ಗಣಿಬಾಧಿತರ ಅಭಿವೃದ್ಧಿಗೆ ಆಕ್ಷೇಪಣೆ ಸಲ್ಲದು: ಡಿ.ಸಿ

7
ಗಣಿ ಕಂಪೆನಿಗಳ ಫೆಡರೇಶನ್‌ ಮುಖಂಡರಿಗೆ ಮನವಿ

ಗಣಿಬಾಧಿತರ ಅಭಿವೃದ್ಧಿಗೆ ಆಕ್ಷೇಪಣೆ ಸಲ್ಲದು: ಡಿ.ಸಿ

Published:
Updated:
Deccan Herald

ಬಳ್ಳಾರಿ: ‘ಜಿಲ್ಲೆಯ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಡಳಿತ ರೂಪಿಸಿರುವ ಕ್ರಿಯಾಯೋಜನೆಗೆ ಫೆಡರೇಶನ್‌ ಆಫ್‌ ಇಂಡಿಯನ್‌ ಮಿನರಲ್‌ ಇಂಡಸ್ಟ್ರೀಸ್‌ (ಫೆಮಿ) ಆಕ್ಷೇಪಿಸದೆ ಬೆಂಬಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಮನವಿ ಮಾಡಿದರು.

ನಗರದಲ್ಲಿ ಶನಿವಾರ ಈ ಸಂಬಂಧ ಫೆಡರೇಷನ್‌ ಮುಖಂಡರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದ ಅವರು, ‘ಸಂತ್ರಸ್ತರ ಅಭಿವೃದ್ಧಿಗಾಗಿ ₨ 20 ಸಾವಿರ ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಅದು  ಜಾರಿಗೆ ಬಂದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯ. ಇಲ್ಲದಿದ್ದರೆ ಗಣಿ ಕಂಪೆನಿಗಳು ನಿರಂತರ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಫೆಮಿ ಆಕ್ಷೇಪಣೆಯನ್ನು ಸಲ್ಲಿಸಬಾರದು’ ಎಂದರು.

‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮಕ್ಕೆ ಕ್ರಿಯಾಯೋಜನೆಯನ್ನು ಸಲ್ಲಿಸಲಾಗುವುದು. ಆದ್ಯತೆ ಮೇರೆಗೆ ಸರ್ಕಾರ ಕ್ರಿಯಾಯೋಜನೆಯನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ಅದಕ್ಕೂ ಮುನ್ನ ಬೆಂಗಳೂರಿನಲ್ಲಿ ಆ.4ರಂದು ನಿಗಮದ ಸಭೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಕ್ರಿಯಾಯೋಜನೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮೈನಿಂಗ್, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ, ಪ್ರತಿ ತಾಲೂಕಿಗೆ 3 ಸಾವಿರ ಮನೆಗಳ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

‘ಜಿಲ್ಲಾ ಖನಿಜ ನಿಧಿಯ ಬಳಕೆಯಿಂದಾಗಿಯೇ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲಿ ಹತ್ತರೊಳಗಿನ ಸ್ಥಾನ ಪಡೆದಿದೆ’ ಎಂದರು.

ಶಾಸಕರಾದ ಜಿ.ಸೋಮಶೇಖರರೆಡ್ಡಿ, ಎನ್.ಗಣೇಶ, ಎಸ್‌ಬಿಪಿ ಭೀಮಾನಾಯ್ಕ, ಎಂ.ಎಸ್‌.ಸೋಮಲಿಂಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಮಹಾವೀರ್, ಅನೂಜ್, ಚಿನ್ಮಯಿ ಸೇರಿದಂತೆ ಫೆಮಿಯ ಐವರು ಪ್ರತಿನಿಧಿಗಳು, ಪ್ರೊಬೆಷನರಿ ಐಎಎಸ್ ಅಧಿಕಾರಿ ನಂದಿನಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !