‘ಮಹಾನವಮಿ ದಿಬ್ಬ’ ಹೆಸರಿಗಷ್ಟೇ ಸೀಮಿತ

7
ದಸರಾ ಉತ್ಸವದ ಮೂಲ ಜಾಗದಲ್ಲಿಲ್ಲ ಸಂಭ್ರಮ; ಸ್ಮಾರಕಕ್ಕೆ ಸೀಮಿತ

‘ಮಹಾನವಮಿ ದಿಬ್ಬ’ ಹೆಸರಿಗಷ್ಟೇ ಸೀಮಿತ

Published:
Updated:
Deccan Herald

ಹೊಸಪೇಟೆ: ಒಂಬತ್ತು ದಿನಗಳ ಕಾಲ ಮೈಸೂರಿನಲ್ಲಿ ಆಚರಿಸಲಾಗುವ ನಾಡಹಬ್ಬ ದಸರೆಗೆ ಮೂಲ ಪ್ರೇರೇಣೆ ತಾಲ್ಲೂಕಿನ ಹಂಪಿಯ ‘ಮಹಾನವಮಿ ದಿಬ್ಬ’.

ಹೆಸರೇ ಸೂಚಿಸುವಂತೆ ‘ಮಹಾನವಮಿ ದಿಬ್ಬ’ ದಸರಾ ಉತ್ಸವದ ಆಚರಣೆಗೆಂದೇ ವಿಜಯನಗರದ ಅರಸರು ನಿರ್ಮಿಸಿದ್ದರು. ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರದಿಂದ ಅಲ್ಲಿ ದಸರೆಗೆ ಸಂಬಂಧಿಸಿದ ಯಾವ ಕಾರ್ಯಕ್ರಮಗಳು ಇದುವರೆಗೆ ನಡೆದಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ಅದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದ ನಂತರ ಅಲ್ಲಿ ಯಾವುದೇ ಕಾರ್ಯಕ್ರಮ ಆಚರಣೆಗೆ ಆಸ್ಪದ ಇಲ್ಲದಂತಾಗಿದೆ. ಇದರಿಂದಾಗಿ ಅದು ವಿಜಯನಗರ ಕಾಲದ ದಸರಾ ಆಚರಣೆಯ ಕುರುಹುವಾಗಷ್ಟೇ ಉಳಿದುಕೊಂಡಿದೆ.

‘ಮಹಾನವಮಿ ದಿಬ್ಬವು ದಸರಾ ಆಚರಣೆಯ ಪ್ರಮುಖ ಕೇಂದ್ರವಾಗಿತ್ತು ಎನ್ನುವುದು ಶಾಸನಗಳು, ಕಾವ್ಯಗಳು ಸಾಕ್ಷೀಕರಿಸುತ್ತವೆ’ ಎನ್ನುತ್ತಾರೆ ಇತಿಹಾಸಕಾರರು ಹಾಗೂ ಸಾಹಿತಿಗಳು.

‘ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆಗೆ ವಿಶೇಷ ಮಹತ್ವವಿತ್ತು. ಈ ಕಾರಣಕ್ಕಾಗಿಯೇ ಮಹಾನವಮಿ ದಿಬ್ಬವನ್ನು ರಾಜರ ಖಾಸಾ ಜಾಗದಲ್ಲಿ ನಿರ್ಮಿಸಲಾಗಿತ್ತು. ಇಡೀ ರಾಜಮನೆತನ ಆ ಉತ್ಸವದಲ್ಲಿ ಭಾಗಿಯಾಗುತ್ತಿತ್ತು. ಒಂಬತ್ತು ದಿನಗಳ ಕಾಲ ಅಲ್ಲಿ ಉತ್ಸವ ನಡೆಯುತ್ತಿತ್ತು. ದಿಬ್ಬದ ಮೇಲೆ ಅರಸರು, ಗಣ್ಯರು ಕುಳಿತುಕೊಂಡರೆ, ಅದರ ಸುತ್ತಲೂ ಜನಸಾಮಾನ್ಯರು ಸೇರುತ್ತಿದ್ದರು’ ಎಂದು ಸಾಹಿತಿ ಮೃತ್ಯುಂಜಯ ರುಮಾಲೆ ಹೇಳಿದರು.

‘ದಿಬ್ಬದ ಮುಂಭಾಗದಿಂದ ಅಂಬಾರಿ ಮೆರವಣಿಗೆ ಹಾದು ಹೋಗುತ್ತಿತ್ತು. ಕೋಲಾಟ, ಸಮಾಳ, ನಂದಿಧ್ವಜ ಮೆರವಣಿಗೆ ನಡೆಯುತ್ತಿತ್ತು. ಅದರ ಜತೆಗೆ ಕವಾಯತು, ಬೆಂಕಿ ಉಗುಳುವುದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಅವರ ವಾರಸುದಾರರಾಗಿದ್ದ ಕೆಳದಿಯವರು ಆ ಪರಂಪರೆಯನ್ನು ಕೆಲಕಾಲ ಮುಂದುವರಿಸಿಕೊಂಡು ಹೋಗಿದ್ದರು. ನಂತರ ಈ ಉತ್ಸವವನ್ನು ಮೈಸೂರಿನ ಅರಸರು ಆರಂಭಿಸಿದರು. ಅದು ಈಗಲೂ ನಡೆಯುತ್ತಿದೆ. ಈಗ ‘ಮೈಸೂರು ದಸರಾ’ ಎಂಬ ಹೆಸರು ಪಡೆದಿದೆ’ ಎಂದು ವಿವರಿಸಿದರು.

ಕೃಷ್ಣದೇವರಾಯನಿಂದ ನಿರ್ಮಾಣ: ‘ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯ ಒಡಿಶಾದ ಉದಯಗಿರಿಯಲ್ಲಿ ನಡೆದ ಯುದ್ಧದಲ್ಲಿ ಜಯಬೇರಿ ಗಳಿಸಿ, ಹಿಂತಿರುಗಿದ ನಂತರ ಮಹಾನವಮಿ ದಿಬ್ಬ ನಿರ್ಮಿಸಿದ ಎಂಬ ವಿಷಯ ಇತಿಹಾಸದಲ್ಲಿ ದಾಖಲಾಗಿದೆ. 12 ಮೀಟರ್‌ ಎತ್ತರದ ಚೌಕಾಕೃತಿಯಲ್ಲಿರುವ ದಿಬ್ಬ ಉತ್ತರ ದಿಕ್ಕಿಗೆ ಮುಖ ಮಾಡಿದೆ. ದಿಬ್ಬದ ಎದುರು ಹಾಗೂ ಹಿಂಬದಿಯಲ್ಲಿ ಮೆಟ್ಟಿಲುಗಳಿವೆ. ಅರಸರು ಆನೆಯ ಮೇಲೆ ಕುಳಿತುಕೊಂಡು ಬಂದು, ನೇರವಾಗಿ ದಿಬ್ಬದ ಮೇಲೆ ಇಳಿದುಕೊಳ್ಳುತ್ತಿದ್ದರು’ ಎಂದು ರುಮಾಲೆ ಮಾಹಿತಿ ನೀಡಿದರು.

ದಿಬ್ಬದ ಸುತ್ತಲೂ ಸುಂದರವಾದ ಕೆತ್ತನೆಗಳಿವೆ. ರಾಜರ ಮೆರವಣಿಗೆ, ಸಂಗೀತ ಕಾರ್ಯಕ್ರಮ, ನೃತ್ಯ, ಜಂಬೂಸವಾರಿ, ಬೇಟೆ, ಜೀವನ ವಿಧಾನ ಸೇರಿದಂತೆ ಹಲವು ಕೆತ್ತನೆಗಳನ್ನು ಅದರ ಮೇಲೆ ನೋಡಬಹುದು. ಅದರ ಮೇಲ್ಭಾಗದಲ್ಲಿ ನಿಂತರೆ ಇಡೀ ಹಂಪಿಯ ಪರಿಸರ ಗೋಚರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !