ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾರದಿಂದ ಬದುಕು ಸಿಹಿಯಾದ ಕಥೆ

Last Updated 31 ಜನವರಿ 2019, 6:30 IST
ಅಕ್ಷರ ಗಾತ್ರ

ಕಂಪ್ಲಿ: ಖಾರದಿಂದ ಬದುಕು ಸಿಹಿ ಮಾಡಿಕೊಂಡ ಪಟ್ಟಣದ ತೆಂಗಿನಕಾಯಿ ಓಣಿಯ ಮುಕ್ಕುಂದಿ ಶಿವಗಂಗಮ್ಮ ಅವರ ಕಥೆಯಿದು.

ಖಾರ ಕುಟ್ಟುವ ಕಾಯಕ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ. ಅವರೊಬ್ಬ ಆದರ್ಶ ಗೃಹ ಉದ್ಯಮಿಯಾಗಿ ಬದಲಾಗಿದ್ದಾರೆ. 28 ವರ್ಷಗಳಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಖಾರದ ಜತೆಗೆ ಶಾವಿಗೆ, ಹಪ್ಪಳ ಮಾಡಿಕೊಡುತ್ತಾರೆ. ಇಡ್ಲಿ, ದೋಸೆ ಹಿಟ್ಟು ರುಬ್ಬಿ ಕೊಡುತ್ತಾರೆ. ಬೆಳ್ಳುಳ್ಳಿ, ಹಸಿಶುಂಠಿ ಸೇರಿದಂತೆ ಇತರೆ ಮಸಾಲೆ ಪದಾರ್ಥಗಳನ್ನು ರುಬ್ಬಿ ಕೊಡುತ್ತಾರೆ.

ಆರಂಭದಲ್ಲಿ ತುಂಗಭದ್ರಾ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ₹50 ಸಾವಿರ ಸಾಲ ಪಡೆದು ಐದು ಲೀಟರ್ ವೆಟ್ ಗ್ರೈಂಡರ್‌ ಖರೀದಿಸಿದ್ದರು. ಸಾಲ ಮರು ಪಾವತಿ ನಂತರ ಉಳಿದ ಪ್ರೋತ್ಸಾಹ ಧನ ಮತ್ತು ವ್ಯವಹಾರದಿಂದ ಬಂದ ಆದಾಯ, ಸ್ವಂತ ಹಣ ಸೇರಿಸಿ ₹1.50 ಲಕ್ಷದಲ್ಲಿ ಖಾರ ಕುಟ್ಟುವ ಯಂತ್ರ, ಶಾವಿಗೆ ಹೊಸೆಯುವ ಯಂತ್ರ, ಹಪ್ಪಳದ ಯಂತ್ರ, ಏಳು ಮತ್ತು ಮೂರು ಲೀಟರ್‌ ವೆಟ್‌ ಗ್ರೈಂಡರ್‌ಗಳನ್ನು ಖರೀದಿಸಿ, ಅವುಗಳಿಂದ ಎಲ್ಲ ಕೆಲಸ ಮಾಡುತ್ತಿದ್ದಾರೆ.

ನಿತ್ಯ ಇಡ್ಲಿ, ದೋಸೆ, ವಡೆ ಹಿಟ್ಟು, ಚಟ್ನಿ ರುಬ್ಬುವುದು, ಬೆಳ್ಳುಳ್ಳಿ, ಹಸಿಶುಂಠಿ, ಮಸಾಲೆ ಪದಾರ್ಥ ರುಬ್ಬಿಕೊಡುವುದು, ಖಾರ ಕುಟ್ಟಿಕೊಡುವುದು, ಶಾವಿಗೆ ಹೊಸೆಯುವುದು, ಹಪ್ಪಳ ಮಾಡಿಕೊಡುತ್ತಾರೆ. ವಿಶೇಷ ಸಂದರ್ಭ, ಹಬ್ಬ ಹರಿದಿನಗಳಲ್ಲಿಹೋಳಿಗೆ ಹೂರಣ ಮತ್ತು ಋತುಮಾನಕ್ಕೆ ಅನುಸಾರವಾಗಿ ಹುಣಸೆ ಚಟ್ನಿಯನ್ನು ರುಬ್ಬಿಕೊಡುತ್ತಾರೆ.

ಪ್ರತಿ ಕೆ.ಜಿ. ಹಿಟ್ಟು, ಚಟ್ನಿ, ಹುಣಸೆಕಾಯಿ ರುಬ್ಬಲು ₹20, ಹಸಿಶುಂಠಿ, ಬೆಳ್ಳುಳ್ಳಿ, ಮಸಾಲೆ ರುಬ್ಬಿಕೊಡಲು ₹25, ಕೆ.ಜಿ. ಶಾವಿಗೆ ಹೊಸೆಯಲು ₹20, ಕೆ.ಜಿ ಖಾರದಪುಡಿ ಕುಟ್ಟಲು ₹40 ದರ ನಿಗದಿಪಡಿಸಿದ್ದಾರೆ.

ಪತಿ ಕಾಲವಾಗಿದ್ದರೂ ಸಮಾಜದಲ್ಲಿ ಪುರುಷರಿಗೆ ಸರಿಸಮನಾಗಿ ಬದುಕು ಕಟ್ಟಿಕೊಳ್ಳಬೇಕು ಎಂಬ ಛಲದಿಂದ ಸ್ವಂತ ದುಡಿಮೆ ಮೂಲಕ 57ರ ಇಳಿ ವಯಸ್ಸಿನಲ್ಲೂ ಶಿವಗಂಗಮ್ಮ ಸಂಸಾರದ ನೊಗಕ್ಕೆ ಹೆಗಲು ಒಡ್ಡಿದ್ದಾರೆ.

‘ಯಂತ್ರಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದೇನೆ. ಸ್ವಲ್ಪ ಹಣ ಉಳಿತಾಯ ಮಾಡುವುದರೊಂದಿಗೆ ದೈನಂದಿನ ಖರ್ಚು, ಮೊಮ್ಮಕ್ಕಳಾದ ಚೇತನಾ, ವಾಗೀಶ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದೇನೆ. ನನ್ನ ಗೃಹ ಉದ್ಯಮಕ್ಕೆ ಮಗಳು ವಿಜಯಲಕ್ಷ್ಮಿ ಅರಳಲೆಮಠ, ಅಳಿಯ ಸಿದ್ದಲಿಂಗಸ್ವಾಮಿ ಅವರ ಸಹಕಾರ ಬಹಳ ಇದೆ’ ಎಂದು ಶಿವಗಂಗಮ್ಮ ನೆನಪಿಸಿಕೊಳ್ಳುತ್ತಾರೆ.

‘ಮುಂದಿನ ದಿನಗಳಲ್ಲಿ ಅರಿಷಿಣ ಕೊಂಬು ಕುಟ್ಟುವ ಯಂತ್ರ, ಸಕ್ಕರೆ ಬೀಸುವ, ರೊಟ್ಟಿ ತಯಾರಿಸುವ ಯಂತ್ರಗಳನ್ನು ತರುವ ಯೋಜನೆ ಇದೆ. ಸರ್ಕಾರ ಈ ರೀತಿ ಕೆಲಸ ಮಾಡುವವರಿಗೆ ಹೆಚ್ಚಿನ ನೆರವು ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT