7
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಮಿಕ ವಿರೋಧಿ ನೀತಿಗಳಿಗೆ ಅನಂತ ಸುಬ್ಬರಾವ್‌ ಟೀಕೆ

ಆ. 9ರಿಂದ ಕೇಂದ್ರದ ವಿರುದ್ಧ ಹೋರಾಟ

Published:
Updated:
ಎಚ್‌.ವಿ. ಅನಂತ ಸುಬ್ಬರಾವ್‌

ಹೊಸಪೇಟೆ: ‘ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬರುವ ಆಗಸ್ಟ್‌ 9ರಿಂದ ದೇಶದಾದ್ಯಂತ ಸತತ 40 ದಿನ ವಿವಿಧ ಸ್ವರೂಪದ ಚಳವಳಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕೆ.ಎಸ್‌.ಆರ್‌.ಟಿ.ಸಿ. ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಅನಂತ ಸುಬ್ಬರಾವ್‌ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆ. 9ರಂದೇ ಗಾಂಧೀಜಿಯವರು ಬ್ರಿಟಿಷರ ವಿರುದ್ಧ ‘ಭಾರತ ಬಿಟ್ಟು ತೊಲಗಿ’ ಚಳವಳಿ ನಡೆಸಿದ್ದರು. ಆದಕಾರಣ ಆ ದಿನದಿಂದ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಜಾಥಾ, ರಸ್ತೆತಡೆ, ಬಹಿರಂಗ ಸಭೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

‘ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವುದರ ಪ್ರತಿಫಲವಾಗಿ ದೇಶದಲ್ಲಿ ಕಾರ್ಮಿಕರ ಪರವಾದ ಹಲವು ಕಾಯ್ದೆಗಳು ಜಾರಿಗೆ ಬಂದಿವೆ. ಆದರೆ, ಅಂಥಹ ಕಾನೂನುಗಳನ್ನು ಬದಲಿಸಿ ಕಾರ್ಪೊರೇಟ್‌ ಪರವಾದ ನೀತಿಗಳನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಹೊರಟಿದ್ದಾರೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಮಾತುಗಳನ್ನು ಆಡುತ್ತಾರೆ. ಇನ್ನೊಂದೆಡೆ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಲು ಹೊರಟಿದ್ದಾರೆ. ಈ ದೇಶದ ಸ್ವಾವಲಂಬನೆಗೆ ಸಾರ್ವಜನಿಕ ವಲಯ ಇರಬೇಕು’ ಎಂದರು.

‘ಕಳೆದ ಎರಡು ವರ್ಷಗಳಲ್ಲಿ ಮೂರು ಸಲ ರಾಷ್ಟ್ರವ್ಯಾಪಿ ಹೋರಾಟ ನಡೆಸಿದ್ದೇವೆ. ಆದರೆ, ಸರ್ಕಾರ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಿಲ್ಲ. ನೋಟು ಅಮಾನ್ಯೀಕರಣದ ಬಳಿಕ ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರ ಕಪ್ಪು ಹಣ ಜಾಸ್ತಿಯಾಗಿದೆ. ಈ ವಿಷಯವನ್ನು ಸ್ವತಃ ಅದೇ ಬ್ಯಾಂಕ್‌ ಹೇಳಿದೆ. ಚುನಾವಣೆ ಸಂದರ್ಭಗಳಲ್ಲಿ ಯಾವ ರಾಜಕಾರಣಿಯೂ ಬಿಳಿ ಹಣ ಖರ್ಚು ಮಾಡುವುದಿಲ್ಲ, ಅದೇನಿದ್ದರೂ ಕಪ್ಪು ಹಣ. ಸರಕು ಮತ್ತು ಸೇವಾ ತೆರಿಗೆಯ (ಜಿ.ಎಸ್‌.ಟಿ.) ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ತಂದರೂ ಬೆಲೆ ಇಳಿಸುವುದಿಲ್ಲ ಎಂದು ಕೇಂದ್ರ ಹೇಳುತ್ತಿದೆ. ಇವರು ಜನಸಾಮಾನ್ಯರ ಪರ ಇದ್ದಾರೋ ಅಥವಾ ಕಾರ್ಪೊರೇಟ್‌ ಪರ ಇದ್ದಾರೋ ’ ಎಂದು ಪ್ರಶ್ನಿಸಿದರು.

‘ಮೋದಿಯವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅತ್ಯುತ್ತಮವಾದ ಆರ್ಥಿಕ, ಕೈಗಾರಿಕಾ ನೀತಿಗಳನ್ನು ಬದಲಿಸಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿರುವ ಕಾರ್ಮಿಕರ ಹಿತವನ್ನು ಕಾಪಾಡಬೇಕು. ಕಾರ್ಪೊರೇಟ್‌ ಪರವಾದ ಕಾನೂನು ತಿದ್ದುಪಡಿ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಫೆಡರೇಶನ್‌ ಜಂಟಿ ಕಾರ್ಯದರ್ಶಿಗಳಾದ ಟಿ.ಎಲ್‌. ರಾಜಗೋಪಾಲ್‌, ಎಚ್‌.ಎ. ಆದಿಮೂರ್ತಿ, ಉಪಾಧ್ಯಕ್ಷ ಟಿ. ಚೆನ್ನಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !