ಹಬ್ಬಕ್ಕೆ ಹೊರಡಲು ಸಿದ್ಧಗೊಂಡ ಗಣಪ, ಕೋಲ್ಕತ್ತದ ಕಲಾವಿದರಿಂದ ತರಹೇವಾರಿ ಪ್ರತಿಮೆ

7

ಹಬ್ಬಕ್ಕೆ ಹೊರಡಲು ಸಿದ್ಧಗೊಂಡ ಗಣಪ, ಕೋಲ್ಕತ್ತದ ಕಲಾವಿದರಿಂದ ತರಹೇವಾರಿ ಪ್ರತಿಮೆ

Published:
Updated:
Deccan Herald

ಹೊಸಪೇಟೆ: ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮನೆ ಹಾಗೂ ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲು ತರಹೇವಾರಿ ಗಣಪನ ಪ್ರತಿಮೆಗಳು ಸಿದ್ಧಗೊಂಡಿವೆ.

ವಿಶೇಷ ಬಗೆಯ ಬೆನಕನ ಪ್ರತಿಮೆಗಳನ್ನು ಮಾಡಲೆಂದೆ ಪಶ್ಚಿಮ ಬಂಗಾಳದ ಕೋಲ್ಕತ್ತದಿಂದ ಬಂದಿರುವ 15 ಜನ ಕಲಾವಿದರ ತಂಡ ನಗರದ ಬಳ್ಳಾರಿ ರಸ್ತೆಯಲ್ಲಿ ಬೀಡು ಬಿಟ್ಟಿದೆ. ಹಗಲಿರುಳು ಬೆವರು ಹರಿಸಿ, ವಿಭಿನ್ನ ಪ್ರಕಾರದ ಪ್ರತಿಮೆಗಳನ್ನು ತಯಾರಿಸಿದ್ದು, ಅವುಗಳಿಗೆ ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂರು ಅಡಿಗಳಿಂದ 15 ಅಡಿಗಳ ವರೆಗೆ 200ಕ್ಕೂ ಹೆಚ್ಚು ಪ್ರತಿಮೆಗಳನ್ನು ಮಾಡಿದ್ದಾರೆ. ಮಣ್ಣು ಹಾಗೂ ಬಿದಿರು ಉಪಯೋಗಿಸಿಕೊಂಡು ತಯಾರಿಸಿದ್ದು, ಅವುಗಳಿಗೆ ನೈಸರ್ಗಿಕ ಬಣ್ಣ ಬಳಿದಿದ್ದಾರೆ. ಎಲ್ಲ ಪ್ರತಿಮೆಗಳು ಪರಿಸರ ಸ್ನೇಹಿಯಾಗಿವೆ. ನೋಡಲು ಅಷ್ಟೇ ಆಕರ್ಷಕವಾಗಿವೆ. ಮೂರು ಅಡಿಗಳ ಪ್ರತಿಮೆಯ ಬೆಲೆ ₨5 ಸಾವಿರ ಇದ್ದರೆ, 15 ಅಡಿಗಳ ಪ್ರತಿಮೆಯ ಬೆಲೆ ₨50 ಸಾವಿರ ಇದೆ.

ಈ ಸಲದ ಹಬ್ಬಕ್ಕೆ ವಿಶೇಷವೆಂಬಂತೆ, ಎಂಟು ಅಡಿ ಎತ್ತರ, 12 ಅಡಿ ಅಗಲವಿರುವ ಅನಂತ ಪದ್ಮನಾಭನ ಭಂಗಿಯಲ್ಲಿರುವ ಪ್ರತಿಮೆ ಮಾಡಿದ್ದು, ಅದು ಎಲ್ಲರ ಗಮನ ಸೆಳೆಯುತ್ತಿದೆ. ಐದು ಹೆಡೆಗಳ ನಾಗರಹಾವಿನ ಮೇಲೆ ಪ್ರತಿಷ್ಠಾಪನೆಗೊಂಡಿರುವ ಗಣೇಶ, ಗರುಡ ಗಣೇಶ, ಶಿವಲಿಂಗ ಗಣಪ, ಪಂಚಮುಖಿ, ಶಿವ–ಪಾರ್ವತಿ, ಗೋಪಾಲ, ರಾಮ–ಲಕ್ಷ್ಮಣ, ರಾಕ್ಷಸ ಮರ್ದನ, ಮಯೂರ, ಶಂಖ, ನಾಲ್ಕು ತಲೆಯ ಗಣಪ ಕೂಡ ಆಕರ್ಷಕವಾಗಿವೆ.

ಈಗಾಗಲೇ ಬಹುತೇಕ ಮಾರಾಟವಾಗಿವೆ. ಕೆಲವರು ಈಗಷ್ಟೇ ಬಂದು ಖರೀದಿಸುತ್ತಿದ್ದಾರೆ. ‘ಒಂದಕ್ಕಿಂತ ಒಂದು ಆಕರ್ಷಕವಾಗಿರುವ ಗಣಪನ ಪ್ರತಿಮೆಗಳನ್ನು ಮಾಡಿದ್ದಾರೆ. ಯಾವುದು ಖರೀದಿಸಬೇಕು, ಯಾವುದು ಬಿಡಬೇಕು ಎಂಬ ಗೊಂದಲ ಉಂಟಾಗಿದೆ. ನಮ್ಮ ಗಣೇಶ ಮಂಡಳಿಯ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಶುಕ್ರವಾರ ಸಂಜೆ ಒಂದು ತೀರ್ಮಾನಕ್ಕೆ ಬರುತ್ತೇವೆ’ ಎಂದು ಟಿ.ಬಿ.ಡ್ಯಾಂ ಗಣೇಶ ಮಂಡಳಿಯ ಅಧ್ಯಕ್ಷ ರಾಮು ‘ಪ್ರಜಾವಾಣಿ’ಗೆ ತಿಳಿಸಿದರು. ಅವರು ಗುರುವಾರ ಸಂಜೆ ಪ್ರತಿಮೆಗಳನ್ನು ನೋಡಲೆಂದು ಬಂದಾಗ ಪತ್ರಿಕೆಯೊಂದಿಗೆ ಮಾತನಾಡಿದರು.

‘ನಮಗೆ ಕೆಲವು ಪ್ರತಿಮೆಗಳು ಇಷ್ಟವಾಗಿವೆ. ಆದರೆ, ಅವುಗಳು ಮಾರಾಟವಾಗಿವೆ. ಇರುವುದರಲ್ಲಿಯೇ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲ, ನಮ್ಮ ಬಜೆಟ್‌ಗೆ ಅದು ಸರಿ ಹೊಂದುವಂತಿರಬೇಕು’ ಎಂದು ಹೇಳಿದರು.

‘ಈ ಊರಿನ ಪ್ರತಿ ಬಡಾವಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಒಳ್ಳೆಯ ಪ್ರತಿಮೆ ಮಾಡಿದರೆ ಎಷ್ಟೇ ಬೆಲೆಯಿರಲಿ ಖರೀದಿಸುತ್ತಾರೆ. ಸತತ ಹತ್ತು ವರ್ಷಗಳಿಂದ ಇಲ್ಲಿಗೆ ಬಂದು, ಇಲ್ಲೇ ಉಳಿದು, ತಯಾರಿಸಿ ಮಾರಾಟ ಮಾಡುತ್ತಿದ್ದೇವೆ’ ಎಂದು ಮುಖ್ಯ ಕಲಾವಿದ ಉತ್ತಮ್‌ ಪಾಲ್‌ ತಿಳಿಸಿದರು.

‘ಕೋಲ್ಕತ್ತದಲ್ಲಿ ನಾವೆಲ್ಲರೂ ದೇವಿ ಪ್ರತಿಮೆಗಳನ್ನು ಮಾಡಿ, ಉಪಜೀವನ ನಡೆಸುತ್ತೇವೆ. ಗಣೇಶ ಚತುರ್ಥಿಯ ಮೂರು ತಿಂಗಳ ಮುಂಚೆ ಇಲ್ಲಿಗೆ ಬರುತ್ತೇವೆ. ಹಬ್ಬದ ನಂತರ ಪುನಃ ಊರಿಗೆ ಮರಳುತ್ತೇವೆ. ಈ ಕೆಲಸ ಬಿಟ್ಟರೆ ನಮಗೆ ಬೇರೇನೂ ಗೊತ್ತಿಲ್ಲ’ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !