣೆ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಸಿಂಗ್‌ ಅವರಿಗೆ ಅರಣ್ಯ ಖಾತೆಯ ಜವಾಬ್ದಾರಿ ವಹಿಸಿ ದೊಡ್ಡ ಪ್ರಮಾದ ಎಸಗಿದ್ದಾರೆ. ತಮ್ಮ ವಿರುದ್ಧದ ಪ್ರಕರಣಗಳಿಂದ ಬಚಾವ್‌ ಆಗಲು ಸಿಂಗ್‌ ಅವರಿಗೆ ಸಿ.ಎಂ. ಅವರೇ ಉತ್ತಮ ದಾರಿ ಮಾಡಿಕೊಟ್ಟಿದ್ದಾರೆ. ಇದು ಹಿತಾಸಕ್ತಿ ಸಂಘರ್ಷವೂ ಹೌದು ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿ, ಅನೇಕರು ಜೈಲು ಸೇರುವಂತೆ ಮಾಡಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಅವರ ಪ್ರತಿಕ್ರಿಯೆ.

‘ಆನಂದ್‌ ಸಿಂಗ್‌ ಅವರು ಬೇನಾಮಿ ಹೆಸರಿನಲ್ಲಿ ರಾಮಗಡದ ಅರಣ್ಯ ಪ್ರದೇಶವನ್ನು ಕಂದಾಯ ಜಮೀನಾಗಿ ಪರಿವರ್ತಿಸಿ, ಸಾವಿರಾರು ಮರಗಳ ಮಾರಣ ಹೋಮ ನಡೆಸಿ, ಗಣಿಗಾರಿಕೆ ಮಾಡಿದ್ದಾರೆ. ಬೆಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ಇಡೀ ಅರಣ್ಯ ಪ್ರದೇಶವನ್ನೇ ನುಂಗಿ ನೀರು ಕುಡಿದಿದ್ದಾರೆ. ಅಂತಹವರಿಗೆ ಮತ್ತೆ ಲೂಟಿ ಹೊಡೆಯಲು ಆಸ್ಪದ ಮಾಡಿಕೊಟ್ಟಂತಾಗಿದೆ. ನೈತಿಕತೆಯಿದ್ದರೆ ಸ್ವತಃ ಆನಂದ್‌ ಸಿಂಗ್‌ ಅವರೇ ಆ ಖಾತೆ ವಹಿಸಿಕೊಳ್ಳಬಾರದಿತ್ತು’ ಎಂದು ಹೇಳಿದ್ದಾರೆ.

‘ಅಕ್ರಮ ಗಣಿಗಾರಿಕೆಯಿಂದ ಈ ಹಿಂದೆ ಅನೇಕರು ಜೈಲು ಸೇರಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದರು. ಈಗ ಪುನಃ ಅಂತಹ ಮುಜುಗರಕ್ಕೆ ಒಳಗಾಗುವುದು ಬೇಡವೆಂದರೆ ಸಿಂಗ್‌ ಅವರಿಗೆ ಕೊಟ್ಟಿರುವ ಖಾತೆ ತಕ್ಷಣವೇ ಹಿಂಪಡೆಯಬೇಕು. ಅವರನ್ನು ಸಂಪುಟದಿಂದ ಕೈಬಿಡಲು ಗಂಭೀರವಾಗಿ ಯೋಚಿಸಬೇಕು’ ಎಂದಿದ್ದಾರೆ.

‘ರಾಜಕೀಯದಲ್ಲಿ ಅಪರಾಧ ಹಿನ್ನೆಲೆಯುಳ್ಳವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸುಪ್ರೀಂಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ. ಹೀಗಿರುವಾಗ ಅದಕ್ಕೆ ತದ್ವಿರುದ್ಧವಾಗಿ ಮುಖ್ಯಮಂತ್ರಿಯವರು ಗಂಭೀರ ಅಪರಾಧ ಪ್ರಕರಣ ಇರುವ ಸಿಂಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ನಾಚಿಕೆಗೇಡು’ ಎಂದು ಸಾಮಾಜಿಕ ಕಾರ್ಯಕರ್ತ ಯೂಸುಫ್‌ ಪಟೇಲ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT