ಸರ್ಕಾರಿ ಐಟಿಐ: ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಇಲ್ಲಸಿಬ್ಬಂದಿಗೆ ಗೌರವ ಧನವಿಲ್ಲ

ಸೋಮವಾರ, ಮಾರ್ಚ್ 25, 2019
21 °C
ಇಟ್ಟಿಗಿ ಕಾಲೇಜು

ಸರ್ಕಾರಿ ಐಟಿಐ: ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಇಲ್ಲಸಿಬ್ಬಂದಿಗೆ ಗೌರವ ಧನವಿಲ್ಲ

Published:
Updated:
Prajavani

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐ.ಟಿ.ಐ) ಮೂಲಸೌಕರ್ಯ ಸಂಪೂರ್ಣ ಮರೀಚಿಕೆಯಾಗಿದೆ.

ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅನೇಕ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಮೂಲಸೌಕರ್ಯ ಸಮಸ್ಯೆ ಒಂದೆಡೆಯಾದರೆ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೂ ಸಿಗುತ್ತಿಲ್ಲ.

ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಕ್ಕಿಲ್ಲ. ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಗೌರವ ಧನವೂ ಇಲ್ಲ. ಜಿಲ್ಲಾಡಳಿತ ವಿಶೇಷವಾಗಿ ರೂಪಿಸಿದ ಜಿಲ್ಲಾ ಖನಿಜ ನಿಧಿಯ ವಿದ್ಯಾರ್ಥಿ ವೇತನದಿಂದಲೂ ಹಲವು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಈ ಕುರಿತು ಪ್ರಾಚಾರ್ಯರನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂಬುದು ವಿದ್ಯಾರ್ಥಿಗಳ ದೂರು.

ವಿದ್ಯಾರ್ಥಿಗಳಿಗೆ ನೀಡುವ ಶಿಷ್ಯ ವೇತನ ಮಾಸಿಕ ₹50. ಎರಡು ದಶಕದ ಹಿಂದೆ ನಿಗದಿಗೊಳಿಸಿದ್ದ ಮೊತ್ತವನ್ನೇ ಸರ್ಕಾರ ಈಗಲೂ ನೀಡುತ್ತಿದೆ. ಆರು ತಿಂಗಳಿಗೆ, ವರ್ಷಕ್ಕೆ ಒಮ್ಮೆ ಸಿಗುತ್ತಿದ್ದ ಶಿಷ್ಯ ವೇತನವನ್ನು ವಿದ್ಯಾರ್ಥಿಗಳು ಬಸ್‌ ಪಾಸ್‌ ಇತರೆ ಶೈಕ್ಷಣಿಕ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವೂ ಸಿಗದಾಗಿದೆ.

‘ಸ್ಟೈಫಂಡ್‌ ಕುರಿತು ಪ್ರಾಚಾರ್ಯರನ್ನು ವಿಚಾರಿಸಿದರೆ, ಸರಿಯಾಗಿ ಎಲ್ಲರೂ ರೆಕಾರ್ಡ್‌ ತೋರಿಸಿ ಆಮೇಲೆ ಸ್ಟೈಫಂಡ್‌ ಕೊಡುತ್ತೇವೆ. ಪರೀಕ್ಷೆ ಮುಗಿದ ಮೇಲೆ ಕೊಡುತ್ತೇವೆ ಎಂದು ಸಬೂಬು ಹೇಳುತ್ತಾರೆ. ನ್ಯಾಯಯುತವಾಗಿ ಸೌಲಭ್ಯ ಕೇಳಿದರೆ ಪ್ರಾಚಾರ್ಯರು ಅವಾಚ್ಯವಾಗಿ ನಿಂದಿಸುತ್ತಾರೆ, ಬಾಯಿಗೆ ಬಂದಂತೆ ಮಾತಾಡುತ್ತಾರೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಏಳು ಜನ ಅತಿಥಿ ಉಪನ್ಯಾಸಕರಿಗೂ ವರ್ಷದಿಂದ ಗೌರವ ಧನ ಇಲ್ಲ. ಹೀಗಾಗಿ ಅತ್ಯಲ್ಪ ಗೌರವಧನಕ್ಕೆ ದುಡಿಯುವ ಅತಿಥಿ ಉಪನ್ಯಾಸಕರು ಬೋಧನೆಗೆ ನಿರಾಸಕ್ತಿ ತೋರುತ್ತಿದ್ದಾರೆ.

‘ಬೇರೆಲ್ಲಾ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸಂಬಳ ಪಾವತಿಯಾಗಿದೆ. ನಮಗೆ ಮಾತ್ರ ಸಂಬಳ ಸಿಕ್ಕಿಲ್ಲ’ ಎಂದು ಅತಿಥಿ ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗ್ರಾಮೀಣ ಐ.ಟಿ.ಐ ಕಾಲೇಜಿಗೆ ಇಟ್ಟಿಗಿ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಸೇರಿದಂತೆ ಹೂವಿನಹಡಗಲಿ, ಮರಿಯಮ್ಮನಹಳ್ಳಿ, ತಂಬ್ರಹಳ್ಳಿ, ಹರಪನಹಳ್ಳಿಯ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ಕಾಲೇಜು ಬಳಿ ಬಸ್‌ಗಳು ನಿಲುಗಡೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡೇ ಕಾಲೇಜಿಗೆ ಹೋಗಬೇಕಿದೆ. ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ಕಾಲೇಜಿಗೆ ಕಾಂಪೌಂಡ್‌ ಇಲ್ಲದೇ ನಾನಾ ಸಮಸ್ಯೆಗಳು ಉಂಟಾಗಿವೆ. ‘ಡಿ’ ಗ್ರುಪ್‌ ಸಿಬ್ಬಂದಿ ಇಲ್ಲದ ಕಾರಣ ವಿದ್ಯಾರ್ಥಿಗಳೇ ಕಸ ಗುಡಿಸಬೇಕಿದೆ. ಫ್ಲೋರೈಡ್‌ ಅಂಶ ಅಧಿಕವಿರುವ ಕೊಳವೆ ಬಾವಿಯ ನೀರು ಸೇವಿಸುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಕೊಳವೆ ಬಾಯಿ ಕೆಟ್ಟು ಹೋದರೆ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಾರೆ.

ಕಾಲೇಜು ಉತ್ತಮ ಕಟ್ಟಡ ಹೊಂದಿದ್ದರೂ ಅಗತ್ಯ ಮೂಲಸೌಕರ್ಯ ಹೊಂದುವಲ್ಲಿ ಹಿಂದೆ ಬಿದ್ದಿದೆ. ಯುವ ಜನರಿಗೆ ತರಬೇತಿ ನೀಡಿ, ಸ್ವ ಉದ್ಯೋಗದ ದಾರಿ ತೋರಬೇಕಾದ ಇಟ್ಟಿಗಿ ಐಟಿಐ ಕಾಲೇಜು ಇದ್ದೂ ಇಲ್ಲದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !