ಏತ ನೀರಾವರಿ ಪಂಪ್‌ಸೆಟ್‌ಗಳು ಜಲಾವೃತ

7
ಹರಿದ ತುಂಗಭದ್ರಾ ನದಿಯ ನೀರು

ಏತ ನೀರಾವರಿ ಪಂಪ್‌ಸೆಟ್‌ಗಳು ಜಲಾವೃತ

Published:
Updated:
Deccan Herald

 ಸಿರುಗುಪ್ಪ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ತಾಲ್ಲೂಕಿನ ನದಿ ದಂಡೆಯಲ್ಲಿರುವ ಏತ ನೀರಾವರಿಯ ನೂರಾರು ಪಂಪ್‌ಸೆಟ್‌ ರೂಮುಗಳು ಬುಧವಾರ ಜಲಾವೃತಗೊಂಡು ಭತ್ತದ ಫಸಲಿಗೆ ಹಾನಿಯಾಗಿದೆ.

ತಾಲ್ಲೂಕಿನ ಮಣ್ಣೂರು ಸೂಗೂರು ಗ್ರಾಮದಿಂದ ಗಡಿಭಾಗದ ಟಿ.ಎಸ್‌.ಕೂಡ್ಲೂರು ಗ್ರಾಮದವರೆಗಿನ ನದಿ ದಂಡೆಯ ಪಂಪ್‌ಸೆಟ್‌ಗಳಿಗೆ ಮಂಗಳವಾರ ರಾತ್ರಿಯಿಂದಲೇ ‘ನೀರಿನ ಬಿಸಿ’ ಮುಟ್ಟಿದೆ.

ನದಿ ದಂಡೆಯ ತಗ್ಗು ಪ್ರದೇಶದಲ್ಲಿರುವ ಪಂಪ್‌ಸೆಟ್‌ ರೂಮುಗಳಿಂದ ರೈತರು ವಿದ್ಯುತ್‌ ಪಂಪ್‌ಸೆಟ್‌ಗಳನ್ನು ಬಿಚ್ಚಿ ಸ್ಥಳಾಂತರಿಸಿದ್ದಾರೆ.

ತಾಲ್ಲೂಕಿನ ಇಬ್ರಾಂಪುರ ಗ್ರಾಮದ ಬಳಿಯ ನದಿ ದಡದಲ್ಲಿರುವ ಬಸವೇಶ್ವರ ಏತ ನೀರಾವರಿಯ ಪಂಪ್‌ಸೆಟ್‌ ಸ್ಥಳಕ್ಕೆ ಮಂಗಳವಾರ ರಾತ್ರಿಯೇ ನೀರು ನುಗ್ಗಿತ್ತು. ಅದರಿಂದ ವಿದ್ಯುತ್‌ ಮೋಟಾರ್‌ಗಳನ್ನು ಎತ್ತರಕ್ಕೆ ಎತ್ತಿ ಕಟ್ಟಲಾಗಿದೆ, ರೂಮಿನೊಳಗೆ ನೀರು ಹೊಕ್ಕು ವಿದ್ಯುತ್‌ ಸಂಪರ್ಕದ ಬೋರ್ಡಿಗೂ ಹಾನಿಯಾಗುವುದು ಎಂದು ವಿದ್ಯುತ್‌ ಸಂಪರ್ಕವನ್ನೆ ಕಡಿತಗೊಳಿಸಲಾಗಿದೆ.

ಕಣ್ಣಿಗೆ ನಿದ್ದೆ ಇಲ್ಲ : ‘20 ದಿನಗಳಿಂದ ನದಿ ನಿರಂತರವಾಗಿ ಹರಿಯುತ್ತಿದೆ, ಯಾವಾಗ ನೀರು ಹೆಚ್ಚು ಬರಬಹುದು ಅಥವಾ ಕಡಿಮೆಯಾಗಬಹುದು ಎಂದು ಕಣ್ಣಿಗೆ ನಿದ್ದೆಯಿಲ್ಲದೇ ಹಗಲು–ರಾತ್ರಿ ಪಂಪ್‌ಸೆಟ್ ಕಾಯುವುದೇ ಕೆಲಸವಾಗಿದೆ’ ಎಂದು ಪಂಪ್‌ ಆಪರೇಟರ್‌ ಅಬರ್‌ ತಿಳಿಸಿದರು.

‘ನದ್ಯಾಗ ನೀರು ಅದವಾ ಗದ್ದೆಗೆ ನೀರು ಇಲ್ಲದಂಗಾಗೈತಿ, ನದಿಗೆ ನೀರು ಹೆಚ್ಚು ಬಿಟ್ಟಾರ. ಪಂಪ್‌ಸೆಟ್‌ಗಳೆಲ್ಲಾ ಬಿಚ್ಚಿಟ್ಟೀವಿ, ಮಳೆನೂ ಇಲ್ಲಾ. ನೀರು ಇಲ್ಲಾ. ಏನು ಮಾಡೋದು’ ಎಂದು ರೈತ ಬಿ.ಶಂಭನಗೌಡ ಅಳಲು ತೋಡಿಕೊಂಡರು.

‘ನಮ್ಮ ಪಂಪ್‌ಸೆಟ್‌ನ್ಯಾಗ ಇನ್ನೂ ಗದ್ದೆ ಹಚ್ಚಾವು ಅದವು. ನದಿ ನೀರು ಕಡಿಮೆ ಆದ ಮೇಲೆ ಪಂಪ್‌ಸೆಟ್‌ ಜೋಡಿಸಿ ಭತ್ತದ ಗದ್ದೆಗಳಿಗೆ ನೀರು ಹರಿಸಬೇಕು’ ಎಂದು ಗೌಡರು ಹೇಳಿದರು.

***
ಮೂರು ವರ್ಷಗಳಿಂದ ನದಿಗೆ ನೀರೇ ಬಂದಿದ್ದಿಲ್ಲ. ಈ ವರ್ಷ 20 ದಿನಗಳಿಂದ ನದಿ ತುಂಬಿ ಹರಿತೈತಿ, ಪಂಪ್‌ಸೆಟ್‌ ಮುಳುಗಿದ್ದರಿಂದ ಗದ್ದೆಗಳಿಗೆ ನೀರು ಹರಿಸಲು ಆಗುತ್ತಿಲ್ಲ
–ರೈತ ವಿ.ಜಂಬನಗೌಡ, ಇಬ್ರಾಂಪುರ
***

ನದಿ ದಂಡೆಯ ತಗ್ಗು ಪ್ರದೇಶದಲ್ಲಿರುವ ಪಂಪ್‌ಸೆಟ್‌ಗಳಿಗೆ ಮತ್ತು ಭತ್ತದ ಗದ್ದೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ.
-ಎಂ.ಸುನೀತಾ ಸಿರುಗುಪ್ಪ, ತಹಶೀಲ್ದಾರ್‌

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !