ಬುಧವಾರ, ಸೆಪ್ಟೆಂಬರ್ 23, 2020
24 °C
ಒಂದೇ ದಿನದಲ್ಲಿ ಜಲಾಶಯಕ್ಕೆ ಹರಿದು ಬಂತು ಒಂದು ಟಿ.ಎಂ.ಸಿ. ಅಡಿಗೂ ಅಧಿಕ ನೀರು

ರೈತರಲ್ಲಿ ಸಂತಸ ತಂದ ಒಳಹರಿವು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಈ ವಿಷಯ ರೈತ ಸಮುದಾಯದಲ್ಲಿ ಸಂತಸ ಮೂಡಲು ಕಾರಣವಾಗಿದೆ.

ಮಳೆಗಾಲ ಆರಂಭವಾಗಿ ಒಂದು ತಿಂಗಳಾದರೂ ಅಣೆಕಟ್ಟೆಗೆ ಒಳಹರಿವೇ ಇರಲಿಲ್ಲ. ಸೋಮವಾರ ಜಲಾಶಯದಲ್ಲಿ 1.79 ಟಿ.ಎಂ.ಸಿ. ಅಡಿ ನೀರು ಇತ್ತು. ಆದರೆ, ಏಕಾಏಕಿ ನೀರು ಹರಿದು ಬರಲು ಆರಂಭಿಸಿತು. ಆರಂಭದಲ್ಲಿ ಮೂರು ಸಾವಿರ ಕ್ಯುಸೆಕ್‌ ಒಳಹರಿವು ಇತ್ತು. ನಂತರ ಅದು 14 ಸಾವಿರ ಕ್ಯುಸೆಕ್‌ಗೂ ಅಧಿಕವಾಯಿತು. ಇದರಿಂದಾಗಿ 24 ಗಂಟೆಗಳಲ್ಲಿ ಜಲಾಶಯಕ್ಕೆ ಒಂದು ಟಿ.ಎಂ.ಸಿ. ಅಡಿಗೂ ಅಧಿಕ ನೀರು ಹರಿದು ಬಂದಿದೆ.

ಒಂದೆಡೆ ಜಿಲ್ಲೆಯಾದ್ಯಂತ ಇದುವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಇನ್ನೊಂದೆಡೆ ಅಣೆಕಟ್ಟೆ ಬರಿದಾಗುತ್ತ ಹೋಗಿತು. ಮಲೆನಾಡಿನಲ್ಲೂ ಉತ್ತಮ ಮಳೆಯಾಗದ ಕಾರಣ ಜಲಾಶಯಕ್ಕೆ ನೀರು ಹರಿದು ಬರಲಿಲ್ಲ.  ಸಮರ್ಪಕವಾಗಿ ಮಳೆ ಆಗದೇ ಇರುವುದು, ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ದಿನೇ ದಿನೇ ಕುಸಿಯ ತೊಡಗಿದ್ದರಿಂದ ಸಹಜವಾಗಿಯೇ ರೈತರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಈಗ ಸ್ವಲ್ಪಮಟ್ಟಿಗೆ ಆ ಆತಂಕ ದೂರವಾಗಿದೆ. 

ಶಿವಮೊಗ್ಗದ ಗಾಜನೂರು ಸಮೀಪದ ತುಂಗಾ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಒಳಹರಿವು ಬರುವ ಕೆಲವು ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ. ಇದು ಕೂಡ ರೈತರ ಸಮುದಾಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

ಹೋದ ವರ್ಷ ಜು.9ರಂದು ಜಲಾಶಯದಲ್ಲಿ 43.49 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಆಗಸ್ಟ್‌ನಲ್ಲಿ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿತ್ತು. ನಂತರ 250 ಟಿ.ಎಂ.ಸಿ. ಅಡಿಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿತ್ತು. ಎಲ್ಲ ಕಾಲುವೆಗಳಿಗೂ ನೀರು ಹರಿಸಿದ್ದರಿಂದ ರೈತರು ಎರಡು ಬೆಳೆ ಬೆಳೆಸಲು ಸಾಧ್ಯವಾಗಿತ್ತು. ಆದರೆ, ಈ ಸಲ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. 

ಮುಂಗಾರು ಕೈಕೊಟ್ಟಿರುವುದು, ಜಲಾಶಯಕ್ಕೆ ನೀರು ಹರಿದು ಬರದ ಕಾರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರು ಭತ್ತ ನಾಟಿ ಮಾಡಿಲ್ಲ. ಕಬ್ಬು ಬೆಳೆಸಲು ಮುಂದಾಗಿಲ್ಲ. ಆದರೆ, ಈಗ ಅಣೆಕಟ್ಟೆಗೆ ನೀರು ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಒಂದು ಬೆಳೆಯಾದರೂ ಬೆಳೆಯಬಹುದು. ಕುಡಿಯುವ ನೀರಿನ ಸಮಸ್ಯೆ ನೀಗಬಹುದು ಎನ್ನುವುದು ರೈತರ ಭರವಸೆ.

‘ತಿಂಗಳ ಬಳಿಕ ಅಣೆಕಟ್ಟೆಗೆ ನೀರು ಬರುತ್ತಿರುವ ವಿಚಾರ ತಿಳಿದು ಖುಷಿಯಾಗಿದೆ. ಕೊನೆಗೂ ದೇವರು ಕಣ್ಣು ಬಿಟ್ಟಿದ್ದಾನೆ. ಒಳಹರಿವು ಇನ್ನೂ ಹೆಚ್ಚಾಗಬೇಕು. ಆದಷ್ಟು ಶೀಘ್ರ ಜಲಾಶಯ ತುಂಬಿ, ಕಾಲುವೆಗಳ ಮೂಲಕ ನೀರು ಹರಿಸಿದರೆ ರೈತರು ಬೆಳೆ ಬೆಳೆದು ಸಂಕಷ್ಟದಿಂದ ಪಾರಾಗಬಹುದು’ ಎನ್ನುತ್ತಾರೆ ಕಡ್ಡಿರಾಂಪುರದ ರೈತ ಬಸಯ್ಯ ಸ್ವಾಮಿ.

‘ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರ ಇದೆ. ಈ ವರ್ಷವಾದರೂ ಅದು ನೀಗಬಹುದು ಎಂಬ ಭರವಸೆ ಇತ್ತು. ಆದರೆ, ಇಲ್ಲಿಯವರೆಗೆ ಸರಿಯಾಗಿ ಮಳೆಯಾಗಿಲ್ಲ. ನಿತ್ಯ ದಟ್ಟ ಮೋಡವಾಗುತ್ತಿದೆ. ಆದರೆ, ಮಳೆ ಸುರಿಯುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ರೈತರು ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಜಲಾಶಯವಾದರೂ ತುಂಬಿದರೆ ಕೆಲವು ಭಾಗದ ರೈತರು ಬೆಳೆ ಬೆಳೆಯಬಹುದು. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ರೈತ ಶಿವಾನಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು