ಕಲ್ಲಿನಿಂದ ಹೊಡೆದು ಕೊಲೆ; ಜೀವಾವಧಿ ಶಿಕ್ಷೆ

7

ಕಲ್ಲಿನಿಂದ ಹೊಡೆದು ಕೊಲೆ; ಜೀವಾವಧಿ ಶಿಕ್ಷೆ

Published:
Updated:

ಹೊಸಪೇಟೆ: ನಿವೇಶನಕ್ಕೆ ಸಂಬಂಧಿಸಿ ನಡೆದ ಜಗಳ ಬಿಡಿಸಲು ಹೋದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಮೂರನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ಶುಕ್ರವಾರ ಆದೇಶ ಹೊರಡಿಸಿದರು.

‘ಕಂಪ್ಲಿ ತಾಲ್ಲೂಕಿನ ಹಂಪದೇವನಹಳ್ಳಿ ರೇಣುಕಯ್ಯ ಶಿಕ್ಷೆಗೆ ಗುರಿಯಾದವನು. ಹನುಮಯ್ಯ ಸಣ್ಣ ಜಡಿಯಪ್ಪ ಸಾವನ್ನಪ್ಪಿದ ವ್ಯಕ್ತಿ. ರೇಣುಕಯ್ಯಗೆ ₨25 ಸಾವಿರ ದಂಡ ಕಟ್ಟಬೇಕು. ದಂಡ ಕಟ್ಟಲು ಆಗದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು. ಜತೆಗೆ ಹನುಮಯ್ಯನವರ ಅಪ್ರಾಪ್ತ ಮಗ ಮಲ್ಲಿಕಾರ್ಜುನನಿಗೆ ₨3 ಲಕ್ಷ ಪರಿಹಾರ ಕೊಡಬೇಕು’ ಎಂದು ಆದೇಶಿಸಿದರು.

‘2015ರ ನವೆಂಬರ್‌ 12ರಂದು ಹಂಪದೇವನಹಳ್ಳಿಯಲ್ಲಿ ನಿವೇಶನಕ್ಕೆ ಸಂಬಂಧಿಸಿ ರೇಣುಕಯ್ಯ ಅವರ ತಾಯಿ ಜೌಕಿನ ಈರಮ್ಮನವರು ಚೆಲುವಾದಿ ಕರಿಯಪ್ಪ ಎಂಬುವರೊಂದಿಗೆ ಜಗಳ ತೆಗೆಯುತ್ತಾರೆ. ಹನುಮಯ್ಯ ಮಧ್ಯ ಪ್ರವೇಶಿಸಿ, ಜಗಳ ಬಿಡಿಸಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ರೇಣುಕಯ್ಯ, ಕೆಟ್ಟ ಭಾಷೆಯಿಂದ ಬೈದು ಕಲ್ಲಿನಿಂದ ಹೊಡೆಯುತ್ತಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಹನುಮಯ್ಯ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು’ ಎಂದು ಸರ್ಕಾರಿ ಅಭಿಯೋಜಕ ಕೆ. ನಾಗರಾಜ ಆಚಾರ್‌ ತಿಳಿಸಿದ್ದಾರೆ.

‘ಘಟನೆ ಸಂಬಂಧ ಅಂದಿನ ಕಂಪ್ಲಿ ಸಿ.ಪಿ.ಐ. ಲಿಂಗನಗೌಡ ನೆಗಳೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೇಲಿನಂತೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !