ಶನಿವಾರ, ಫೆಬ್ರವರಿ 27, 2021
19 °C
ದೂಳಿನಿಂದ ಸಿಗಲಿದೆ ಮುಕ್ತಿ

ಬದಲಾಗಲಿದೆ ಬಳ್ಳಾರಿ ಮುಖ್ಯರಸ್ತೆ ಚಹರೆ, ದ್ವಿಪಥದಿಂದ ತಗ್ಗಲಿದೆ ವಾಹನ ದಟ್ಟಣೆ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಕೊನೆಗೂ ಇಲ್ಲಿನ ಬಳ್ಳಾರಿ ಮುಖ್ಯರಸ್ತೆ ವಿಸ್ತರಣೆಗೆ ನಗರಸಭೆ ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಅದರ ಸಂಪೂರ್ಣ ಚಹರೆ ಬದಲಾಗಲಿದೆ.

ನಗರದ ಬಳ್ಳಾರಿ ವೃತ್ತದಿಂದ ತುಂಗಭದ್ರಾ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ.) ವರೆಗಿನ 1.66 ಕಿ.ಮೀ ರಸ್ತೆಯ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದ್ದು, ಭರದಿಂದ ಕಾಮಗಾರಿ ನಡೆಯುತ್ತಿದೆ.

ಕೆಲವು ಕಟ್ಟಡಗಳ ಮಾಲೀಕರು ರಸ್ತೆ ಅತಿಕ್ರಮಿಸಿಕೊಂಡು ನಿರ್ಮಿಸಿಕೊಂಡಿದ್ದ ಕಾಂಪೌಂಡ್‌ ಅನ್ನು ಈಗಾಗಲೇ ನೆಲಸಮಗೊಳಿಸಲಾಗಿದ್ದು, ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಅಷ್ಟೇ ಅಲ್ಲ, ಈ ಭಾಗದಲ್ಲಿ ಎರಡು ಹಳೆಯ ಕಿರು ಸೇತುವೆಗಳಿವೆ. ಎರಡೂ ಕಡೆ ಹೊಸದಾಗಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಒಂದರ ಕೆಲಸ ಪೂರ್ಣಗೊಂಡಿದೆ. ಇನ್ನೊಂದು ಸೇತುವೆ ಕೆಲಸ ಕೊನೆಯ ಹಂತದಲ್ಲಿದೆ.

ಮಣ್ಣು, ಕಾಂಕ್ರೀಟ್‌ ಹಾಗೂ ಜಲ್ಲಿ ಸುರಿದು ರಸ್ತೆಯನ್ನು ಸಮತಟ್ಟುಗೊಳಿಸಲಾಗುತ್ತಿದೆ. ನಂತರ ರಸ್ತೆ ವಿಸ್ತರಣೆ ಕೆಲಸ ನಡೆಯಲಿದೆ. ಅದಾದ ಬಳಿಕ ವಿಭಜಕ ನಿರ್ಮಿಸಿ, ವಿದ್ಯುದ್ದೀಪಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈಗಿರುವ ರಸ್ತೆಯು 30 ಅಡಿಗಳಿದ್ದು, ಅದನ್ನು 80 ಅಡಿಗಳಿಗೆ ವಿಸ್ತರಿಸಲಾಗುತ್ತಿದೆ. ಚರಂಡಿ, ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಒಟ್ಟು ₨6.58 ಕೋಟಿ ವೆಚ್ಚ ತಗಲುತ್ತಿದೆ.

ಬಳ್ಳಾರಿಯಿಂದ ಎಚ್‌.ಎಲ್‌.ಸಿ. ವರೆಗೆ ಈಗಾಗಲೇ ಚತುಷ್ಪಥ ನಿರ್ಮಾಣ ಕೆಲಸ ನಡೆಯುತ್ತಿದೆ. ಈ ರಸ್ತೆ ಹಾಗೂ ಬಳ್ಳಾರಿ ಮುಖ್ಯರಸ್ತೆ ಅಭಿವೃದ್ಧಿಗೊಂಡರೆ ವಾಹನ ದಟ್ಟಣೆ ತಗಲಿದೆ. ವಾಹನ ಸಂಚಾರವೂ ಸುಗಮಗೊಳ್ಳಿದೆ.

ಬಳ್ಳಾರಿ, ಆಂಧ್ರ ಪ್ರದೇಶದ ಗುತ್ತಿ, ಅನಂತಪುರ, ಕಡಪ ಸೇರಿದಂತೆ ಇತರೆ ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಗಣಿ ಹಾಗೂ ಉಕ್ಕಿನ ಕಾರ್ಖಾನೆಗಳು ಇರುವುದರಿಂದ ನಿತ್ಯ ನೂರಾರು ಲಾರಿಗಳು ಸಂಚರಿಸುತ್ತವೆ. ಸಾರಿಗೆ ಸಂಸ್ಥೆ ಬಸ್ಸುಗಳು ಓಡಾಡುವುದರಿಂದ ಸದಾ ವಾಹನ ದಟ್ಟಣೆ ಇರುತ್ತದೆ. ನಗರದ ಒಳ ಪ್ರವೇಶಿಸುವ ಈ ಮುಖ್ಯರಸ್ತೆ ಕಿರಿದಾಗಿರುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿತ್ತು. ಅಪಘಾತಗಳು ಸರ್ವೇ ಸಾಮಾನ್ಯವಾಗಿದ್ದವು.

ಮಳೆಯಿಂದ ರಸ್ತೆಯ ತುಂಬೆಲ್ಲ ಮೊಳಕಾಲುದ್ದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಟ ನಡೆಸುವಂತಹ ಸ್ಥಿತಿ ಇದೆ. ರಸ್ತೆ ಸಂಪೂರ್ಣ ಹಾಳಾಗಿರುವ ಕಾರಣ ವಾಹನಗಳು ಸಂಚರಿಸಿದರೆ ದೂಳು ಆವರಿಸಿಕೊಳ್ಳುತ್ತದೆ. ದಾರಿಹೋಕರು ಹಾಗೂ ದ್ವಿಚಕ್ರ ವಾಹನ ಸವಾರರು ದೂಳಿನಿಂದ ಕಂಗಾಲಾಗಿದ್ದಾರೆ. ಸ್ವಲ್ಪ ಮಳೆ ಬಂದರೂ ರಸ್ತೆಯ ತುಂಬೆಲ್ಲ ನೀರು ನಿಂತುಕೊಳ್ಳುತ್ತದೆ. ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಹಾಗೂ ಅನೇಕ ಸಂಘ ಸಂಸ್ಥೆಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿವೆ. ಕೊನೆಗೂ ಅವರ ಹೋರಾಟಕ್ಕೆ ಮಣಿದಿರುವ ನಗರಸಭೆಯು ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದನ್ನು ಅವರು ಸ್ವಾಗತಿಸಿದ್ದಾರೆ.

‘ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬಹಳ ಹದಗೆಟ್ಟಿತ್ತು. ತಡವಾಗಿಯಾದರೂ ಎಚ್ಚೆತ್ತುಕೊಂಡು ಅದನ್ನು ಅಭಿವೃದ್ಧಿಗೊಳಿಸಲು ಮುಂದಾಗಿರುವುದು ಸಂತಸದ ವಿಷಯ. ಗುಣಮಟ್ಟಕ್ಕೆ ಆದ್ಯತೆ ನೀಡಬೇಕು’ ಎಂದು ಶಿರಸಿನಕಲ್ಲು ಬಡಾವಣೆಯ ಬಸವರಾಜ ಹೇಳಿದರು.

‘ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ದೂಳಿನಿಂದ ನೆಮ್ಮದಿ ಹಾಳಾಗಿತ್ತು. ಈಗ ಹೊಸ ರಸ್ತೆ ನಿರ್ಮಿಸುತ್ತಿರುವುದು ಒಳ್ಳೆಯ ವಿಚಾರ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಬಳ್ಳಾರಿ ರಸ್ತೆಯ ನಿವಾಸಿ ರಫೀಕ್‌ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು