ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ ಅಂತ್ಯಕ್ಕೆ 159 ಶೌಚಾಲಯಗಳ ನಿರ್ಮಾಣ-ಬಿಬಿಎಂಪಿ

ಬಿಬಿಎಂಪಿ 8 ವಲಯಗಳಲ್ಲಿ 200 ಶೌಚಾಲಯ ಮೇಲ್ದರ್ಜೆಗೆ
Published 21 ಜನವರಿ 2024, 5:27 IST
Last Updated 21 ಜನವರಿ 2024, 5:27 IST
ಅಕ್ಷರ ಗಾತ್ರ

ಬೆಂಗಳೂರು: ನಗರಲ್ಲಿ ಹೊಸದಾಗಿ 159 ಸಾರ್ವಜನಿಕ ಶೌಚಾಲಯಗಳನ್ನು ಆಗಸ್ಟ್‌ ಅಂತ್ಯಕ್ಕೆ ನಿರ್ಮಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ₹46 ಕೋಟಿ ವೆಚ್ಚದ ಟೆಂಡರ್‌ ಆಹ್ವಾನಿಸಿದೆ.

ಹೊಸದಾಗಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನವೆಂಬರ್‌ನಲ್ಲಿ ಸಮಿತಿ ರಚಿಸಲಾಗಿತ್ತು. ನಗರದಲ್ಲಿ ಈಗಿರುವ 360 ಶೌಚಾಲಯಗಳ ಜೊತೆಗೆ ಹೊಸದಾಗಿ 225 ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು.

ಮೊದಲ ಹಂತದಲ್ಲಿ 159 ಹೊಸ ಶೌಚಾಲಯ ನಿರ್ಮಾಣ ಹಾಗೂ ಈಗಿರುವ 200 ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಜನವರಿ ಅಂತ್ಯದವರೆಗೆ ಟೆಂಡರ್‌ ಸಲ್ಲಿಸಲು ಅವಕಾಶವಿದ್ದು, ಫೆಬ್ರುವರಿ ಮಧ್ಯಭಾಗದಲ್ಲಿ ಕಾರ್ಯಾದೇಶ ನೀಡಲು ಯೋಜಿಸಲಾಗಿದೆ. ನಂತರದ ಆರು ತಿಂಗಳಲ್ಲಿ ಹೊಸ ಶೌಚಾಲಯಗಳ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಗಳು ಮುಗಿಯಲಿವೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಂಜಿನಿಯರ್‌ಗಳು ತಿಳಿಸಿದರು.

‘ಸ್ವಚ್ಛ ಭಾರತ್, ಶುಭ್ರ ಬೆಂಗಳೂರು, ನಗರೋತ್ಥಾನ ಮತ್ತು ಬಿಬಿಎಂಪಿ ಅನುದಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಶೌಚಾಲಯ ಬಳಕೆಗೆ ಶುಲ್ಕ ವಸೂಲಿ ಮಾಡಿ ನಿರ್ವಹಣೆ ಮಾಡಲಾಗುತ್ತದೆ. ‌ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಶೌಚಾಲಯ ನಿರ್ಮಿಸಲು ಹಲವು ಸಂಸ್ಥೆಗಳು ಮುಂದೆ ಬಂದಿದ್ದು ಅವುಗಳ ಪ್ರಸ್ತಾಪವನ್ನು ಸಮಿತಿ ಮುಂದಿರಿಸಿ ಸಮ್ಮತಿ ಪಡೆದುಕೊಳ್ಳಲಾಗುತ್ತದೆ. ನಂತರ ಅವುಗಳ ನಿರ್ಮಾಣ– ನಿರ್ವಹಣೆಗೆ ಅನುಮತಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಹೊಸದಾಗಿ 159 ಶೌಚಾಲಯ ನಿರ್ಮಿಸಲು ಇದೀಗ ಟೆಂಡರ್‌ ಕರೆಯಲಾಗಿದ್ದು, ಇನ್ನೂ ಹಲವೆಡೆ ನಿರ್ಮಾಣ ಮಾಡಲಾಗುತ್ತದೆ. ಹೊಸ ಶೌಚಾಲಯ ನಿರ್ಮಾಣ ಮಾಡುವ ಅವಕಾಶವನ್ನೂ ಈ ಟೆಂಡರ್‌ನಲ್ಲೇ ನೀಡಲಾಗಿದ್ದು, ಸ್ಥಳಾವಕಾಶವಿದ್ದರೆ ಇದೇ ಟೆಂಡರ್‌ನಡಿ ಇನ್ನೂ ಹಲವು ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ’ ಎಂದರು.

ಇ ಶೌಚಾಲಯ ಆರಂಭ ಶೀಘ್ರ: ನಗರದಲ್ಲಿರುವ 229 ಇ–ಶೌಚಾಲಯಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ. ನಿರ್ವಹಣೆಗೆ ಎರಡು ಬಾರಿ ಟೆಂಡರ್‌ ಆಹ್ವಾನಿಸಿದ್ದರೂ ಯಾರೂ ಮುಂದೆ ಬಂದಿರಲಿಲ್ಲ. ಮೂರನೇ ಬಾರಿಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ತಾಂತ್ರಿಕ ಬಿಡ್‌ ತೆರೆಯಲಾಗಿದೆ. ಶೀಘ್ರ ಕಾರ್ಯಾದೇಶ ನೀಡಲಾಗುತ್ತದೆ. ಇದಲ್ಲದೆ, 100 ಶಿ–ಶೌಚಾಲಯ ನಿರ್ಮಾಣಕ್ಕೆ ಮತ್ತೆ ಟೆಂಡರ್‌ ಕರೆಯಲಾಗುವುದು ಎಂದು ಎಂಜಿನಿಯರ್‌ಗಳು ತಿಳಿಸಿದರು.

ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿರುವ ಶೌಚಾಲಯಗಳನ್ನೂ ಸಾರ್ವಜನಿಕರ ಬಳಕೆಗೆ ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT