ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾತಂತ್ರಕ್ಕೆ ಮೋದಿ ಅಪಮಾನ’

Last Updated 21 ಏಪ್ರಿಲ್ 2019, 9:11 IST
ಅಕ್ಷರ ಗಾತ್ರ

ಹೊಸಪೇಟೆ: ‘ನರೇಂದ್ರ ಮೋದಿಯವರು ಐದು ವರ್ಷಗಳಲ್ಲಿ ಕೇವಲ 19 ದಿನ ಸಂಸತ್ತಿಗೆ ಹಾಜರಾಗಿ, ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ’ ಎಂದು ಮಾಜಿಸಚಿವ ಎಚ್‌.ಆಂಜನೇಯ ಟೀಕಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂಸತ್ತಿನಲ್ಲಿ ಇಡೀ ದೇಶದ ಜನರ ಸಮಸ್ಯೆಗಳ ಕುರಿತಂತೆ ಚರ್ಚೆಗಳಾಗುತ್ತವೆ. ಸಂಸದರು ಚರ್ಚಿಸುವ ವಿಷಯಗಳನ್ನು ಪ್ರಧಾನಿಯಾದವರು ತಾಳ್ಮೆಯಿಂದ ಆಲಿಸಿ, ಅವುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ, ಮೋದಿಯವರು ಆ ಕೆಲಸ ಮಾಡಿಲ್ಲ. ಏಕೆಂದರೆ ಅವರು ಸಂಸತ್ತಿನ ಅಧಿವೇಶನಕ್ಕೆ ಸರಿಯಾಗಿ ಹಾಜರಾಗಿಲ್ಲ. ಐದು ವರ್ಷ ವಿದೇಶ ಪ್ರವಾಸ ಮಾಡುವುದರಲ್ಲೇ ಕಾಲಹರಣ ಮಾಡಿದ್ದಾರೆ’ ಎಂದರು.

‘ಐದು ವರ್ಷಗಳಲ್ಲಿ ಮೋದಿಯವರು ಮಾಧ್ಯಮದವರನ್ನು ಮುಖಾಮುಖಿಯಾಗಿ ಸಂದರ್ಶನ ನೀಡಿರುವುದು ಬಹಳ ಕಡಿಮೆ. ಈಗ ಚುನಾವಣೆಯ ಸಂದರ್ಭ ಇರುವುದರಿಂದ ಸಂದರ್ಶನ ಕೊಡುತ್ತಿದ್ದಾರೆ. ಯಾರಿಗೂ ಉತ್ತರದಾಯಿಯಾಗಿ ಅವರು ಕೆಲಸ ಮಾಡುತ್ತಿಲ್ಲ. ವಾಸ್ತವದಲ್ಲಿ ಭಾರತಕ್ಕಿಂತ ವಿದೇಶದ ಪ್ರಧಾನಿಯಾಗಿದ್ದಾರೆ. ಏಕೆಂದರೆ ಅವರು ಭಾರತಕ್ಕಿಂತ ಹೆಚ್ಚಿನ ಸಮಯ ವಿದೇಶದಲ್ಲೇ ಕಳೆದಿದ್ದಾರೆ’ ಎಂದು ಹೇಳಿದರು.

‘ರಫೇಲ್‌ ಹಗರಣದಲ್ಲಿ ಮೋದಿ ಸಿಕ್ಕಿಕೊಂಡಿದ್ದಾರೆ. ರಾಹುಲ್‌ ಗಾಂಧಿಯವರು ದಾಖಲೆಗಳ ಸಮೇತ ಅದನ್ನು ಜಗಜ್ಜಾಹೀರು ಮಾಡಿದ್ದಾರೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ಇಲಾಖೆಗಳು ನಾಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ತಾನೊಬ್ಬ ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿಯವರಿಗೆ ಅತಿ ಮಹತ್ವದ ಕಡತಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ’ ಎಂದು ಲೇವಡಿ ಮಾಡಿದರು.

‘ಮೋದಿಯವರು ನೀಡಿದ ಒಂದೇ ಒಂದು ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಎಲ್ಲ ರಂಗಗಳಲ್ಲಿ ಅವರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಅವರು ನಡೆಸಿರುವುದಕ್ಕಿಂತ ಹೆಚ್ಚಿನ ಜನ ರಾಹುಲ್‌ ಗಾಂಧಿಯವರ ರ್‍ಯಾಲಿಗಳಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿ. ದಿನೇ ದಿನೇ ಅವರ ಜನಪ್ರಿಯತೆ ಕುಸಿಯುತ್ತಿದೆ. ಈ ಸಲ ಚುನಾವಣೆಯಲ್ಲಿ ಅವರು ಸೋಲುವುದು ಶತಃಸಿದ್ಧ’ ಎಂದು ಹೇಳಿದರು.

ಮುಖಂಡರಾದ ಎ. ಮಾನಯ್ಯ, ಅಬ್ದುಲ್‌ ವಹಾಬ್‌, ವೀರಸ್ವಾಮಿ, ತಾರಿಹಳ್ಳಿ ವೆಂಕಟೇಶ್‌, ನಿಂಬಗಲ್‌ ರಾಮಕೃಷ್ಣ, ಎ. ಬಸವರಾಜ, ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT