ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಟಿ.ಬಿ. ಡ್ಯಾಂ ನಿಲ್ದಾಣ ಅಭಿವೃದ್ಧಿ

ಸೆಪ್ಟೆಂಬರ್‌ 15ರಿಂದ ಹೊಸಪೇಟೆ–ಕೊಟ್ಟೂರು ನಡುವೆ ಪ್ಯಾಸೆಂಜರ್‌ ರೈಲು
Last Updated 22 ಆಗಸ್ಟ್ 2019, 11:51 IST
ಅಕ್ಷರ ಗಾತ್ರ

ಹೊಸಪೇಟೆ: ನಗರದಿಂದ ಕೊಟ್ಟೂರಿಗೆ ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕರ ರೈಲು ಓಡಿಸುವುದು ಖಚಿತವಾಗಿದ್ದರಿಂದ ಆ ಭಾಗದ ವ್ಯಾಪ್ತಿಯಲ್ಲಿ ಬರುವ ಇಲ್ಲಿನ ತುಂಗಭದ್ರಾ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

1990ರಲ್ಲಿ ಹೊಸಪೇಟೆ–ಕೊಟ್ಟೂರು–ಸ್ವಾಮಿಹಳ್ಳಿ ನಡುವೆ ಮೀಟರ್‌ ಗೇಜ್‌ ಇತ್ತು. ಆ ಸಂದರ್ಭದಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲು ಸಂಚರಿಸುತ್ತಿದ್ದವು. 1995ರಲ್ಲಿ ಈ ಮಾರ್ಗವನ್ನು ಬ್ರಾಡ್‌ಗೇಜ್‌ ಆಗಿ ಬದಲಾಯಿಸಲಾಗಿತ್ತು. ಆದರೆ, ಎಂದಿನಂತೆ ಸರಕು ಸಾಗಣೆ ರೈಲು ಸಂಚರಿಸುತ್ತಿವೆ. ಆದರೆ, ಅಂದು ಸ್ಥಗಿತಗೊಳಿಸಿದ್ದ ಪ್ರಯಾಣಿಕರ ರೈಲು ಎರಡು ದಶಕಗಳಾದರೂ ಆರಂಭವಾಗಿರಲಿಲ್ಲ.

ಹೊಸಪೇಟೆ ಹಾಗೂ ಕೊಟ್ಟೂರು ಭಾಗದ ಜನ ಸತತ ಹೋರಾಟದ ಫಲವಾಗಿ ರೈಲ್ವೆ ಇಲಾಖೆಯು ಸೆಪ್ಟೆಂಬರ್‌ 15ರಿಂದ ಪ್ರಯಾಣಿಕರ ರೈಲು ಓಡಿಸುವ ಭರವಸೆ ನೀಡಿದೆ. ಇಷ್ಟು ದಿನ ಹೆಸರಿಗಷ್ಟೇ ತುಂಗಭದ್ರಾ ರೈಲು ನಿಲ್ದಾಣವಿತ್ತು. ಆ ಮಾರ್ಗದಲ್ಲಿ ಕೇವಲ ಗೂಡ್ಸ್‌ ರೈಲುಗಳು ಸಂಚರಿಸುತ್ತಿದ್ದವು. ಶೀಘ್ರದಲ್ಲೇ ಪ್ಯಾಸೆಂಜರ್‌ ರೈಲು ಓಡಾಟ ನಡೆಸಲಿದ್ದು, ಅದಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನು ನಿಲ್ದಾಣದಲ್ಲಿ ಕಲ್ಪಿಸುವ ಕೆಲಸ ಭರದಿಂದ ನಡೆದಿದೆ.

ರೈಲು ನಿಲ್ದಾಣದಲ್ಲಿ ಸದ್ಯ ಪ್ಲಾಟ್‌ಫಾರಂ ನಿರ್ಮಿಸುವ ಕೆಲಸ ನಡೆದಿದೆ. ನಿಲ್ದಾಣದ ಸುತ್ತಮುತ್ತ ಬೆಳೆದು ನಿಂತಿದ್ದ ಪೊದೆಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿದೆ. ಈಗಾಗಲೇ ಒಂದು ಬದಿಯಲ್ಲಿ ಅಪಾರ ಪ್ರಮಾಣದಲ್ಲಿ ಮಣ್ಣು ಸುರಿದು ಸಮತಟ್ಟುಗೊಳಿಸಲಾಗುತ್ತಿದೆ. ರೈಲು ಹಳಿಗೆ ಹೊಂದಿಕೊಂಡಂತೆ ಎತ್ತರದ ಗೋಡೆ ನಿರ್ಮಿಸಲಾಗಿದೆ. ಅದಾದ ಬಳಿಕ ಪ್ಲಾಸ್ಟರ್‌, ಕಟ್ಟೆಯ ಮೇಲೆ ಕಲ್ಲುಗಳನ್ನು ಹಾಸಲಾಗುತ್ತದೆ. ಬಳಿಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ರೈಲ್ವೆ ಇಲಾಖೆಯ ಸ್ಥಳೀಯ ಅಧಿಕಾರಿ ಪ್ರಕಾರ, ‘ಎರಡು ವಾರದೊಳಗೆ ಇಲಾಖೆಯ ಉನ್ನತ ಅಧಿಕಾರಿಗಳು ಬಂದು ಎಲ್ಲ ಪರಿಶೀಲನೆ ನಡೆಸುವರು. ಅದಾದ ಬಳಿಕ ರೈಲು ಓಡಾಟಕ್ಕೆ ಮುಹೂರ್ತ ನಿಗದಿಗೊಳಿಸುವರು. ಅಲ್ಲಿಯ ವರೆಗೆ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ಸತತ ಹೋರಾಟದ ನಂತರ ಹೊಸಪೇಟೆ–ಕೊಟ್ಟೂರು ಮಾರ್ಗದಲ್ಲಿ ಪ್ಯಾಸೆಂಜರ್‌ ರೈಲು ಓಡಾಟಕ್ಕೆ ಸಿದ್ಧತೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಈಗ ಮತ್ತೆ ತಡ ಮಾಡುವುದು ಬೇಡ. ರೈಲ್ವೆ ಹಿರಿಯ ಅಧಿಕಾರಿಗಳು ಈಗಾಗಲೇ ಭರವಸೆ ಕೊಟ್ಟಿರುವಂತೆ ಸೆಪ್ಟೆಂಬರ್‌ 15ರಂದು ರೈಲು ಓಡಿಸಬೇಕು. ಯಾವುದೇ ಕುಂಟು ನೆಪ ಹೇಳಬಾರದು’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌ ಆಗ್ರಹಿಸಿದರು.

‘ಹೊಸಪೇಟೆ–ಕೊಟ್ಟೂರು ಭಾಗದಲ್ಲಿ ಪ್ರಯಾಣಿಕರ ರೈಲು ಓಡಾಡುವುದರಿಂದ ಜನರ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಪ್ರಯಾಣಿಸುವ ಅವಧಿ ಕಡಿಮೆಯಾಗಲಿದೆ. ಅನೇಕ ಊರುಗಳಿಗೆ ಸಂಪರ್ಕ ಬೆಸೆದಂತಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT