ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಗೆ ಹೋಗಿ ಬಂದಿದ್ದೇನೆ, ತಪ್ಪು ಮಾಡಲ್ಲ ಎಂದಿದ್ದ ಆನಂದ್ ಸಿಂಗ್ : ಸಿದ್ದರಾಮಯ್ಯ

ವಿಜಯನಗರ ಚುನಾವಣಾ ಪ್ರಚಾರ ಕಾರ್ಯಕ್ರಮ
Last Updated 28 ನವೆಂಬರ್ 2019, 12:54 IST
ಅಕ್ಷರ ಗಾತ್ರ

ಹೊಸಪೇಟೆ:‘ನಾನು ಜೈಲಿಗೆ ಹೋಗಿ ಬಂದಿದ್ದೇನೆ. ನನ್ನ ವಿರುದ್ಧದ ಎಲ್ಲಾ ಕೇಸುಗಳು ಕೊನೆಗೊಳ್ಳಲು ಬಂದಿವೆ. ಮುಂದೆ ಯಾವುದೇ ತಪ್ಪು ಮಾಡಲ್ಲ ಎಂದು ಹೇಳಿ ಕಾಂಗ್ರೆಸ್‌ಗೆ ಬಂದಿದ್ದರು. ಆದರೆ, ಅಧಿಕಾರದ ಆಸೆಗಾಗಿ ಯಾರಿಗೂ ತಿಳಿಸದೇ ಏಕಾಏಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ ಹಾಗೂ ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದಿರುವ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ತಾಲ್ಲೂಕಿನ ಗಾದಿಗನೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ‘ಆನಂದ್‌ ಸಿಂಗ್‌ ಅವರನ್ನು ಸುಪ್ರೀಂಕೋರ್ಟ್‌ ಅನರ್ಹಗೊಳಿಸಿದೆ. ಅವರೊಬ್ಬ ನಾಲಾಯಕರು, ಅಯೋಗ್ಯರು ಎಂಬುದು ಸಾಬೀತಾಗಿದೆ. ಈಗ ಚುನಾವಣೆಗೆ ನಿಂತಿರುವ ಅವರನ್ನು ತಿರಸ್ಕರಿಸಿರುವ ಮೂಲಕ ಜನತಾ ನ್ಯಾಯಾಲಯವು ಕಾಯಂ ಆಗಿ ಅವರನ್ನು ಅನರ್ಹಗೊಳಿಸಬೇಕು’ ಎಂದು ಮನವಿ ಮಾಡಿದರು.

‘ತನ್ನ ಸ್ವಾರ್ಥ, ಅವರ ಅಕ್ರಮ ಆಸ್ತಿ ರಕ್ಷಣೆಗಾಗಿ ಆನಂದ್ ಸಿಂಗ್ರಾಜಕೀಯದಲ್ಲಿ ಇದ್ದಾರೆ. ಜನಸೇವೆ ಮಾಡುವುದಕ್ಕಾಗಿ ಅಲ್ಲ. ಅವರೊಬ್ಬ ಜಮೀನ್ದಾರಿ ಮನಃಸ್ಥಿತಿಯ ವ್ಯಕ್ತಿ. ಜನಸಾಮಾನ್ಯರ ರಕ್ತ ಹೀರುವವರು. ಮಾಫಿಯಾ ಗ್ಯಾಂಗ್‌ನವರು. ಅಂತಹವರು ಗೆದ್ದರೆ ಯಾರಿಗೂ ಪ್ರಯೋಜನವಿಲ್ಲ. ಎಲ್ಲ 15 ಕ್ಷೇತ್ರಗಳಲ್ಲೂ ಇಂತಹವರೇ ಇದ್ದಾರೆ. ಇವರೆಲ್ಲರನ್ನೂ ಸೋಲಿಸಿ, ಇಡೀ ದೇಶಕ್ಕೆ ಉತ್ತಮ ಸಂದೇಶ ರವಾನಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ವಿಜಯನಗರ ವಿಧಾನಸಭಾ ಪ್ರಾಮಾಣಿಕ ಮತ್ತು ಅಪ್ರಾಮಾಣಿಕರಿಬ್ಬರ ನಡುವಿನ ಸಮರವಾಗಿದೆ. ಅದರಲ್ಲಿ ಪ್ರಾಮಾಣಿಕರಾದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆಯವರನ್ನು ಗೆಲ್ಲಿಸಿ, ಅಪ್ರಾಮಾಣಿಕರಾಗಿರುವ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರನ್ನು ಸೋಲಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮನವಿ ಮಾಡಿದರು.

'ನಾನು ನನ್ನ ಉಸಿರು ಇರುವವರೆಗೆ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಆನಂದ್ ಸಿಂಗ್ ಹೇಳಿದ್ದರು. ಈಗ ಇದ್ದಕ್ಕಿದಂತೆ ಬಿಜೆಪಿ ಸೇರಿದ್ದಾರೆ. ಅವರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಅನರ್ಹರ ಕ್ಷೇತ್ರಗಳಲ್ಲಿ ಸಾಕಷ್ಟು ಜನಾಕ್ರೋಶವಿದೆ. ಜನ ಅವರನ್ನು ಸೋಲಿಸಲು ತೀರ್ಮಾನಿಸಿದ್ದಾರೆ. ಪೇಟೆಯಲ್ಲಿ ದನ, ಕುರಿ, ಮೇಕೆ ಮಾರಾಟ ಮಾಡುವುದನ್ನು ನೋಡಿದ್ದೇವೆ. ಆದರೆ, ಬಿಜೆಪಿಯವರು ಶಾಸಕರನ್ನು ಖರೀದಿಸುತ್ತಿದ್ದಾರೆ. ಶಾಸಕರು ದುಡ್ಡಿಗಾಗಿ ಅವರನ್ನೇ ಮಾರಿಕೊಂಡಿದ್ದಾರೆ.ಒಬ್ಬೊಬ್ಬರಿಗೆ ₹30 ಕೋಟಿ ಹಣ ನೀಡಿ ಬಿಜೆಪಿ ಖರೀದಿಸಿದೆ’ ಎಂದು ಆರೋಪಿಸಿದರು.

‘ಆನಂದ್‌ ಸಿಂಗ್‌ ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಹಣದಲ್ಲಿ ಮೆರೆಯುತ್ತಿದ್ದಾರೆ. ಮೂರು ಸಲ ಗೆದ್ದರೂ ವಿಜಯನಗರ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಅಂತಹವರನ್ನು ಗೆಲ್ಲಿಸಿ ಏನು ಪ್ರಯೋಜನ. ಕಾಂಗ್ರೆಸ್‌ನಿಂದ ಸರಳ, ಸಜ್ಜನ, ಯಾವುದೇ ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸಿ ಕಾಂಗ್ರೆಸ್‌ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಜೆ.ಎನ್‌. ಗಣೇಶ್‌, ಭೀಮಾ ನಾಯ್ಕ, ಈ. ತುಕಾರಾಂ, ರಘುಮೂರ್ತಿ, ವಿಧಾನ ಪರಿಷತ್‌ ಸದಸ್ಯರಾದ ಬೋಸರಾಜು, ಅಲ್ಲಂ ವೀರಭದ್ರಪ್ಪ, ಜಬ್ಬಾರ್‌ ಖಾನ್‌, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ಎಚ್‌. ಆಂಜನೇಯ, ಸೂರ್ಯನಾರಾಯಣ ರೆಡ್ಡಿ, ವಿ.ಎಸ್‌. ಉಗ್ರಪ್ಪ, ಬಸವರಾಜ ರಾಯರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT